ಐಪಿಎಲ್ ಗೆ ಮರಳಲು ಫಿಟ್ ಆಗುತ್ತಿರುವ ರಿಶಭ್ ಪಂಥ್
ಹೊಸದಿಲ್ಲಿ : ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಆಟದಿಂದ ಹೊರಗಿರುವ ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಶಭ್ ಪಂಥ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಮುಂಚಿತವಾಗಿ ಪೂರ್ಣ ಪ್ರಮಾಣದಲ್ಲಿ ದೈಹಿಕ ಕ್ಷಮತೆಯನ್ನು ಗಳಿಸಿಕೊಳ್ಳಲು ತೀವ್ರ ಕಸರತ್ತಿನಲ್ಲಿ ತೊಡಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ನ 2024ರ ಋತು ಚೆನ್ನೈನಲ್ಲಿ ಮಾಚ್ 22ರಂದು ಆರಂಭಗೊಳ್ಳುತ್ತದೆ. 2022ರ ಡಿಸೆಂಬರ್ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಒಳಗಾದ ಬಳಿಕ, ಪಂಥ್ ಚೇತರಿಕೆಯಲ್ಲಿದ್ದು, ಆಟದಿಂದ ಹೊರಗಿದ್ದಾರೆ. ಅವರು ಸ್ಪರ್ಧಾತ್ಮಕ ಆಟಕ್ಕೆ ಮರಳಲು ಉತ್ಸುಕರಾಗಿದ್ದಾರೆ.
ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿರುವ ವೀಡಿಯೊವೊಂದನ್ನು ಪಂಥ್ ಮಂಗಳವಾರ ತನ್ನ ‘ಎಕ್ಸ್’ ಖಾತೆಯಲ್ಲಿ ಹಾಕಿದ್ದಾರೆ. ಈ ಮೂಲಕ, ಮುಂಬರುವ ಐಪಿಎಲ್ ಗಾಗಿ ತಾನು ಪಡೆಯುತ್ತಿರುವ ಕಠಿಣ ತರಬೇತಿಯ ತುಣುಕೊಂದನ್ನು ನೀಡಿದ್ದಾರೆ.
ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲು ಪಂಥ್ ಎಲ್ಲಾ ರೀತಿಯಿಂದಲೂ ಸಜ್ಜಾಗಿದ್ದಾರೆ. ಐಪಿಎಲ್ ಗೆ ಮುಂಚಿತವಾಗಿ ಪಂಥ್ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ ಮಾಲೀಕ ಪಾರ್ಥ ಜಿಂದಾಲ್ ಇತ್ತೀಚೆಗೆ ಹೇಳಿದ್ದರು. ಪಂಥ್ ಈಗ ಬ್ಯಾಟಿಂಗ್ ಮಾಡುತ್ತಿದ್ದಾರೆ, ಓಡುತ್ತಿದ್ದಾರೆ ಮತ್ತು ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ; ಈ ಮೂಲಕ ದೈಹಿಕ ಕ್ಷಮತೆಯ ಧನಾತ್ಮಕ ಸೂಚನೆಗಳನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.
ಐಪಿಎಲ್ ವೇಳಗೆ ಪಂಥ್ ಸಂಪೂರ್ಣವಾಗಿ ಚೇತರಿಸುವ ವಿಶ್ವಾಸವನ್ನು ಜಿಂದಾಲ್ ವ್ಯಕ್ತಪಡಿಸಿದ್ದಾರೆ. ಆರಂಭದಿಂದಲೂ ತಂಡದ ನೇತೃತ್ವವನ್ನು ಪಂಥ್ ಅವರೇ ವಹಿಸಿಕೊಳ್ಳಲಿದ್ದಾರೆ ಎಂದರು.