ರಣಜಿ ಟ್ರೋಫಿ : ಮಧ್ಯಪ್ರದೇಶವನ್ನು ಮಣಿಸಿ ಫೈನಲ್ ಗೆ ಲಗ್ಗೆ ಇರಿಸಿದ ವಿದರ್ಭ
ನಾಗ್ಪುರ : ಆತಿಥೇಯ ವಿದರ್ಭ ತಂಡ ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವನ್ನು 62 ರನ್ ಅಂತರದಿಂದ ಮಣಿಸಿದೆ. ಈ ಮೂಲಕ ಫೈನಲ್ ಗೆ ಪ್ರವೇಶಿಸಿದೆ.
ಗೆಲ್ಲಲು 321 ರನ್ ಗುರಿ ಪಡೆದಿದ್ದ ಮಧ್ಯಪ್ರದೇಶ ತಂಡಕ್ಕೆ ಐದನೇ ಹಾಗೂ ಕೊನೆಯ ದಿನವಾದ ಬುಧವಾರ ಇನ್ನೂ 93 ರನ್ ಗಳಿಸಬೇಕಾಗಿತ್ತು. ಕೇವಲ 4 ವಿಕೆಟ್ ಕೈಯ್ಯಲ್ಲಿತ್ತು. ಬ್ಯಾಟರ್ಗಳಿಗೂ ಇದು ಕಠಿಣ ಸವಾಲಾಗಿದ್ದ ಕಾರಣ ವಿದರ್ಭ ಬೆಳಗ್ಗಿನ ಅವಧಿಯಲ್ಲಿ ಗೆಲುವಿನ ನಗೆ ಬೀರಿತು. ತಲಾ ಎರಡು ವಿಕೆಟ್ ಗಳನ್ನು ಪಡೆದ ಆದಿತ್ಯ ಥಾಕರೆ(2-45)ಹಾಗೂ ಯಶ್ ಥಾಕೂರ್(3-60) ಮಧ್ಯಪ್ರದೇಶದ 2ನೇ ಇನಿಂಗ್ಸನ್ನು 258 ರನ್ ಗೆ ನಿಯಂತ್ರಿಸಿದರು.
ವಿದರ್ಭದ ಬೌಲಿಂಗ್ ವಿಭಾಗದಲ್ಲಿ ಅಕ್ಷಯ್ ವಾಖರೆ(3-42) ಹಾಗೂ ಯಶ್ ಠಾಕೂರ್(3-60)ತಲಾ ಮೂರು ವಿಕೆಟ್ ಗಳನ್ನು ಕಬಳಿಸಿದರು.
ಮಾರ್ಚ್ 11ರಂದು ಮುಂಬೈನ ವಾಂಖೆಡೆ ಸ್ಟೇಡಿಯಮ್ ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡ ಮುಂಬೈ ತಂಡವನ್ನು ಎದುರಿಸಲಿದೆ. 48ನೇ ಬಾರಿ ಫೈನಲ್ ಗೆ ಪ್ರವೇಶಿಸಿರುವ ಮುಂಬೈ ತಂಡ ತನ್ನ 42ನೇ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದೆ.
ಗೆಲ್ಲಲು ಕಠಿಣ ಗುರಿ ಪಡೆದಿದ್ದ ಮಧ್ಯಪ್ರದೇಶ ತಂಡ ಮೊದಲ ಇನಿಂಗ್ಸ್ ನ ಶತಕವೀರ ಹಿಮಾಂಶು ಮಂತ್ರಿ (8 ರನ್)ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆಗ ಆರಂಭಿಕ ಆಟಗಾರ ಯಶ್ ದುಬೆ(94 ರನ್, 212 ಎಸೆತ, 10 ಬೌಂಡರಿ) ಹಾಗೂ ಹರ್ಷ್ ಗಾವಳಿ(67 ರನ್, 80 ಎಸೆತ, 11 ಬೌಂಡರಿ)ಎರಡನೇ ವಿಕೆಟ್ಗೆ 106 ರನ್ ಜೊತೆಯಾಟ ನಡೆಸಿ ಮಧ್ಯಪ್ರದೇಶವನ್ನು ಸುಸ್ಥಿತಿಗೆ ತಲುಪಿಸಿದ್ದರು. ಆದರೆ ಈ ಇಬ್ಬರ ಜೊತೆಯಾಟ ಮುರಿದ ನಂತರ ಬ್ಯಾಟಿಂಗ್ ಸರದಿ ಕುಸಿತಕ್ಕೊಳಗಾಯಿತು.
