ರಣಜಿ ಟ್ರೋಫಿ: ದಿಲ್ಲಿ ದಾಳಿಗೆ ಹಳಿ ತಪ್ಪಿದ ರೈಲ್ವೇಸ್

Update: 2025-02-01 20:43 IST
Virat Kohli

ಕೊಹ್ಲಿ | PC : PTI 

  • whatsapp icon

ಹೊಸದಿಲ್ಲಿ: ಆಫ್ ಸ್ಪಿನ್ನರ್ ಶಿವಂ ಶರ್ಮಾರ(5-33) ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ರೈಲ್ವೇಸ್ ತಂಡವನ್ನು ಇನಿಂಗ್ಸ್ ಹಾಗೂ 19 ರನ್ ಅಂತರದಿಂದ ಮಣಿಸಿ ಹಳಿ ತಪ್ಪಿಸಿದ ದಿಲ್ಲಿ ಕ್ರಿಕೆಟ್ ತಂಡ ಬೋನಸ್ ಅಂಕದೊಂದಿಗೆ ತನ್ನ ರಣಜಿ ಟ್ರೋಫಿ ಲೀಗ್ ಅಭಿಯಾನವನ್ನು ಕೊನೆಗೊಳಿಸಿದೆ.

ರೈಲ್ವೇಸ್‌ನ 241 ರನ್‌ಗೆ ಉತ್ತರವಾಗಿ 3ನೇ ದಿನದಾಟವಾದ ಶನಿವಾರ 7 ವಿಕೆಟ್‌ಗಳ ನಷ್ಟಕ್ಕೆ 334 ರನ್‌ನಿಂದ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ದಿಲ್ಲಿ ತಂಡವು 374 ರನ್‌ಗೆ ಆಲೌಟಾಯಿತು. 133 ರನ್ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಯಿತು. ಬ್ಯಾಟರ್‌ಗಳ ಕೆಲವು ನಿರ್ಲಕ್ಷ್ಯದ ಹೊಡೆತದಿಂದಾಗಿ ರೈಲ್ವೇಸ್ ತಂಡವು ತನ್ನ 2ನೇ ಇನಿಂಗ್ಸ್‌ನಲ್ಲಿ 30.5 ಓವರ್‌ಗಳಲ್ಲಿ ಕೇವಲ 114 ರನ್ ಗಳಿಸಿ ಆಲೌಟಾಯಿತು. ಈ ಗೆಲುವಿನ ಮೂಲಕ ದಿಲ್ಲಿ ತಂಡವು 7 ಅಂಕ ಗಳಿಸಿದೆ.

ಪಂದ್ಯ ಬೇಗನೆ ಕೊನೆಗೊಂಡ ಕಾರಣ ಪ್ರೇಕ್ಷಕರು ಬ್ಯಾಟಿಂಗ್ ಲೆಜೆಂಡ್ ವಿರಾಟ್ ಕೊಹ್ಲಿ 2ನೇ ಇನಿಂಗ್ಸ್‌ನಲ್ಲಿ ಆಡುವುದನ್ನು ನೋಡುವ ಅವಕಾಶದಿಂದ ವಂಚಿತರಾದರು.

2ನೇ ದಿನದಾಟದಲ್ಲಿ ಕೊಹ್ಲಿ ವಿಕೆಟನ್ನು ಪಡೆದಿದ್ದ ಹಿಮಾಂಶು ಸಾಂಗ್ವಾನ್ 55 ರನ್‌ಗೆ 4 ವಿಕೆಟ್‌ಗಳನ್ನು ಕಬಳಿಸಿದರು.

ಇದು ದಿಲ್ಲಿ ತಂಡ ಈ ವರ್ಷ ಗಳಿಸಿದ 2ನೇ ಗೆಲುವಾಗಿದೆ. ಮುಂಬರುವ ಪಂದ್ಯಗಳ ಫಲಿತಾಂಶವು ದಿಲ್ಲಿ ತಂಡವು ಎಲೈಟ್ ‘ಡಿ’ ಗುಂಪಿನಲ್ಲಿ ಮುಂದಿನ ಸುತ್ತಿಗೇರುವುದನ್ನು ನಿರ್ಣಯಿಸಲಿದೆ.

ಕೊಹ್ಲಿ 13 ವರ್ಷಗಳ ನಂತರ ರಣಜಿಗೆ ಪುನರಾಗಮನ ಮಾಡಿರುವ ಹಿನ್ನೆಲೆಯಲ್ಲಿ ಈ ಪಂದ್ಯವು ರಾಷ್ಟ್ರದ ಗಮನ ಸೆಳೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News