ರೋಚಕ ಹಣಾಹಣಿಯಲ್ಲಿ ಸೋತ ಆರ್ ಸಿ ಬಿ | ಕೆಕೆಆರ್ ವಿರುದ್ಧ ಆರ್ ಸಿ ಬಿ ಗೆ 1 ರನ್ ಸೋಲು
ಕೋಲ್ಕತಾ : ವಿಲ್ ಜಾಕ್ಸ್(55 ರನ್, 32 ಎಸೆತ) ಹಾಗೂ ರಜತ್ ಪಾಟಿದಾರ್(52 ರನ್, 23 ಎಸೆತ)ಅರ್ಧಶತಕದ ಕೊಡುಗೆ, ಕರಣ್ ಶರ್ಮಾ(20 ರನ್, 7 ಎಸೆತ) ಮಿಂಚಿನ ಬ್ಯಾಟಿಂಗ್ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಕೇವಲ 1 ರನ್ ಅಂತರದಿಂದ ವೀರೋಚಿತ ಸೋಲುಂಡಿದೆ.
ರವಿವಾರ ನಡೆದ 36ನೇ ಐಪಿಎಲ್ ಪಂದ್ಯದಲ್ಲಿ ಗೆಲ್ಲಲು 223 ರನ್ ಗುರಿ ಬೆನ್ನಟ್ಟಿದ ಆರ್ ಸಿ ಬಿ 20 ಓವರ್ಗಳಲ್ಲಿ 221 ರನ್ ಗಳಿಸಿ ಆಲೌಟಾಗಿದೆ. ಸುಯಶ್ ಪ್ರಭುದೇಸಾಯಿ(24 ರನ್, 18 ಎಸೆತ), ದಿನೇಶ್ ಕಾರ್ತಿಕ್(25 ರನ್, 18 ಎಸೆತ) ಎರಡಂಕೆಯ ಸ್ಕೋರ್ ಗಳಿಸಿದರು.
ಕೆಕೆಆರ್ ಪರ ಆಲ್ರೌಂಡರ್ ಆಂಡ್ರೆ ರಸೆಲ್(3-25) ಯಶಸ್ವಿ ಬೌಲರ್ ಎನಿಸಿಕೊಂಡರು. ಹರ್ಷಿತ್ ರಾಣಾ(2-33) ಹಾಗೂ ಸುನೀಲ್ ನರೇನ್(2-34) ತಲಾ ಎರಡು ವಿಕೆಟ್ಗಳನ್ನು ಪಡೆದರು.
ಶ್ರೇಯಸ್ ಅಯ್ಯರ್ ಅರ್ಧಶತಕ, ಕೆಕೆಆರ್ 222/6
ಇದಕ್ಕೂ ಮೊದಲುಆರ್ ಸಿ ಬಿ ನಾಯಕ ಎಫ್ಡು ಪ್ಲೆಸಿಸ್ರಿಂದ ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್)ತಂಡ ನಾಯಕ ಶ್ರೇಯಸ್ ಅಯ್ಯರ್(50 ರನ್, 36 ಎಸೆತ) ಅರ್ಧಶತಕ ಹಾಗೂ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್(48 ರನ್, 14 ಎಸೆತ)ಬಿರುಸಿನ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 222 ರನ್ ಗಳಿಸಿದೆ.
ಸಾಲ್ಟ್ ಕೇವಲ 14 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ಗಳ ಸಹಿತ 48 ರನ್ ಗಳಿಸಿದರು. ಸುನೀಲ್ ನರೇನ್ ಜೊತೆ ಮೊದಲ ವಿಕೆಟ್ಗೆ 26 ಎಸೆತಗಳಲ್ಲಿ 56 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು.
ನಾಯಕ ಅಯ್ಯರ್ 36 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 1 ಸಿಕ್ಸರ್ಗಳ ಸಹಾಯದಿಂದ ಬರೋಬ್ಬರಿ 50 ರನ್ ಗಳಿಸಿ ಔಟಾದರು. ರಿಂಕು ಸಿಂಗ್(24 ರನ್, 16 ಎಸೆತ, 2 ಬೌಂಡರಿ, 1 ಸಿಕ್ಸರ್) ಜೊತೆಗೆ 5ನೇ ವಿಕೆಟ್ಗೆ 40 ರನ್ ಹಾಗೂ ರಸೆಲ್ ಜೊತೆ ಆರನೇ ವಿಕೆಟ್ಗೆ 42 ರನ್ ಜೊತೆಯಾಟದಲ್ಲಿ ಭಾಗಿಯಾದ ಅಯ್ಯರ್ ತಂಡದ ಮೊತ್ತವನ್ನು ಹಿಗ್ಗಿಸಿದರು.
ರಮಣ್ದೀಪ್ ಸಿಂಗ್(ಔಟಾಗದೆ 24, 9 ಎಸೆತ, 2 ಬೌಂಡರಿ, 2 ಸಿಕ್ಸರ್)ಹಾಗೂ ಆ್ಯಂಡ್ರೆ ರಸೆಲ್(ಔಟಾಗದೆ 27, 20 ಎಸೆತ, 4 ಬೌಂಡರಿ)7ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 43 ರನ್ ಸೇರಿಸಿ ತಂಡದ ಮೊತ್ತವನ್ನು 222ಕ್ಕೆ ತಲುಪಿಸಿದರು.
ಯಶ್ ದಯಾಳ್ ಎಸೆದ ಕೊನೆಯ ಓವರ್ನ ಮೊದಲೆರಡು ಎಸೆತವನ್ನು ರಸೆಲ್ ಬೌಂಡರಿಗೆ ಅಟ್ಟಿದರು. ರಮಣ್ದೀಪ್ ಕೊನೆಯ ಎಸೆತವನ್ನು ಬೌಂಡರಿಗೆ ಅಟ್ಟಿ ತಂಡದ ಮೊತ್ತವನ್ನು 222ಕ್ಕೆ ತಲುಪಿಸಿದರು.
ಕ್ಯಾಮರೂನ್ ಗ್ರೀನ್ 35 ರನ್ಗೆ 2 ವಿಕೆಟ್ ಕಬಳಿಸಿ ಆರ್ಸಿಬಿಯ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ಯಶ್ ದಯಾಳ್(2-56) ಎರಡು ವಿಕೆಟ್ ಪಡೆದರೂ ಪ್ರತಿ ಓವರ್ಗೆ 14 ರನ್ ನೀಡಿ ದುಬಾರಿಯಾದರು. ಮುಹಮ್ಮದ್ ಸಿರಾಜ್(1-40) ಹಾಗೂ ಲಾಕಿ ಫರ್ಗ್ಯುಸನ್(1-47) ತಲಾ ಒಂದು ವಿಕೆಟ್ ಪಡೆದರು.
ಆರ್ಸಿಬಿ ತಂಡ ಆಡುವ 11ರ ಬಳಗದಲ್ಲಿ ಮೂರು ಬದಲಾವಣೆಗಳನ್ನು ಮಾಡಿದ್ದು, ವೇಗದ ಬೌಲರ್ ಮುಹಮ್ಮದ್ ಸಿರಾಜ್, ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಹಾಗೂ ಲೆಗ್ ಸ್ಪಿನ್ನರ್ ಕರ್ಣ್ ಶರ್ಮಾ ಅವಕಾಶ ಪಡೆದಿದ್ದಾರೆ.
ಕೆಕೆಆರ್ ತಂಡ ಕಳೆದ ಪಂದ್ಯದಲ್ಲಿ ಆಡಿದ್ದ ಆಡುವ 11 ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.