ಐಸಿಸಿ ವರ್ಷದ ಏಕದಿನ ತಂಡಕ್ಕೆ ರೋಹಿತ್ ಶರ್ಮಾ ನಾಯಕ

Update: 2024-01-23 18:07 GMT

ರೋಹಿತ್ ಶರ್ಮಾ | Photo: NDTV 

ಹೊಸದಿಲ್ಲಿ: ಐಸಿಸಿ ಪುರುಷರ 2023ನೇ ವರ್ಷದ ಏಕದಿನ ತಂಡದ ನಾಯಕನಾಗಿ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ತಂಡದಲ್ಲಿ ಭಾರತ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಮುಹಮ್ಮದ್ ಸಿರಾಜ್, ಮುಹಮ್ಮದ್ ಶಮಿ ಹಾಗೂ ಕುಲದೀಪ್ ಯಾದವ್ ಅವರಿದ್ದಾರೆ.

ಐಸಿಸಿ ವರ್ಷದ ಏಕದಿನ ತಂಡದಲ್ಲಿ ಐಸಿಸಿ ಏಕದಿನ ಕ್ರಿಕೆಟ್ ಫೈನಲ್ನಲ್ಲಿ ಮುಖಾಮುಖಿಯಾಗಿದ್ದ ಆಸ್ಟ್ರೇಲಿಯ ಹಾಗೂ ಭಾರತದ ಸ್ಟಾರ್ಗಳು ಪ್ರಾಬಲ್ಯ ಸಾಧಿಸಿದ್ದಾರೆ ಎಂದು ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಮಂಗಳವಾರ ಪ್ರಕಟನೆಯಲ್ಲಿ ತಿಳಿಸಿದೆ

2023ರಲ್ಲಿ ರೋಹಿತ್ 52 ಸರಾಸರಿಯಲ್ಲಿ ಒಟ್ಟು 1,255 ರನ್ ಗಳಿಸಿ ಅಮೋಘ ಪ್ರದರ್ಶನ ನೀಡಿದ್ದರು. ಏಕದಿನ ವಿಶ್ವಕಪ್ನಲ್ಲೂ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದ ರೋಹಿತ್ ಅಗ್ರ ಸರದಿಯಲ್ಲಿ ಮಿಂಚಿದ್ದರು.

ತಂಡದಲ್ಲಿ ರೋಹಿತ್ ಅವರ ಆರಂಭಿಕ ಜೊತೆಗಾರನಾಗಿರುವ ಯುವ ಪ್ರತಿಭೆ ಶುಭಮನ್ ಗಿಲ್ ಕ್ಯಾಲೆಂಡರ್ ವರ್ಷದಲ್ಲಿ 1,584 ರನ್ ಗಳಿಸಿ ತನ್ನ ಪರಾಕ್ರಮ ಪ್ರದರ್ಶಿಸಿದ್ದರು.

ಆಸ್ಟ್ರೇಲಿಯದ ಓಪನರ್ ಟ್ರಾವಿಸ್ ಹೆಡ್ ವಿಶ್ವಕಪ್ ಫೈನಲ್ನಲ್ಲಿ ಭಾರತ ವಿರುದ್ಧ 137 ರನ್ ಸಹಿತ 2023ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆಸ್ಟ್ರೇಲಿಯ 6ನೇ ಬಾರಿ ವಿಶ್ವಕಪ್ ಜಯಿಸುವಲ್ಲಿ ಮುಖ್ಯ ಪಾತ್ರವಹಿಸಿದ್ದರು.

ಬ್ಯಾಟಿಂಗ್ ಮಾಂತ್ರಿಕ ವಿರಾಟ್ ಕೊಹ್ಲಿ 2023ರಲ್ಲಿ ಆರು ಶತಕಗಳನ್ನು ಸಿಡಿಸಿದ್ದರು. ವಿಶ್ವಕಪ್ ವೇಳೆ ಗರಿಷ್ಠ ಏಕದಿನ ಶತಕ ಗಳಿಸಿ ಸಚಿನ್ ತೆಂಡುಲ್ಕರ್ ಹೆಸರಲ್ಲಿದ್ದ ವಿಶ್ವದಾಖಲೆಯನ್ನು ಮುರಿದಿದ್ದರು. ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು

