ಶ್ರೀಲಂಕಾದ ಮುಖ್ಯ ಕೋಚ್ ಆಗಿ ಸನತ್ ಜಯಸೂರ್ಯ ನೇಮಕ
ಕೊಲಂಬೊ : ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ಸನತ್ ಜಯಸೂರ್ಯ ಅವರನ್ನು ಸೋಮವಾರ ನೇಮಕ ಮಾಡಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್‌ಎಲ್‌ಸಿ)ಪ್ರಕಟಿಸಿದೆ.
ಭಾರತ(27 ವರ್ಷಗಳ ನಂತರ ಮೊದಲ ಬಾರಿ ದ್ವಿಪಕ್ಷೀಯ ಏಕದಿನ ಸರಣಿ), ಇಂಗ್ಲೆಂಡ್(10 ವರ್ಷಗಳ ನಂತರ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ) ಹಾಗೂ ನ್ಯೂಝಿಲ್ಯಾಂಡ್(ಸ್ವದೇಶಿ ಟೆಸ್ಟ್ ಸರಣಿಯನ್ನು 2-0ರಿಂದ ಗೆಲುವು)ವಿರುದ್ಧ ಇತ್ತೀಚೆಗೆ ತಂಡವು ನೀಡಿರುವ ಉತ್ತಮ ಪ್ರದರ್ಶನ ನೀಡಿದ್ದನ್ನು ಪರಿಗಣಿಸಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯಕಾರಿ ಸಮಿತಿಯು ಈ ನಿರ್ಧಾರ ತೆಗೆದುಕೊಂಡಿದೆ.
ಈ ಮೂರು ಸರಣಿಯ ವೇಳೆ ಜಯಸೂರ್ಯ ಅವರು ಕ್ರಿಸ್ ಸಿಲ್ವರ್‌ವುಡ್ ಬದಲಿಗೆ ಹಂಗಾಮಿ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡವು ಕಳಪೆ ಪ್ರದರ್ಶನ ನೀಡಿದ ನಂತರ ಕಳೆದ ಜೂನ್‌ನಲ್ಲಿ ಸಿಲ್ವರ್‌ವುಡ್ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು.
ತಮ್ಮ ಯಶಸ್ವಿ ವೃತ್ತಿಜೀವನದಲ್ಲಿ ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿ 21,000ಕ್ಕೂ ಅಧಿಕ ಅಂತರ್‌ರಾಷ್ಟ್ರೀಯ ರನ್ ಹಾಗೂ 440 ವಿಕೆಟ್‌ಗಳನ್ನು ಉರುಳಿಸಿದ ನಂತರ ಜಯಸೂರ್ಯ ಅವರು ಅಂತರ್‌ರಾಷ್ಟ್ರೀಯ ಕೋಚ್ ಆಗಿ ಇದೇ ಮೊದಲ ಬಾರಿ ಆಯ್ಕೆಯಾಗಿದ್ದಾರೆ.
ಕೋಚ್ ನೇಮಕಾತಿಯ ಅವಧಿಯು ಅಕ್ಟೋಬರ್ 1ರಿಂದ ಆರಂಭವಾಗಲಿದ್ದು, 2026ರ ಮಾ.31ರ ತನಕ ಕೋಚ್ ಒಪ್ಪಂದ ಇರಲಿದೆ.