ಪ್ಯಾಟ್ ಕಮಿನ್ಸ್ ಎರಡನೇ ಅತ್ಯಂತ ದುಬಾರಿ ಆಟಗಾರ

Update: 2023-12-19 17:39 GMT

ಪ್ಯಾಟ್ ಕಮಿನ್ಸ್ | Photo: PTI  

ದುಬೈ: ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಮಂಗಳವಾರ ನಡೆದ ಐಪಿಎಲ್-2024ರ ಹರಾಜಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದೊಂದಿಗೆ 20.50 ಕೋಟಿ ರೂ.ಗೆ ಸಹಿ ಹಾಕುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು.

20.50 ಕೋಟಿ ರೂ.ಗೆ ಹರಾಜಾದ ಕಮಿನ್ಸ್ ಐಪಿಎಲ್ನಲ್ಲಿ ಅತ್ಯಂತ ದುಬಾರಿ ಆಟಗಾರನಾಗಿರುವ ಸ್ಯಾಮ್ ಕರನ್ ದಾಖಲೆಯನ್ನು ಮುರಿದರು. ಕರನ್ ಕಳೆದ ವರ್ಷದ ಐಪಿಎಲ್ ಹರಾಜಿನಲ್ಲಿ 18.5 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದರು.

ಕಮಿನ್ಸ್ ದಾಖಲೆ ಮೊತ್ತಕ್ಕೆ ಹರಾಜಾದ ಕೆಲವೇ ಗಂಟೆಗಳಲ್ಲಿ ಸಹ ಆಟಗಾರ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂ.ಗೆ ಕೆಕೆಆರ್ ತೆಕ್ಕೆಗೆ ಸೇರಿ ಹೊಸ ದಾಖಲೆ ನಿರ್ಮಿಸಿದರು.

ಕಮಿನ್ಸ್ರನ್ನು ಸೆಳೆದುಕೊಳ್ಳಲು ಸಿಎಸ್ಕೆ, ಮುಂಬೈ, ಆರ್ಸಿಬಿ ಬಿಡ್ಡಿಂಗ್ ವಾರ್ ನಡೆಸಿದರು. ಅಂತಿಮವಾಗಿ ಹೈದರಾಬಾದ್ ಬಿಡ್ ವಾರ್ನಲ್ಲಿ ಜಯಶಾಲಿಯಾಯಿತು.

ವೇಗದ ಬೌಲರ್ ಕಮಿನ್ಸ್ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳನ್ನು ಪ್ರತಿನಿಧಿಸಿದ್ದರು. ಕೆಕೆಆರ್ 2020ರಲ್ಲಿ ಆಟಗಾರರ ಹರಾಜಿನಲ್ಲಿ 15.50 ಕೋಟಿ ರೂ.ಗೆ ಕಮಿನ್ಸ್ರನ್ನು ಖರೀದಿಸಿತ್ತು. ಎರಡು ವರ್ಷಗಳ ನಂತರ 7.25 ಕೋಟಿ ರೂ.ಗೆ ಕಮಿನ್ಸ್ರನ್ನು ಮತ್ತೆ ತಂಡಕ್ಕೆ ಸೇರಿಸಿಕೊಂಡಿತ್ತು.

ಕಮಿನ್ಸ್ 2022ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ ಪರವಾಗಿ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಈ ಮೂಲಕ ಐಪಿಎಲ್ನಲ್ಲಿ ಜಂಟಿ ಎರಡನೇ ವೇಗದ ಅರ್ಧಶತಕ ಸಿಡಿಸಿದ್ದರು.

ಐಪಿಎಲ್ನಲ್ಲಿ 42 ಪಂದ್ಯಗಳನ್ನು ಆಡಿರುವ ಕಮಿನ್ಸ್ 8.54ರ ಇಕಾನಮಿ ರೇಟ್ನಲ್ಲಿ ಒಟ್ಟು 45 ವಿಕೆಟ್‌ ಗಳನ್ನು ಪಡೆದಿದ್ದಾರೆ. 359 ರನ್ ಕೂಡ ಗಳಿಸಿದ್ದಾರೆ.

ಕಮಿನ್ಸ್ ಈ ವರ್ಷದ ಜೂನ್ನಲ್ಲಿ ಆಸ್ಟ್ರೇಲಿಯವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪ್ರಶಸ್ತಿ ಗೆಲ್ಲಲು ನೇತೃತ್ವವಹಿಸಿದ್ದರು. ಆ ನಂತರ ಇಂಗ್ಲೆಂಡ್‌ ನಲ್ಲಿ ಆ್ಯಶಸ್ ಕಪ್ನ್ನು ಉಳಿಸಿಕೊಳ್ಳಲು ನೆರವಾಗಿದ್ದರು. ಕಳೆದ ತಿಂಗಳು ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತವನ್ನು ಮಣಿಸಿ ಆಸೀಸ್ ದಾಖಲೆಯ 6ನೇ ವಿಶ್ವಕಪ್ ಜಯಿಸುವಲ್ಲಿಯೂ ಮುಖ್ಯ ಪಾತ್ರವಹಿಸಿದ್ದರು.

ಭಾರತದ ಟೆಸ್ಟ್ ಪ್ರವಾಸ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್, ಆ್ಯಶಸ್ ಹಾಗು ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಕೆಲಸದ ಒತ್ತಡವನ್ನು ಉಲ್ಲೇಖಿಸಿ ಕಮಿನ್ಸ್ ಈ ವರ್ಷದ ಐಪಿಎಲ್ ಸ್ಫರ್ಧಾವಳಿಯಲ್ಲಿ ಕೆಕೆಆರ್ ತಂಡದಲ್ಲಿ ಆಡಿರಲಿಲ್ಲ.

2024ರ ಐಪಿಎಲ್ ಟಿ-20 ವಿಶ್ವಕಪ್ ಗೆ ಉತ್ತಮ ತಯಾರಿಯಾಗಲಿದೆ ಎಂದು ಕಮಿನ್ಸ್ ಹೇಳಿದ್ದಾರೆ. ಐಪಿಎಲ್ ಫೈನಲ್ ಮುಕ್ತಾಯದ ಕೆಲವೇ ದಿನಗಳಲ್ಲಿ ವಿಶ್ವಕಪ್ ಆರಂಭವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News