ವೆಂಕಟೇಶ್ ಅಯ್ಯರ್(19 ರನ್) ಹಾಗೂ ಸಾರಂಶ್ ಜೈನ್(25 ರನ್)ಇನಿಂಗ್ಸ್ ಆಧರಿಸಲು ಯತ್ನಿಸಿದರು. ಆದರೆ, ಇಬ್ಬರೂ ಬ್ಯಾಟರ್ಗಳು ವಿದರ್ಭ ಬೌಲರ್ಗಳನ್ನು ಕಾಡುವಲ್ಲಿ ವಿಫಲರಾದರು. ಉಮೇಶ್ ಯಾದವ್ ಹೊರತುಪಡಿಸಿ ವಿದರ್ಭದಲ್ಲಿ ಎಲ್ಲ ಬೌಲರ್ಗಳು ಗೆಲುವಿಗೆ ಕೊಡುಗೆ ನೀಡಿದ್ದಾರೆ.
ಮಧ್ಯಪ್ರದೇಶ ತಂಡ ಹಿಮಾಂಶು ಮಂತ್ರಿ ಶತಕದ(126 ರನ್, 265 ಎಸೆತ)ನೆರವಿನಿಂದ ಮೊದಲ ಇನಿಂಗ್ಸ್ ನಲ್ಲಿ 82 ರನ್ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಮೊದಲ ಇನಿಂಗ್ಸ್ ನಲ್ಲಿ ಮಧ್ಯಪ್ರದೇಶದ ಬೌಲರ್ಗಳು ಉತ್ತಮ ಪ್ರದರ್ಶನ ನೀಡಿದ್ದು, ಅವೇಶ್ ಖಾನ್ 49 ರನ್ ಗೆ 4 ವಿಕೆಟ್ ಗಳನ್ನು ಉರುಳಿಸಿದ್ದರು.
ವಿದರ್ಭ ತಂಡ ಮೊದಲ ಇನಿಂಗ್ಸ್ ನಲ್ಲಿ ಹಿನ್ನಡೆ ಕಂಡಿದ್ದರೂ ಎರಡನೇ ಇನಿಂಗ್ಸ್ ನಲ್ಲಿ ತನ್ನ ಪ್ರತಿ ಹೋರಾಟವನ್ನು ನೀಡಿತು. ವಿದರ್ಭದ 2ನೇ ಇನಿಂಗ್ಸ್ ನಲ್ಲಿ ಯಶ್ ರಾಥೋಡ್ 141 ರನ್ ಗಳಿಸಿದರು. ರಾಥೋಡ್ಗೆ ನಾಯಕ ಅಕ್ಷಯ್ ವಾಡ್ಕರ್ 77 ರನ್ ಮೂಲಕ ಉತ್ತಮ ಸಾಥ್ ನೀಡಿದರು. ರಾಥೋಡ್ ಹಾಗೂ ವಾಡ್ಕರ್ ಸೇರಿಕೊಂಡು ವಿದರ್ಭ ತಂಡ 2ನೇ ಇನಿಂಗ್ಸ್ ನಲ್ಲಿ 402 ರನ್ ಗಳಿಸಿ ಮಧ್ಯಪ್ರದೇಶದ ಗೆಲುವಿಗೆ ಕಠಿಣ ಗುರಿ ನಿಗದಿಪಡಿಸಲು ನೆರವಾದರು.
ಭಾರತದಲ್ಲಿ ವಿರೂಪಗೊಂಡಿರುವ ಪಿಚ್ ನಲ್ಲಿ 300ಕ್ಕೂ ಅಧಿಕ ರನ್ ಚೇಸ್ ಮಾಡುವುದು ಸುಲಭ ಸಾಧ್ಯವಲ್ಲ. ರನ್ ಚೇಸ್ ವೇಳೆ ಉತ್ತಮ ಜೊತೆಯಾಟದ ನಂತರ ಮಧ್ಯಪ್ರದೇಶ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ವಿದರ್ಭದ ಕೌಶಲ್ಯಭರಿತ ಬೌಲಿಂಗ್ ದಾಳಿ ಎದುರು ಪರದಾಟ ನಡೆಸಿತು.