11ನೇ ಶತಕ ಸಿಡಿಸಿದ ಮುಂಬೈ ಬ್ಯಾಟರ್; ಸಿಕ್ಸರ್ ಪಟ್ಟಿಯಲ್ಲಿ ಧೋನಿ ಹಿಂದಿಕ್ಕಿದ ಭಾರತದ ನಾಯಕ ರೋಹಿತ್
ರಾಜ್ಕೋಟ್ : ಇಂಗ್ಲೆಂಡ್ ವಿರುದ್ಧ ಗುರುವಾರ ಆರಂಭವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆರಂಭದಲ್ಲಿ ಲಭಿಸಿದ ಜೀವದಾನದ ಲಾಭ ಪಡೆದ ಭಾರತದ ನಾಯಕ ರೋಹಿತ್ ಶರ್ಮಾ 11ನೇ ಟೆಸ್ಟ್ ಶತಕ ಪೂರೈಸಿದರು. ಶತಕದ ಹಾದಿಯಲ್ಲಿ ಎಂ.ಎಸ್. ಧೋನಿಯ ದಾಖಲೆಯನ್ನು ಮುರಿದರು. ಧೋನಿ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಭಾರತದ ಬ್ಯಾಟರ್ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು.
ರೋಹಿತ್ 27 ರನ್ ಗಳಿಸಿದ್ದಾಗ ಜೋ ರೂಟ್ರಿಂದ ಜೀವದಾನ ಪಡೆದಿದ್ದರು. ಸ್ಪಿನ್ನರ್ ಟಾಮ್ ಹಾರ್ಟ್ಲಿ ಬೌಲಿಂಗ್ನಲ್ಲಿ ಮೊದಲ ಸ್ಲಿಪ್ನಲ್ಲಿದ್ದ ರೂಟ್ ಕ್ಯಾಚ್ ಕೈಚೆಲ್ಲಿದರು. ಇದಕ್ಕೂ ಮೊದಲು ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಅವರು ಬೌನ್ಸರ್ಗಳ ಮೂಲಕ ರೋಹಿತ್ಗೆ ಸವಾಲೊಡ್ಡಿದರು.
ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಅರ್ಧಶತಕವನ್ನು ಗಳಿಸಲು ವಿಫಲರಾಗಿದ್ದ ರೋಹಿತ್ ಅವರು ರವೀಂದ್ರ ಜಡೇಜರೊಂದಿಗೆ ದ್ವಿಶತಕದ ಜೊತೆಯಾಟ ನಡೆಸಿ ಯಶಸ್ವಿ ಜೈಸ್ವಾಲ್(10 ರನ್) ಹಾಗೂ ಶುಭಮನ್ ಗಿಲ್(0)ರನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಆಸರೆಯಾದರು.
ರೋಹಿತ್ ಶತಕವನ್ನು ಪೂರೈಸುವ ಮೊದಲು 11 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದರು. ಭಾರತದ ಆರಂಭಿಕ ಬ್ಯಾಟರ್ ರೋಹಿತ್ ತನ್ನ ಇನಿಂಗ್ಸ್ನಲ್ಲಿ 2ನೇ ಸಿಕ್ಸರ್ ಸಿಡಿಸಿದಾಗ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಭಾರತದ ಆಟಗಾರರ ಪಟ್ಟಿಯಲ್ಲಿ ಮಾಜಿ ನಾಯಕ ಧೋನಿ ಅವರನ್ನು ಹಿಂದಿಕ್ಕಿದರು.
90 ಸಿಕ್ಸರ್ಗಳನ್ನು ಸಿಡಿಸಿರುವ ವೀರೇಂದ್ರ ಸೆಹ್ವಾ ಗ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ರೋಹಿತ್ ಟೆಸ್ಟ್ನಲ್ಲಿ 79ನೇ ಸಿಕ್ಸರ್ ಸಿಡಿಸಿದ್ದಾರೆ. ಈ ಮೂಲಕ ಧೋನಿ(78 ಸಿಕ್ಸರ್)ದಾಖಲೆಯನ್ನು ಹಿಂದಿಕ್ಕಿದರು.
► ಟೆಸ್ಟ್ನಲ್ಲಿ ಭಾರತದ ಪರ ಗರಿಷ್ಠ ಸಿಕ್ಸರ್ ಸಿಡಿಸಿದ ಆಟಗಾರರ ಸಂಪೂರ್ಣ ಪಟ್ಟಿ
90-ವೀರೇಂದ್ರ ಸೆಹ್ವಾಗ್
79-ರೋಹಿತ್ ಶರ್ಮಾ
78-ಎಂ.ಎಸ್.ಧೋನಿ
69-ಸಚಿನ್ ತೆಂಡುಲ್ಕರ್
61-ರವೀಂದ್ರ ಜಡೇಜ
61-ಕಪಿಲ್ದೇವ್
► ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ 4ನೇ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡ ರೋಹಿತ್
ರಾಜ್ಕೋಟ್: ಭಾರತದ ನಾಯಕ ರೋಹಿತ್ ಶರ್ಮಾ ಗುರುವಾರ ಮಾಜಿ ನಾಯಕ ಸೌರವ್ ಗಂಗುಲಿ ಅವರನ್ನು ಹಿಂದಿಕ್ಕಿ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ 4ನೇ ಗರಿಷ್ಠ ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ.
ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಈ ಸಾಧನೆ ಮಾಡಿದರು.
ಈ ಪಂದ್ಯದಲ್ಲಿ ರೋಹಿತ್ 66.83ರ ಸ್ಟ್ರೈಕ್ರೇಟ್ನಲ್ಲಿ 196 ಎಸೆತಗಳಲ್ಲಿ 14 ಬೌಂಡರಿ ಹಾಗೂ 3 ಸಿಕ್ಸರ್ಗಳ ಸಹಿತ 131 ರನ್ ಗಳಿಸಿದರು. ಇದೀಗ 470 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ರೋಹಿತ್ 43.35ರ ಸರಾಸರಿಯಲ್ಲಿ 18,641 ರನ್ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ 264ನೊಂದಿಗೆ ಭಾರತದ ಪರ 47 ಶತಕ ಹಾಗೂ 100 ಅರ್ಧಶತಕಗಳನ್ನೂ ಗಳಿಸಿದ್ದಾರೆ. ಸಚಿನ್ ತೆಂಡುಲ್ಕರ್(34,357 ರನ್), ವಿರಾಟ್ ಕೊಹ್ಲಿ(26,733 ರನ್) ಹಾಗೂ ರಾಹುಲ್ ದ್ರಾವಿಡ್(24,064 ರನ್)ರೋಹಿತ್ಗಿಂತ ಮುಂದಿರುವ ಭಾರತದ ಸ್ಟಾರ್ ಆಟಗಾರರಾಗಿದ್ದಾರೆ.
ರೋಹಿತ್ 57 ಟೆಸ್ಟ್ ಪಂದ್ಯಗಳಲ್ಲಿ 45.49ರ ಸರಾಸರಿಯಲ್ಲಿ 11 ಶತಕ ಹಾಗೂ 16 ಅರ್ಧಶತಕಗಳ ಸಹಿತ 3,958 ರನ್ ಗಳಿಸಿದ್ದಾರೆ. ರೋಹಿತ್ರ ಗರಿಷ್ಠ ವೈಯಕ್ತಿಕ ಸ್ಕೋರ್ 212.
262 ಏಕದಿನ ಪಂದ್ಯಗಳಲ್ಲಿ ರೋಹಿತ್ 49.12ರ ಸರಾಸರಿಯಲ್ಲಿ 31 ಶತಕ ಹಾಗೂ 55 ಅರ್ಧಶತಕಗಳ ಸಹಿತ 10,709 ರನ್ ಗಳಿಸಿದ್ದಾರೆ. ಗರಿಷ್ಠ ವೈಯಕ್ತಿಕ ಸ್ಕೋರ್ 264. ಏಕದಿನ ಮಾದರಿಯ ಕ್ರಿಕೆಟ್ನಲ್ಲಿ ರೋಹಿತ್ ಶ್ರೇಷ್ಠ ಸಾಧನೆ ಮಾಡಿದ್ದು, ಭಾರತದ ಪರ ಐದನೇ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ.
151 ಟಿ20 ಪಂದ್ಯವನ್ನಾಡಿರುವ ರೋಹಿತ್ 31.79ರ ಸರಾಸರಿಯಲ್ಲಿ 140 ಸ್ಟ್ರೈಕ್ರೇಟ್ನಲ್ಲಿ 3,974 ರನ್ ಗಳಿಸಿದ್ದಾರೆ. ರೋಹಿತ್ 5 ಶತಕ ಹಾಗೂ 29 ಅರ್ಧಶತಕಗಳನ್ನು ಗಳಿಸಿದ್ದು, ಗರಿಷ್ಠ ವೈಯಕ್ತಿಕ ಸ್ಕೋರ್ 121. ಟಿ-20 ಇತಿಹಾಸದಲ್ಲಿ ರೋಹಿತ್ ಎರಡನೇ ಗರಿಷ್ಠ ರನ್ ಸ್ಕೋರರ್ ಆಗಿದ್ದು, ಈ ಮಾದರಿಯ ಕ್ರಿಕೆಟ್ನಲ್ಲಿ ಗರಿಷ್ಠ ಶತಕಗಳನ್ನು ಗಳಿಸಿದ ದಾಖಲೆಯನ್ನೂ ನಿರ್ಮಿಸಿದ್ದಾರೆ.