2023ರ ವಿಶ್ವಕಪ್ ಫೈನಲ್ ಪಂದ್ಯದ ಸೋಲಿಗೆ ರೋಹಿತ್ ಶರ್ಮ, ರಾಹುಲ್ ದ್ರಾವಿಡ್ ಕಾರಣ: ಮುಹಮ್ಮದ್ ಕೈಫ್ ಆರೋಪ
ಹೊಸದಿಲ್ಲಿ: ಕಳೆದ ವರ್ಷ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯ ತಂಡದೆದುರು ನಡೆದಿದ್ದ ವಿಶ್ವಕಪ್ ಫೈನಲ್ ಪಂದ್ಯದ ಸೋಲಿನ ಕುರಿತ ಚರ್ಚೆಗೆ ಮಾಜಿ ಭಾರತೀಯ ಕ್ರಿಕೆಟಿಗ ಮುಹಮ್ಮದ್ ಕೈಫ್ ಮತ್ತೆ ಕಿಡಿ ಹಚ್ಚಿದ್ದಾರೆ. ಸತತ ಹತ್ತು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಆತಿಥೇಯ ಭಾರತ ತಂಡವು, ಆ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಬಳಗದೆದುರು 6 ವಿಕೆಟ್ ಗಳ ಪರಾಭವ ಅನುಭವಿಸಿತ್ತು.
ಅಹಮದಾಬಾದಿನ ನಿಧಾನ ಗತಿಯ ಪಿಚ್ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿದ್ದು, ಮೊದಲಿಗೆ ಬ್ಯಾಟಿಂಗ್ ಗೆ ಇಳಿದಿದ್ದ ಭಾರತ ತಂಡವು ವೇಗವಾಗಿ ರನ್ ಗಳಿಸಲು ವಿಫಲವಾಗಿತ್ತು. ಆದರೆ, ಸಂಜೆ ಪಿಚ್ ಕೊಂಚ ಅನುಕೂಲಕರವಾಗಿ ವರ್ತಿಸಿದ್ದರಿಂದ ಕೊನೆಗೆ ಆಸ್ಟ್ರೇಲಿಯ ತಂಡವು ಅದರ ಲಾಭವನ್ನು ಪಡೆದು ವಿಶ್ವಕಪ್ ಅನ್ನು ತನ್ನ ಮುಡಿಗೇರಿಸಿಕೊಂಡಿತ್ತು. ವಿಶ್ವಕಪ್ ಫೈನಲ್ ಪಂದ್ಯದ ಪಿಚ್ ಸಿದ್ಧಪಡಿಸುವುದರಲ್ಲಿ ಆತಿಥೇಯ ತಂಡಕ್ಕೆ ಯಾವುದೇ ಪಾತ್ರವಿರುವುದಿಲ್ಲ ಎಂದು ಹಲವಾರು ತಜ್ಞರು ಪ್ರತಿಪಾದಿಸಿದ್ದರೂ, ಭಾರತ ತಂಡದ ಆಡಳಿತ ಮಂಡಳಿಯು ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನಿಧಾನಗತಿಯ ಪಿಚ್ ಮೇಲೆ ಆಡಲು ನಿರ್ಧರಿಸಿತ್ತು ಎಂದು ಒತ್ತಿ ಹೇಳಿರುವ ಮುಹಮ್ಮದ್ ಕೈಫ್, ಭಾರತ ತಂಡವು ತನ್ನ ತವರಿನ ಪಂದ್ಯದ ಲಾಭವನ್ನು ವಿವೇಕಯುತವಾಗಿ ಬಳಸಿಕೊಳ್ಳಲಿಲ್ಲ ಎಂದು ದೂರಿದ್ದಾರೆ.
ಈ ಕುರಿತು ʼಲಲ್ಲನ್ ಟಾಪ್ʼ ಪೋರ್ಟಲ್ ನೊಂದಿಗೆ ಮಾತನಾಡಿರುವ ಮುಹಮ್ಮದ್ ಕೈಫ್, “ನಾನು ಮೂರು ದಿನಗಳ ಕಾಲ ಅಲ್ಲಿದ್ದು, ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿದೆ. ಸಂಜೆ ರಾಹುಲ್ ದ್ರಾವಿಡ್ ರೊಂದಿಗೆ ಬಂದ ರೋಹಿತ್ ಶರ್ಮ, ಪಿಚ್ ಬಳಿ ಒಂದು ಗಂಟೆಯ ಕಾಲ ನಿಂತು ಮರಳಿದರು. ಎರಡನೆಯ ದಿನವೂ ಅವರು ಅದನ್ನೇ ಮಾಡಿದರು. ಇದು ಮೂರನೆಯ ದಿನಕ್ಕೂ ಮುಂದುವರಿಯಿತು. ಆದರೆ, ಪಿಚ್ ತನ್ನ ಬಣ್ಣ ಬದಲಿಸುತ್ತಿರುವುದನ್ನು ನಾನು ಗಮನಿಸಿದ್ದೆ. ಇಂದು ನಾವು ನೀಲಿ ಬಣ್ಣದ ಶರ್ಟ್ ಅನ್ನು ತೊಟ್ಟಿದ್ದೇನೆ. ಮೂರು ವರ್ಷಗಳ ನಂತರ ಈ ಶರ್ಟ್ ಹಳದಿ ಬಣ್ಣಕ್ಕೆ ತಿರುಗಿರುತ್ತದೆ. ಆ ಮಟ್ಟದ ಬದಲಾವಣೆಯದು” ಎಂದು ಹೇಳಿದ್ದಾರೆ.
“ಯಾವುದೇ ನೀರು ಸಿಂಪಡಿಸಲಿಲ್ಲ. ಯಾವುದೇ ಹುಲ್ಲು ಇರಲಿಲ್ಲ. ಅದು ತುಂಬಾ ನಿಧಾನ ಗತಿಯ ಪಿಚ್ ಆಗಿ ಬದಲಾಯಿತು. ಇದು ವಾಸ್ತವ. ಅಲ್ಲಿ ಕಮಿನ್ಸ್ ಮತ್ತು ಸ್ಟಾರ್ಕ್ ಇದ್ದರು ಹಾಗೂ ವೇಗವಾಗಿ ಬೌಲ್ ಮಾಡಿದರು. ನೀವು ಅವರಿಗೆ ನಿಧಾನ ಗತಿಯ ಪಿಚ್ ನೀಡುವ ಮೂಲಕ ತಪ್ಪು ಮಾಡಿದಿರಿ. ‘ಕ್ಯುರೇಟರ್ ತಮ್ಮ ಕೆಲಸ ಮಾಡಿದ್ದಾರೆ. ನಾವು ಏನೂ ಹೇಳಲಿಲ್ಲ. ಈ ಎಲ್ಲವೂ ಕಳಪೆ ಮಾತುಗಳು” ಎಂದೂ ಅವರು ಹೇಳಿದ್ದಾರೆ.
ರೋಹಿತ್ ಶರ್ಮ ಮತ್ತು ರಾಹುಲ್ ದ್ರಾವಿಡ್ ಅಹಮದಾಬಾದ್ ಪಿಚ್ ಗೆ ಹೆಚ್ಚು ನೀರು ಸಿಂಪಡಿಸದಂತೆ ಹಾಗೂ ಅದರ ಮೇಲಿನ ಹುಲ್ಲನ್ನು ಕಡಿಮೆ ಮಾಡುವಂತೆ ಸೂಚಿಸಿರಬಹುದು ಎಂದು ಕೈಫ್ ಸುಳಿವು ನೀಡಿದ್ದಾರೆ.