ಪ್ರೊ ಕಬಡ್ಡಿ ಲೀಗ್ | ಪುಣೇರಿ ಪಲ್ಟನ್ ಚಾಂಪಿಯನ್

Update: 2024-03-01 16:42 GMT

Photo: @ProKabaddi

ಹೈದರಾಬಾದ್: ಪ್ರೊ ಕಬಡ್ಡಿ ಲೀಗ್ ಟೂರ್ನಮೆಂಟ್ನಲ್ಲಿ ತನ್ನ ಶ್ರೇಷ್ಠ ಪ್ರದರ್ಶನವನ್ನು ಮುಂದುವರಿಸಿದ ಪುಣೇರಿ ಪಲ್ಟನ್ ತಂಡ ಹರ್ಯಾಣ ಸ್ಟೀಲರ್ಸ್ ತಂಡವನ್ನು 3 ಅಂಕದಿಂದ ರೋಚಕವಾಗಿ ಮಣಿಸಿದೆ. ಈ ಮೂಲಕ ಮೊದಲ ಬಾರಿ ಪ್ರಶಸ್ತಿಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಗಚಿಬೌಲಿಯ ಜಿಎಂಸಿ ಬಾಲಯೋಗಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಪುಣೇರಿ ಪಲ್ಟನ್ 28 ಅಂಕ ಗಳಿಸಿದರೆ, ಇದಕ್ಕೆ ಉತ್ತರವಾಗಿ ಹರ್ಯಾಣ ಸ್ಟೀಲರ್ಸ್ 25 ಅಂಕ ಗಳಿಸಿ ತೀವ್ರ ಪೈಪೋಟಿಯನ್ನು ನೀಡಿತು.

ಪುಣೇರಿ ಪರ ಪಂಕಜ್ ಮೊಹಿತೆ 9 ಅಂಕ ಗಳಿಸಿದರು. ಪರಾಜಿತ ಹರ್ಯಾಣದ ಪರ ಶಿವಂ ಪತಾರೆ 6 ಅಂಕ ಗಳಿಸಿದರು.

ಕಳೆದ ಆವೃತ್ತಿಯ ಪಿಕೆಎಲ್ ಫೈನಲ್‌ ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಸೋಲನುಭವಿಸಿ ರನ್ನರ್ಸ್ ಅಪ್ ಗೆ ತೃಪ್ತಿಪಟ್ಟಿದ್ದ ಪುಣೇರಿ ಈ ಬಾರಿ ತನ್ನ ತಪ್ಪನ್ನು ತಿದ್ದಿಕೊಂಡು ಟ್ರೋಫಿ ಬಾಚಿಕೊಂಡಿದೆ.

ಹರ್ಯಾಣ ವಿರುದ್ಧ ಆಡಿರುವ 15ನೇ ಪಂದ್ಯದಲ್ಲಿ ಪುಣೇರಿ 9ನೇ ಬಾರಿ ಜಯ ಸಾಧಿಸಿ ಹೆಡ್-ಟು-ಹೆಡ್ ನಲ್ಲಿ ತನ್ನ ಉತ್ತಮ ದಾಖಲೆ ಉಳಿಸಿಕೊಂಡಿದೆ.

2024ರ ಪಿಕೆಎಲ್ ನಲ್ಲಿ ಪ್ರಚಂಡ ಪ್ರದರ್ಶನ ನೀಡಿರುವ ಪುಣೇರಿ ಪಲ್ಟನ್ 22 ಲೀಗ್ ಹಂತದ ಪಂದ್ಯಗಳ ನಂತರ 17ರಲ್ಲಿ ಜಯ, 2ರಲ್ಲಿ ಸೋಲು, 3ರಲ್ಲಿ ಡ್ರಾ ಸಾಧಿಸಿ ಒಟ್ಟು 96 ಪಾಯಿಂಟ್ಸ್ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದು ಸೆಮಿ ಫೈನಲ್‌ ಗೆ ಲಗ್ಗೆ ಇಟ್ಟಿತ್ತು. ಮೊದಲ ಸೆಮಿ ಫೈನಲ್‌ ನಲ್ಲಿ ಪಾಟ್ನಾ ಪೈರೇಟ್ಸ್ ತಂಡವನ್ನು 37-21 ಅಂಕದಿಂದ ಸೋಲಿಸಿ ಫೈನಲ್‌ ಗೆ ಲಗ್ಗೆ ಇಟ್ಟಿತ್ತು. 10ನೇ ಆವೃತ್ತಿಯ ಟೂರ್ನಿಯಲ್ಲಿ ಇದೀಗ 19ನೇ ಗೆಲುವು ದಾಖಲಿಸಿ ಪ್ರಶಸ್ತಿಗೆ ಮುತ್ತಿಟ್ಟಿದೆ.

ನಾಯಕ ಅಸ್ಲಂ ಇನಾಂದಾರ್ ಜೊತೆಗೆ ಇಡೀ ತಂಡವು ಯಶಸ್ಸಿಗೆ ಕಾಣಿಕೆ ನೀಡಿದ್ದಾರೆ. ಆಲ್ರೌಂಡರ್ ಮುಹಮ್ಮದ್ರೆಝಾ , ರೈಡರ್ಗಳಾದ ಮೋಹಿತ್ ಗೊಯತ್ ಹಾಗೂ ಪಂಕಜ್ ಮೋಹಿತೆಗೆ ಎಲ್ಲ ಶ್ರೇಯಸ್ಸು ಸಲ್ಲಬೇಕಾಗಿದೆ.

ಮತ್ತೊಂದೆಡೆ ಜೈದೀಪ್ ದಹಿಯಾ ನಾಯಕತ್ವದ ಹರ್ಯಾಣ ಸ್ಟೀಲರ್ಸ್ ತಂಡ ಈ ಋತುವಿನಲ್ಲಿ ಉತ್ತಮ ಪ್ರದರ್ಶನದಿಂದ ಗಮನ ಸೆಳೆದಿತ್ತು. ಹರ್ಯಾಣ ಫೆ.28ರಂದು ನಡೆದಿದ್ದ 2ನೇ ಸೆಮಿ ಫೈನಲ್‌ ನಲ್ಲಿ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 31-27 ಅಂಕದ ಅಂತರದಿಂದ ರೋಚಕವಾಗಿ ಸೋಲಿಸಿತ್ತು.

ಹರ್ಯಾಣ ಲೀಗ್ ಹಂತದಲ್ಲಿ 13ರಲ್ಲಿ ಜಯ, 8ರಲ್ಲಿ ಸೋಲು ಹಾಗೂ ಒಂದರಲ್ಲಿ ಡ್ರಾ ಸಾಧಿಸಿ ಒಟ್ಟು 70 ಅಂಕ ಗಳಿಸಿತು. ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿತ್ತು. 2ನೇ ಎಲಿಮಿನೇಟರ್ ಸುತ್ತಿನಲ್ಲಿ ಗುಜರಾತ್ ಜಯಂಟ್ಸ್ ತಂಡವನ್ನು ಸೋಲಿಸಿ ಸೆಮಿ ಫೈನಲ್‌ ಗೆ ಪ್ರವೇಶಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News