ಪ್ಯಾರಿಸ್ ಒಲಿಂಪಿಕ್ಸ್: ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತ-ಪಾಕ್ ಪೈಪೋಟಿ!
ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ 11ನೇ ದಿನವಾದ ಮಂಗಳವಾರ ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ಮೇಲೆ ಇಡೀ ದೇಶ ಭರವಸೆ ಇಟ್ಟಿದ್ದು, 'ಚಿನ್ನದ ಹುಡುಗ' ನೀರಜ್ ಮತ್ತು ದೇಶದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಸ್ಟಾರ್ ಅಥ್ಲೀಟ್ ಅರ್ಷದ್ ನದೀಮ್ ನಡುವಿನ ಹೋರಾಟ ಕುತೂಹಲ ಕೆರಳಿಸಿದೆ.
ಈ ಕುತೂಹಲಕಾರಿ ಹೋರಾಟದ ಬಗ್ಗೆ ಭಾರತದ ಮತ್ತೊಬ್ಬ ಜಾವೆಲಿನ್ ಥ್ರೋ ಪಟು ಕಿಶೋರ್ ಜೆನಾ ಮಾಹಿತಿ ಹಂಚಿಕೊಂಡಿದ್ದಾರೆ. ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಜೆನಾ ಎ ಗುಂಪಿನಲ್ಲಿ ಸ್ಪರ್ಧಿಸಿದರೆ, ಚೋಪ್ರಾ ಹಾಗೂ ನದೀಮ್ ಬಿ ಗುಂಪಿನಲ್ಲಿದ್ದಾರೆ. ಫೈನಲ್ ಗೆ ಅರ್ಹತೆ ಪಡೆಯಬೇಕಾದರೆ ಅಥ್ಲೀಟ್ ಗಳು 84.00 ಮೀಟರ್ ಗಡುವನ್ನು ದಾಟಬೇಕಿದೆ.
ಮೊದಲ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಜೆನಾ, ಜಾಗತಿಕ ವೇದಿಕೆಯಲ್ಲಿ ತಮ್ಮೆಲ್ಲ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಸಜ್ಜಾಗಿದ್ದು, ಉತ್ತಮ ಸಾಧನೆಯ ವಿಶ್ವಾಸದಲ್ಲಿದ್ದಾರೆ. ಪ್ರಸ್ತುತ ಒಲಿಂಪಿಕ್ ಮತ್ತು ವಿಶ್ವಚಾಂಪಿಯನ್ ಆಗಿರುವ ಚೋಪ್ರಾ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು, ಚಿನ್ನದ ಪದಕ ಉಳಿಸಿಕೊಳ್ಳುವ ವಿಶ್ವಾಸ ಅವರದ್ದು. ಪ್ರಸಕ್ತ ಋತುವಿನಲ್ಲಿ ಅವರ ಅತ್ಯುತ್ತಮ ಸಾಧನೆ ಅಂದರೆ 88.36 ಮೀಟರ್ ದೂರವನ್ನು ಪ್ಯಾರಿಸ್ ಒಲಿಂಪಿಕ್ಸ್ ಗೆ ಮುನ್ನ ಅವರು ಸಾಧಿಸಿದ್ದರು.
ಇದೀಗ ಸ್ಪರ್ಧೆಗೆ ಮತ್ತಷ್ಟು ರಂಗೇರಿರುವುದು ಪಾಕಿಸ್ತಾನದ ಸ್ಟಾರ್ ಅಥ್ಲೀಟ್ ಅರ್ಷದ್ ನದೀಮ್ ಅವರಿಂದ. ಕ್ರಿಕೆಟ್ ನಂತೆಯೇ ಜಾವೆಲಿನ್ ಸ್ಪರ್ಧೆಯಲ್ಲೂ ಭಾರತ- ಪಾಕ್ ಕದನವನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇಬ್ಬರ ನಡುವಿನ ಪೈಪೋಟಿ ಕುತೂಹಲ ಕೆರಳಿಸಿದೆ. ಕಳೆದ ಕೆಲ ವರ್ಷಗಳಲ್ಲಿ ಅರ್ಷದ್ ಹಾಗೂ ನೀರಜ್ ರೋಚಕ ಹೋರಾಟಗಳಲ್ಲಿ ತೊಡಗಿದ್ದು, ಇಬ್ಬರ ಸಾಧನೆಯೂ ಹೊಸ ಎತ್ತರಕ್ಕೇರಿದೆ. ಇದೀಗ ಈ ಇಬ್ಬರ ನಡುವಿನ ಹೋರಾಟಕ್ಕೆ ಒಲಿಂಪಿಕ್ ಕೂಟ ವೇದಿಕೆ ಒದಗಿಸಿದೆ.
ಅಭಿಮಾನಿಗಳ ನಿರೀಕ್ಷೆ ಬಗ್ಗೆ ಪ್ರತಿಕ್ರಿಯಿಸಿರುವ ಏಷ್ಯನ್ ಗೇಮ್ಸ್ ಬೆಳ್ಳಿಪದಕ ವಿಜೇತ ನದೀಮ್, "ಇಲ್ಲ. ಅಂಥದ್ದೇನೂ ಇಲ್ಲ. ಇದು ಒಲಿಂಪಿಕ್ಸ್ ಆಗಿರುವುದರಿಂದ ಹಲವು ದೇಶಗಳು ಪಾಲ್ಗೊಳ್ಳುತ್ತಿವೆ. ನಾವು ಹಾಗೆ ಭಾವಿಸಿಲ್ಲ. ಅಂಥದ್ದೇನೂ ಇಲ್ಲ. ನಾವು ಅವರನ್ನು ಭೇಟಿಯಾದಾಗ ಅದು ಸ್ನೇಹಪರವಾಗಿರುತ್ತದೆ. ನಾನು ಕೂಡಾ ಅವರನ್ನು ಭೇಟಿ ಮಾಡುತ್ತೇನೆ. ಅಂಥ ಉದ್ದೇಶವಿಲ್ಲ" ಎಂದು ಹೇಳಿದ್ದಾರೆ.