ಭುವನೇಶ್ವರದಲ್ಲಿ ಭಾರತೀಯ ಹಾಕಿ ತಂಡದಿಂದ ರೋಡ್ ಶೋ

Update: 2024-08-21 16:38 GMT

ಹೊಸದಿಲ್ಲಿ : ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿ ಇತಿಹಾಸ ನಿರ್ಮಿಸಿರುವ ಭಾರತೀಯ ಪುರುಷರ ಹಾಕಿ ತಂಡಕ್ಕೆ ಬುಧವಾರ ಭುವನೇಶ್ವರದಲ್ಲಿ ವೀರೋಚಿತ ಸ್ವಾಗತ ನೀಡಲಾಯಿತು.

ಐತಿಹಾಸಿಕ ಸಾಧನೆಯನ್ನು ಸಂಭ್ರಮಿಸಲು ಆಯೋಜಿಸಲಾಗಿದ್ದ ರೋಡ್ ಶೋನಲ್ಲಿ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ತಂಡವು ಭಾಗವಹಿಸಿದೆ.

ಭಾರತ ತಂಡವು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪುರುಷರ ಹಾಕಿಯಲ್ಲಿ 52 ವರ್ಷಗಳ ನಂತರ ಮೊದಲ ಬಾರಿ ಸತತ ಪದಕಗಳನ್ನು ಜಯಿಸಿದೆ. 1972ರ ಮ್ಯೂನಿಚ್ ಗೇಮ್ಸ್‌ನಲ್ಲಿನ ಸಾಧನೆಯನ್ನು ಪುನರಾವರ್ತಿಸಿತು.

ಕಂಚಿನ ಪದಕದ ಪಂದ್ಯದಲ್ಲಿ ಭಾರತ ತಂಡ ಸ್ಪೇನ್ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿ ಭಾರತೀಯ ಕ್ರೀಡಾ ಇತಿಹಾಸದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿತು.

ಹಾಕಿ ತಂಡಕ್ಕೆ ಭವ್ಯ ಸ್ವಾಗತ ನೀಡಿರುವುದಕ್ಕೆ ಹಾಕಿ ಇಂಡಿಯಾ ಅಧ್ಯಕ್ಷ ದಿಲಿಪ್ ಟಿರ್ಕಿ ಅವರು ಒಡಿಶಾ ಸರಕಾರ ಹಾಗೂ ಮುಖ್ಯಮಂತ್ರಿ ಮೋಹನ್ ಚರಣ್‌ಗೆ ಕೃತಜ್ಞತೆ ವ್ಯಕ್ತಪಡಿಸಿದರು.

ಈ ಗೌರವಕ್ಕಾಗಿ ನಾನು ಒಡಿಶಾ ಸರಕಾರ ಹಾಗೂ ಮುಖ್ಯಮಂತ್ರಿ ಮೋಹನ್ ಚರಣ್‌ಗೆ ಧನ್ಯವಾದ ಸಲ್ಲಿಸುವೆ. ಹಾಕಿ ತಂಡಕ್ಕೆ ಇದೇ ಮೊದಲ ಬಾರಿ ಇಷ್ಟೊಂದು ಭವ್ಯ ಸ್ವಾಗತ ನೀಡಲಾಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದ ಹಾಕಿ ತಂಡವು ಸತತ ಪದಕಗಳನ್ನು ಜಯಿಸಿ ಇತಿಹಾಸ ನಿರ್ಮಿಸಿದೆ ಎಂದು ದಿಲಿಪ್ ಟಿರ್ಕಿ ಹೇಳಿದ್ದಾರೆ.

ರಾಜ್ಯದ ಆಟಗಾರ ಅಮಿತ್ ರೋಹಿದಾಸ್‌ಗೆ ಒಡಿಶಾ ಸರಕಾರವು 4 ಕೋ.ರೂ. ನಗದು ಬಹುಮಾನವನ್ನು ಘೋಷಿಸಿದೆ. ತಂಡದ ಪ್ರತಿ ಸದಸ್ಯರಿಗೆ ತಲಾ 15 ಲಕ್ಷ ರೂ. ಹಾಗೂ ಸಹಾಯಕ ಸಿಬ್ಬಂದಿ ತಲಾ 10 ಲಕ್ಷ ರೂ. ಬಹುಮಾನ ನೀಡಲಾಗಿದೆ.

ಭಾರತವು ಕೋಚ್ ಕ್ರೆಗ್ ಫುಲ್ಟನ್ ಮಾರ್ಗದರ್ಶನದಲ್ಲಿ ಪಂದ್ಯಾವಳಿಯುದ್ದಕ್ಕೂ ಪ್ರತಿರೋಧ ತೋರಿತ್ತು. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 8 ಪಂದ್ಯಗಳಲ್ಲಿ 10 ಗೋಲುಗಳನ್ನು ಗಳಿಸಿದ್ದ ಹರ್ಮನ್‌ಪ್ರೀತ್ ಸಿಂಗ್ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು.

ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಭಾರತದ ಪರ ಕೊನೆಯ ಪಂದ್ಯವಾಡಿದ್ದು, ತಂಡವು ಗೆಲುವಿನ ಸಂಭ್ರಮದಲ್ಲಿದ್ದಾಗ ಶ್ರೀಜೇಶ್ ಭಾವುಕರಾಗಿದ್ದಂತೆ ಕಂಡುಬಂದಿದ್ದರು. ಈ ಗೆಲುವು ಶ್ರೀಜೇಶ್‌ರ ವೃತ್ತಿಜೀವನದ ಮಹತ್ವದ ಮೈಲಿಗಲ್ಲಾಗಿದ್ದು, ಭಾರತದ ಶ್ರೀಮಂತ ಹಾಕಿ ಪರಂಪರೆಗೆ ಮತ್ತೊಂದು ಅಧ್ಯಾಯ ಸೇರ್ಪಡೆಯಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News