IPL | ರೋಚಕ ಪಂದ್ಯದಲ್ಲಿ ಗೆದ್ದ ರಾಜಸ್ಥಾನ್‌ ರಾಯಲ್ಸ್‌

Update: 2024-05-22 18:12 GMT

Photo : x/@rajasthanroyals

ಅಹ್ಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ರೋಚಕ  ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವು ಆರ್‌ ಸಿ ಬಿ ತಂಡವನ್ನು ಸೋಲಿಸಿ 2ನೇ ಕ್ವಾಲಿಫಯರ್‌ ಪ್ರವೇಶಿಸಿತು. ಆ ಮೂಲಕ ಈ ಸಲವೂ ಆರ್‌ ಸಿ ಬಿ ಕಪ್‌ ನಿಂದ ವಂಚಿತವಾಯಿತು.

ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (45 ರನ್, 30 ಎಸೆತ, 8 ಬೌಂಡರಿ) ಹಾಗೂ ರಿಯಾನ್ ಪರಾಗ್( 36 ರನ್, 26 ಎಸೆತ, 2 ಬೌಂಡರಿ, 2 ಸಿಕ್ಸರ್)ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಬುಧವಾರ ನಡೆದ ಐಪಿಎಲ್‌ನ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 4 ವಿಕೆಟ್ ಅಂತರದಿಂದ ಮಣಿಸಿತು.

ಈ ಫಲಿತಾಂಶದೊಂದಿಗೆ ರಾಜಸ್ಥಾನ ತಂಡ ಮೇ 24ರಂದು ಚೆನ್ನೈನಲ್ಲಿ ನಡೆಯುವ 2ನೇ ಕ್ವಾಲಿಫೈಯರ್‌ನಲ್ಲಿ ಆಡಲು ಅರ್ಹತೆ ಪಡೆದಿದ್ದು, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಸೋಲಿನೊಂದಿಗೆ ಆರ್‌ಸಿಬಿ ಟೂರ್ನಿಯಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿದೆ.

ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಹಾಗೂ ಟಾಮ್ ಕೊಹ್ಲೆರ್-ಕಾಡ್ಮೋರ್(20) 5.3 ಓವರ್‌ಗಳಲ್ಲಿ 46 ರನ್ ಸೇರಿಸಿ ಸಾಧಾರಣ ಆರಂಭ ನೀಡಿದರು. ಟಾಮ್ ಕೊಹ್ಲೆರ್(20 ರನ್), ಸಂಜು ಸ್ಯಾಮ್ಸನ್(17 ರನ್) ಹಾಗೂ ಶಿಮ್ರೋನ್ ಹೆಟ್ಮೆಯರ್( 26 ರನ್)ಎರಡಂಕೆಯ ಸ್ಕೋರ್ ಗಳಿಸಿದರು.

ಆರ್‌ಸಿಬಿ ಬೌಲಿಂಗ್ ವಿಭಾಗದಲ್ಲಿ ಮುಹಮ್ಮದ್ ಸಿರಾಜ್(2-33) ಯಶಸ್ವಿ ಬೌಲರ್ ಎನಿಸಿಕೊಂಡರು. ಕರ್ಣ್ ಶರ್ಮಾ(1-19), ಲಾಕಿ ಫರ್ಗ್ಯುಸನ್(1-37) ಹಾಗೂ ಕ್ಯಾಮರೂನ್ ಗ್ರೀನ್(1-28) ತಲಾ ಒಂದು ವಿಕೆಟ್ ಪಡೆದರು. ಇನಿಂಗ್ಸ್ ಆರಂಭದಲ್ಲಿ ಕೆಲವು ಕ್ಯಾಚ್ ಕೈಚೆಲ್ಲಿದ್ದು ಆರ್‌ಸಿಬಿ ಗೆಲುವಿಗೆ ಅಡ್ಡಿಯಾಯಿತು.

ಆರ್‌ಸಿಬಿ 172/8: ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 172 ರನ್ ಗಳಿಸಿದೆ.

ವೇಗದ ಬೌಲರ್ ಅವೇಶ್ ಖಾನ್(3-44) ನೇತೃತ್ವದಲ್ಲಿ ಕರಾರುವಾಕ್ ಬೌಲಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ಬೆಂಗಳೂರು ತಂಡವನ್ನು 172 ರನ್‌ಗೆ ನಿಯಂತ್ರಿಸಿತು.

