ಪ್ರಧಾನ ಕೋಚ್ ಆಗಿ ರಾಜಸ್ಥಾನ ರಾಯಲ್ಸ್‌ಗೆ ರಾಹುಲ್ ದ್ರಾವಿಡ್ ಮರು ಸೇರ್ಪಡೆ

Update: 2024-09-06 16:39 GMT

Photo : X

ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಪ್ರಧಾನ ಕೋಚ್ ರಾಹುಲ್ ದ್ರಾವಿಡ್‌ ರನ್ನು ತನ್ನ ಪ್ರಧಾನ ಕೋಚ್ ಆಗಿ ನೇಮಿಸಲಾಗಿದೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ ರಾಜಸ್ಥಾನ ರಾಯಲ್ಸ್ ಶುಕ್ರವಾರ ಘೋಷಿಸಿದೆ.

ರಾಜಸ್ಥಾನ ರಾಯಲ್ಸ್ ತಂಡದೊಂದಿಗೆ ಬಹು ವರ್ಷಗಳ ಗುತ್ತಿಗೆಗೆ ಸಹಿ ಹಾಕಿರುವ ದ್ರಾವಿಡ್, ತಕ್ಷಣ ತನ್ನ ಹೊಸ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ.

ಕ್ರಿಕೆಟ್ ತಂತ್ರಗಾರಿಕೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅವರು ತಂಡದ ಕ್ರಿಕೆಟ್ ನಿರ್ದೇಶಕ ಕುಮಾರ ಸಂಗಕ್ಕಾರ ಜೊತೆಗೆ ಕೈಜೋಡಿಸಲಿದ್ದಾರೆ.

51 ವರ್ಷದ ದ್ರಾವಿಡ್ 2011ರಿಂದ 2015ರವರೆಗೆ ಐದು ಋತುಗಳಲ್ಲಿ ತಂಡದ ಜೊತೆಗಿದ್ದರು. ಅವರು 2014ರಲ್ಲಿ ರಾಜಸ್ಥಾನ ರಾಯಲ್ಸ್‌ ನ ಕೋಚ್ ಆಗಿದ್ದರು.

‘‘ಹಿಂದೆ ಹಲವು ವರ್ಷಗಳ ಕಾಲ ಈ ತಂಡವು ನನ್ನ ಮನೆಯಾಗಿತ್ತು. ಈಗ ಮತ್ತೆ ಆ ತಂಡಕ್ಕೆ ಮರಳುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ವಿಶ್ವಕಪ್ ಬಳಿಕ, ಇನ್ನೊಂದು ಸವಾಲನ್ನು ತೆಗೆದುಕೊಳ್ಳಲು ಇದೀಗ ಸರಿಯಾದ ಸಮಯ ಎಂದು ನನಗೆ ಅನಿಸುತ್ತಿದೆ. ಅದಕ್ಕೆ ರಾಯಲ್ಸ್ ಪರಿಪೂರ್ಣ ಸ್ಥಳವಾಗಿದೆ’’ ಎಂದು ದ್ರಾವಿಡ್ ಹೇಳಿದರು.

‘‘ಕಳೆದ ಹಲವು ವರ್ಷಗಳ ಅವಧಿಯಲ್ಲಿ, ಮನೋಜ್, ಜೇಕ್, ಕುಮಾರ್ ಮತ್ತು ತಂಡದ ಕಠಿಣ ಪರಿಶ್ರಮದಿಂದಾಗಿ ತಂಡವು ಅಭಿವೃದ್ಧಿ ಹೊಂದಿದೆ. ನಮ್ಮಲ್ಲಿ ಇರುವ ಪ್ರತಿಭೆ ಮತ್ತು ಸಂಪನ್ಮೂಲಗಳನ್ನು ಗಣನೆಗೆ ತೆಗೆದುಕೊಂಡು ತಂಡವನ್ನು ಇನ್ನೊಂದು ಮಟ್ಟಕ್ಕೆ ಒಯ್ಯಲು ನಮಗೆ ಒದಗಿರುವ ಅಪೂರ್ವ ಅವಕಾಶ ಇದಾಗಿದೆ. ಆರಂಭಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ’’ ಎಂದು ಅವರು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News