ಇನ್ನು ಪ್ರತಿ ಟೆಸ್ಟ್‌ ಪಂದ್ಯಕ್ಕೆ ಭಾರತೀಯ ಕ್ರಿಕೆಟಿಗರಿಗೆ ದೊರೆಯಲಿದೆ ರೂ. 45 ಲಕ್ಷ ಸಂಭಾವನೆ!

Update: 2024-03-09 11:40 GMT

Photo: X/@bcci

ಹೊಸದಿಲ್ಲಿ: ಟೆಸ್ಟ್‌ ಕ್ರಿಕೆಟ್‌ಗೆ ಆದ್ಯತೆ ನೀಡಲಾಗುವುದು ಎಂಬ ತನ್ನ ಮಾತಿನಂತೆ ನಡೆದುಕೊಂಡಿರುವ ಬಿಸಿಸಿಐ ತಲಾ ಪಂದ್ಯಕ್ಕೆ ಆಟಗಾರರಿಗೆ ನೀಡುವ ಸಂಭಾವನೆಯನ್ನು ಈಗಿನ ರೂ. 15 ಲಕ್ಷದಿಂದ ರೂ. 45 ಲಕ್ಷಕ್ಕೆ ಏರಿಸಿದೆ. ಪ್ರತಿ ಕ್ರಿಕೆಟ್‌ ಋತುವಿಗೆ ಕನಿಷ್ಠ ಏಳು ಟೆಸ್ಟ್‌ ಪಂದ್ಯಗಳನ್ನು ಆಡುವ ಆಟಗಾರರಿಗೆ ಈ ಸಂಭಾವನೆ ಏರಿಕೆ ಅನ್ವಯವಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಇಂದು ತಿಳಿಸಿದ್ದಾರೆ.

ಈ ಹೊಸ ನೀತಿಯನ್ವಯ ಒಂದು ಕ್ರಿಕೆಟ್‌ ಋತುವಿನಲ್ಲಿ 10 ಟೆಸ್ಟ್‌ ಪಂದ್ಯಗಳನ್ನಾಡುವ ಕ್ರಿಕೆಟಿಗನಿಗೆ ಬರೋಬ್ಬರಿ ರೂ 4.50 ಕೋಟಿ ಸಂಭಾವನೆ ದೊರೆಯಲಿದೆ. ಇದು ವಾರ್ಷಿಕ ಕೇಂದ್ರೀಯ ಕಾಂಟ್ರ್ಯಾಕ್ಟ್‌ ಹೊಂದಿರುವುದಕ್ಕೆ ನೀಡಲಾಗುವ ಖಾತರಿ ರಿಟೈನರ್‌ ಫೀ ಹೊರತಾಗಿದೆ.

ಹಿಂದಿನ ದಿನಾಂಕ್ಕೆ ಅನ್ವಯವಾಗುವಂತೆ ಈ ಹೆಚ್ಚುವರಿ ಸಂಭಾವನೆ ದೊರೆಯಲಿದ್ದು ಇದರಂತೆ 2022-23 ಟೆಸ್ಟ್‌ ಕ್ರಿಕೆಟ್‌ ಋತುವಿನೊಂದಿಗೆ ಇದು ಆರಂಭವಾಗಲಿದೆ.

ಟೆಸ್ಟ್‌ ಪಂದ್ಯಕ್ಕೆ ಆದ್ಯತೆ ನೀಡಬೇಕೆಂಬ ಬಿಸಿಸಿಐ ಸೂಚನೆಯ ಹೊರತಾಗಿಯೂ ಕ್ರಿಕೆಟಿಗರಾದ ಇಶಾನ್‌ ಕಿಶನ್‌, ಶ್ರೇಯಸ್‌ ಐಯ್ಯರ್‌ ಮತ್ತು ದೀಪಕ್‌ ಚಾಹರ್‌ ರಣಜಿ ಕ್ರಿಕೆಟ್‌ ಕೈಬಿಟ್ಟು ಐಪಿಎಲ್‌ ತಂಡಗಳೊಂದಿಗೆ ತರಬೇತಿ ಮುಂದುವರಿಸಿದ ನಂತರ ಸಂಭಾವನೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಈಗ ಇರುವ ನಿಯಮದಂತೆ ಪ್ರತಿ ಟೆಸ್ಟ್‌ ಪಂದ್ಯಕ್ಕೆ ಆಟಗಾರರೊಬ್ಬರಿಗೆ ರೂ. 15 ಲಕ್ಷ ಹಾಗೂ ಮೀಸಲು ಆಟಗಾರನಿಗೆ ರೂ 7.5 ಲಕ್ಷ ದೊರೆಯುತ್ತದೆ.

ಈಗ ಹೆಚ್ಚುವರಿ ಸಂಭಾವನೆ ಒದಗಿಸುವ ಹೊಸ ಯೋಜನೆಗೆ “ಟೆಸ್ಟ್‌ ಕ್ರಿಕೆಟ್‌ ಪ್ರೋತ್ಸಾಹ ಯೋಜನೆ” ಎಂಬ ಹೆಸರಿಡಲಾಗಿದೆ ಎಂದು ಜಯ್‌ ಶಾ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News