ಆರ್‌ಸಿಬಿ ಪರ ರಜತ್ ಪಾಟಿದಾರ್ (34 ರನ್, 22 ಎಸೆತ, 2 ಬೌಂಡರಿ, 2 ಸಿಕ್ಸರ್) ಸರ್ವಾಧಿಕ ಸ್ಕೋರ್ ಗಳಿಸಿದರು.

ಫಾರ್ಮ್‌ನಲ್ಲಿರುವ ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್‌ಗೆ ವಿಕೆಟ್ ಒಪ್ಪಿಸುವ ಮೊದಲು 24 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 33 ರನ್ ಗಳಿಸಿದರು. ನಾಯಕ ಎಫ್ ಡು ಪ್ಲೆಸಿಸ್(17 ರನ್,14 ಎಸೆತ)ರೊಂದಿಗೆ ಇನಿಂಗ್ಸ್ ಆರಂಭಿಸಿದ ಕೊಹ್ಲಿ 4.4 ಓವರ್‌ಗಳಲ್ಲಿ 37 ರನ್ ಸೇರಿಸಿದರು.

ಮಹಿಪಾಲ್ ಲಾಮ್ರೋರ್ 17 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ ಸಹಿತ 32 ರನ್ ಗಳಿಸಿದರು.

ಹಿರಿಯ ಆಫ್ ಸ್ಪಿನ್ನರ್ ಆರ್.ಅಶ್ವಿನ್(2-19)ಸೊಗಸಾದ ಬೌಲಿಂಗ್ ಮಾಡಿದ್ದು 4 ಓವರ್‌ಗಳಲ್ಲಿ 19 ರನ್ ನೀಡಿ ಕ್ಯಾಮರೂನ್ ಗ್ರೀನ್(27 ರನ್, 21 ಎಸೆತ) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್(0)ವಿಕೆಟ್‌ಗಳನ್ನು ಸತತ ಎಸೆತಗಳಲ್ಲಿ ಕಬಳಿಸಿದರು.

ಅವೇಶ್ ಖಾನ್ 4 ಓವರ್‌ಗಳಲ್ಲಿ 44 ರನ್ ನೀಡಿ 3 ವಿಕೆಟ್‌ಗಳನ್ನು ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ಟ್ರೆಂಟ್ ಬೌಲ್ಟ್(1-16), ಸಂದೀಪ್ ಶರ್ಮಾ (1-48)ಹಾಗೂ ಯಜುವೇಂದ್ರ ಚಹಾಲ್(1-43) ತಲಾ ಒಂದು ವಿಕೆಟ್ ಪಡೆದರು.

ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡ ಎರಡನೇ ಕ್ವಾಲಿಫೈಯರ್‌ಗೆ ತೇರ್ಗಡೆಯಾಗುತ್ತದೆ. ಸೋಲುವ ತಂಡ ಟೂರ್ನಿಯಿಂದ ನಿರ್ಗಮಿಸಲಿದೆ.

ಸಂಕ್ಷಿಪ್ತ ಸ್ಕೋರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಲ್ಲಿ 172/8

(ರಜತ್ ಪಾಟಿದಾರ್ 34, ವಿರಾಟ್ ಕೊಹ್ಲಿ 33, ಮಹಿಪಾಲ್ ಲಾಮ್ರೊರ್ 32, ಗ್ರೀನ್ 27, ಅವೇಶ್ ಖಾನ್ 3-44, ಅಶ್ವಿನ್ 2-19, ಬೌಲ್ಟ್ 1-16)

ರಾಜಸ್ಥಾನ ರಾಯಲ್ಸ್: 19 ಓವರ್‌ಗಳಲ್ಲಿ 174/6

(ಯಶಸ್ವಿ ಜೈಸ್ವಾಲ್ 45, ರಿಯಾನ್ ಪರಾಗ್ 36, ಶಿಮ್ರೊನ್ ಹೆಟ್ಮೆಯರ್ 26, ಮುಹಮ್ದಮ್ ಸಿರಾಜ್ 2-33)

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News