ಪ್ಯಾರಿಸ್ ಒಲಿಂಪಿಕ್ಸ್‌ | ಅರ್ಜೆಂಟೀನ ವಿರುದ್ಧ ರೋಚಕ ಡ್ರಾ ಸಾಧಿಸಿದ ಭಾರತ ಹಾಕಿ ತಂಡ

Update: 2024-07-29 16:42 GMT

PC : PTI 

ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ, ಸೋಮವಾರ ನಡೆದ ಭಾರತ ಮತ್ತು ಅರ್ಜೆಂಟೀನ ನಡುವಿನ ಬಿ ಬಣದ ಪುರುಷರ ಹಾಕಿ ಪಂದ್ಯವು 1-1ರಿಂದ ಡ್ರಾಗೊಂಡಿದೆ. ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಪಂದ್ಯದ ಕೊನೆಯ ಕ್ಷಣಗಳಲ್ಲಿ ಬಾರಿಸಿದ ಗೋಲು ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿತು. ಭಾರತದ ಗುಂಪು ಹಂತದ ಎರಡನೇ ಪಂದ್ಯದಲ್ಲಿ, ತಂಡದ ಕೊನೆಯ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಹುಟ್ಟಿತು.

ಪಂದ್ಯದಲ್ಲಿ ಅರ್ಜೆಂಟೀನವು ಆರಂಭದಲ್ಲೇ ಮುನ್ನಡೆ ಗಳಿಸಿತ್ತು. 22ನೇ ನಿಮಿಷದಲ್ಲಿ ಲೂಕಸ್ ಮಾರ್ಟಿನೇಝ್ ಬಾರಿಸಿದ ಗೋಲು ಭಾರತದ ಮೇಲೆ ಒತ್ತಡ ಹೇರಿತು.

ಈ ಫಲಿತಾಂಶವು ಪಂದ್ಯಾವಳಿಯಲ್ಲಿ ಭಾರತದ ಆಶೆಯನ್ನು ಜೀವಂತವಾಗಿ ಇರಿಸಿದೆ. ಪಂದ್ಯವು ನಿಧಾನ ಗತಿಯಲ್ಲಿ ಆರಂಭಗೊಂಡಿತು. ಮುಂದಕ್ಕೆ ಸಾಗುತ್ತಿದ್ದಂತೆಯೇ ಪಂದ್ಯವು ಬಿರುಸು ಪಡೆದುಕೊಂಡಿತು.

ಭಾರತದ ಮಿಡ್‌ಫೀಲ್ಡ್‌ನ ನಿರ್ವಹಣೆ ನಿರಾಶಾದಾಯಕವಾಗಿತ್ತು. ಉಪನಾಯಕ ಹಾರ್ದಿಕ್ ಸಿಂಗ್ ಮತ್ತು ಮನ್‌ಪ್ರೀತ್ ಸಿಂಗ್ ಮುಂತಾದ ಪ್ರಮುಖ ಆಟಗಾರರು ಪಂದ್ಯದುದ್ದಕ್ಕೂ ನಿರಾಶಾದಾಯಕ ಪ್ರದರ್ಶನ ನೀಡಿದರು.

ಭಾರತೀಯ ಆಟಗಾರರು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ದಯನೀಯ ವೈಫಲ್ಯ ಕಂಡರು. ಪಂದ್ಯದಲ್ಲಿ ತಾವು ಗಳಿಸಿದ 10 ಪೆನಾಲ್ಟಿ ಕಾರ್ನರ್ ಅವಕಾಶಗಳ ಪೈಕಿ ಕೇವಲ ಒಂದನ್ನು ಪರಿವರ್ತಿಸುವಲ್ಲಿ ಅವರು ಯಶಸ್ವಿಯಾದರು.

ಭಾರತವು ಮಂಗಳವಾರ ಐರ್‌ಲ್ಯಾಂಡ್ ತಂಡದ ವಿರುದ್ಧ ಆಡಲಿದೆ. ನಂತರದ ಗುಂಪು ಹಂತದ ಪಂದ್ಯಗಳಲ್ಲಿ ಅದು ಆಸ್ಟ್ರೇಲಿಯ ಮತ್ತು ಹಾಲಿ ಚಾಂಪಿಯನ್ ಬೆಲ್ಜಿಯಮ್‌ನ್ನು ಎದುರಿಸಲಿದೆ.

ಎರಡು ಗುಂಪುಗಳ ತಲಾ ಅಗ್ರ ನಾಲ್ಕು ತಂಡಗಳು ಕ್ವಾರ್ಟರ್‌ಫೈನಲ್ ತಲುಪಲಿವೆ. ಶನಿವಾರ ನಡೆದ ಪಂದ್ಯದಲ್ಲಿ ಭಾರತವು ನ್ಯೂಝಿಲ್ಯಾಂಡ್ ತಂಡವನ್ನು ಸೋಲಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News