ಐದನೇ ಟೆಸ್ಟ್ ಆಡಲು ಧರ್ಮಶಾಲಾಕ್ಕೆ ಭರ್ಜರಿ ಎಂಟ್ರಿ ಕೊಟ್ಟ ರೋಹಿತ್ ಶರ್ಮಾ
ಹೊಸದಿಲ್ಲಿ: ಭಾರತದ ಕ್ರಿಕೆಟ್ ತಂಡ ನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಮೊದಲು ಹಿಮಾಚಲ ಪ್ರದೇಶದ ನಗರ ಧರ್ಮಶಾಲಾಕ್ಕೆ ಹೆಲಿಕಾಪ್ಟರ್ ನಲ್ಲಿ ಆಗಮಿಸುವ ಮೂಲಕ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.
ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-1 ಮುನ್ನಡೆ ಪಡೆದಿರುವ ಭಾರತವು ಹಿಮಾಚಲಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ ನಲ್ಲಿ ಮಾರ್ಚ್ 7ರಿಂದ ಆರಂಭವಾಗಲಿರುವ ಸರಣಿಯ ಕೊನೆಯ ಪಂದ್ಯದಲ್ಲಿ ಆಂಗ್ಲರನ್ನು ಎದುರಿಸಲಿದೆ.
ಮುಕೇಶ್ ಅಂಬಾನಿಯವರ ಪುತ್ರ ಅನಂತ್ ಹಾಗೂ ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಲು ತನ್ನ ಪತ್ನಿಯ ಜೊತೆಗೆ ಜಾಮ್ನಗರದಲ್ಲಿದ್ದ ರೋಹಿತ್ ಶರ್ಮಾ ಅವರು 5ನೇ ಟೆಸ್ಟ್ನಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್ ಏರಿ ಬಂದಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ತಂಡಗಳು ರವಿವಾರವೇ ಧರ್ಮಶಾಲಾಕ್ಕೆ ಆಗಮಿಸಿದ್ದವು.
ಭಾರತವು ಸರಣಿಯ ಮೊದಲ ಪಂದ್ಯವನ್ನು ಸೋತಿತ್ತು. ಆ ನಂತರ ವಿಶಾಖಪಟ್ಟಣ, ರಾಜ್ಕೋಟ್ ಹಾಗೂ ರಾಂಚಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿ ತನ್ನದೇ ಶೈಲಿಯಲ್ಲಿ ಸರಣಿಯನ್ನು ಗೆದ್ದುಕೊಂಡಿತ್ತು.
ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದ್ದು, ಇಂಗ್ಲೆಂಡ್ ಸದ್ಯ 8ನೇ ಸ್ಥಾನದಲ್ಲಿದೆ.
ಭಾರತದ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ರಾಂಚಿ ಟೆಸ್ಟ್ನಲ್ಲಿ ವಿಶ್ರಾಂತಿ ಪಡೆದ ನಂತರ ಅಂತಿಮ ಟೆಸ್ಟ್ ಗೆ ವಾಪಸಾಗಲಿದ್ದಾರೆ.
ಧರ್ಮಶಾಲಾ ಟೆಸ್ಟ್ ಗೆ ಭಾರತ ತಂಡ
ರೋಹಿತ್ ಶರ್ಮಾ(ನಾಯಕ),ಜಸ್ಪ್ರಿತ್ ಬುಮ್ರಾ(ಉಪ ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಜತ್ ಪಾಟಿದಾರ್,ಸರ್ಫರಾಝ್ ಖಾನ್, ಧ್ರುವ್ ಜುರೆಲ್(ವಿಕೆಟ್ ಕೀಪರ್), ಕೆ.ಎಸ್.ಭರತ್(ವಿಕೆಟ್ ಕೀಪರ್), ದೇವದತ್ತ ಪಡಿಕ್ಕಲ್, ಆರ್.ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮುಹಮ್ಮದ್ ಸಿರಾಜ್, ಮುಕೇಶ್ ಕುಮಾರ್ ಹಾಗೂ ಆಕಾಶ್ ದೀಪ್.
The craze for Rohit Sharma pic.twitter.com/OOlapaOtvh
— Johns. (@CricCrazyJohns) March 5, 2024