ನ್ಯೂಝಿಲ್ಯಾಂಡ್ ಡ್ಯಾರಿಲ್ ಮಿಚೆಲ್ 5 ಶತಕಗಳ ಸಹಿತ 52.34 ಸರಾಸರಿಯಲ್ಲಿ ಒಟ್ಟು 1,204 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಹೆನ್ರಿಕ್ ಕ್ಲಾಸೆನ್ ತಂಡದಲ್ಲಿ ವಿಕೆಟ್ಕೀಪರ್-ಬ್ಯಾಟರ್ ಆಗಿ ಆಯ್ಕೆಯಾಗಿದ್ದಾರೆಹಿಂದಿನ ಒಂದು ವರ್ಷದಲ್ಲಿ ಬ್ಯಾಟ್ ಹಾಗೂ ಚೆಂಡಿನಲ್ಲಿ ನೀಡಿರುವ ಉತ್ತಮ ಪ್ರದರ್ಶನದ ಆಧಾರದಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಮಾರ್ಕೊ ಜಾನ್ಸನ್ ವರ್ಷದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವಿಶ್ವಕಪ್ ವೇಳೆ ಸತತ 3 ಬಾರಿ 4 ವಿಕೆಟ್ ಗೊಂಚಲು ಪಡೆದಿದ್ದ ಆಸ್ಟ್ರೇಲಿಯದ ಸ್ಪಿನ್ನರ್ ಆಡಮ್ ಝಂಪಾ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಟೂರ್ನಮೆಂಟ್ನಲ್ಲಿ 2ನೇ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದರು.

ಭಾರತದ ತ್ರಿವಳಿ ಬೌಲರ್ಗಳಾದ ಮುಹಮ್ಮದ್ ಸಿರಾಜ್, ಮುಹಮ್ಮದ್ ಶಮಿ ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ 2023ರಲ್ಲಿ ಮಿಂಚು ಹರಿಸಿದ್ದರು. 2023ರಲ್ಲಿ ಸಿರಾಜ್ 44 ವಿಕೆಟ್ಗಳನ್ನು ಕಬಳಿಸಿದ್ದರು. ಶಮಿ ನಾಲ್ಕು ಬಾರಿ ಐದು ವಿಕೆಟ್ ಗೊಂಚಲು ಪಡೆದು ವಿಶ್ವಕಪ್ನಲ್ಲಿ ಗರಿಷ್ಠ ವಿಕೆಟ್ ಉಡಾಯಿಸಿದ್ದರು. ಕುಲದೀಪ್ ಒಟ್ಟು 49 ವಿಕೆಟ್ಗಳನ್ನು ಪಡೆದಿದ್ದರು.

2023ನೇ ವರ್ಷದ ಐಸಿಸಿ ಪುರುಷರ ಏಕದಿನ ತಂಡ: ರೋಹಿತ್ ಶರ್ಮಾ(ನಾಯಕ, ಭಾರತ), ಶುಭಮನ್ ಗಿಲ್(ಭಾರತ), ಟ್ರಾವಿಸ್ ಹೆಡ್(ಆಸ್ಟ್ರೇಲಿಯ), ವಿರಾಟ್ ಕೊಹ್ಲಿ(ಭಾರತ), ಡ್ಯಾರಿಲ್ ಮಿಚೆಲ್(ನ್ಯೂಝಿಲ್ಯಾಂಡ್), ಹೆನ್ರಿಕ್ ಕ್ಲಾಸೆನ್(ವಿಕೆಟ್ಕೀಪರ್, ದಕ್ಷಿಣ ಆಫ್ರಿಕಾ), ಮಾರ್ಕೊ ಜಾನ್ಸನ್(ದಕ್ಷಿಣ ಆಫ್ರಿಕಾ), ಆಡಮ್ ಝಂಪಾ(ಆಸ್ಟ್ರೇಲಿಯ), ಮುಹಮ್ಮದ್ ಸಿರಾಜ್(ಭಾರತ), ಕುಲದೀಪ್ ಯಾದವ್(ಭಾರತ) ಹಾಗೂ ಮುಹಮ್ಮದ್ ಶಮಿ(ಭಾರತ).

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News