ರಸ್ತೆ ಅಪಘಾತ: ಸರ್ಫರಾಝ್ ಖಾನ್ ಸಹೋದರ ಮುಶೀರ್‌ಗೆ ಗಾಯ
ಮುಂಬೈ : ಮುಂಬೈನ ಅಗ್ರ ಸರದಿಯ ಬ್ಯಾಟರ್ ಹಾಗೂ ಎಡಗೈ ಸ್ಪಿನ್ನರ್ ಮುಶೀರ್ ಖಾನ್ ಮುಂಬೈ ಹಾಗೂ ಶೇಷ ಭಾರತ ನಡುವೆ ಅಕ್ಟೋಬರ್ 1ರಿಂದ ಆರಂಭವಾಗಲಿರುವ ಇರಾನಿ ಕಪ್ ಪಂದ್ಯದಲ್ಲಿ ಭಾಗವಹಿಸಲು ಶುಕ್ರವಾರ ತನ್ನ ತಂದೆ ಹಾಗೂ ಕೋಚ್ ನೌಶಾದ್ ಖಾನ್ ಜೊತೆಗೆ ತವರು ರಾಜ್ಯ ಉತ್ತರಪ್ರದೇಶದ ಅಝಂಗಢದಿಂದ ಲಕ್ನೊಗೆ ತೆರಳುತ್ತಿದ್ದಾಗ ರಸ್ತೆ ಅಪಘಾತದಿಂದಾಗಿ ಗಾಯಗೊಂಡಿದ್ದಾರೆ. ಮುಶೀರ್ ಪ್ರಯಾಣಿಸುತ್ತಿದ್ದ ಕಾರು ಶುಕ್ರವಾರ ಮಧ್ಯಾಹ್ನ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಉರುಳಿ ಬಿದ್ದಿತ್ತು.
ಇಂಡಿಯಾ ಎ ವಿರುದ್ಧ ಇಂಡಿಯಾ ಬಿ ಪರ ಇತ್ತೀಚೆಗೆ ನಡೆದ ದುಲೀಪ್ ಟ್ರೋಫಿಯಲ್ಲಿ 181 ರನ್ ಗಳಿಸಿದ್ದ ಪ್ರತಿಭಾವಂತ ಆಲ್‌ರೌಂಡರ್ ಮುಶೀರ್ ಅವರ ಸದ್ಯದ ಪರಿಸ್ಥಿತಿಯ ಕುರಿತು ವಿವರಣೆ ನೀಡಿರುವ ಮುಂಬೈ ಕ್ರಿಕೆಟ್ ಸಂಸ್ಥೆಯು, ಮುಶೀರ್ ಅವರ ಕುತ್ತಿಗೆಯ ಭಾಗದಲ್ಲಿ ಮುರಿತವಾಗಿದೆ. ಆದರೆ ಅವರೀಗ ಸ್ಥಿರವಾಗಿದ್ದಾರೆ. ಲಕ್ನೊದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಉತ್ತಮ ಚಿಕಿತ್ಸೆ ಲಭಿಸುವ ನಿಟ್ಟಿನಲ್ಲಿ ಬಿಸಿಸಿಐ ಹಾಗೂ ಎಂಸಿಎ ನಿಗಾವಹಿಸಿದೆ. ಅವರು ಪ್ರಯಾಣಿಸಲು ಶಕ್ತರಾದರೆ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಮುಂಬೈಗೆ ಕರೆ ತರಲಾಗುವುದು ಎಂದು ಹೇಳಿದೆ.
ಮುಶೀರ್ ಅವರು ಭಾರತದ ಟೆಸ್ಟ್ ಕ್ರಿಕೆಟ್ ತಂಡದ ಬ್ಯಾಟರ್ ಸರ್ಫರಾಝ್ ಖಾನ್ ಅವರ ಕಿರಿಯ ಸಹೋದರನಾಗಿದ್ದಾರೆ.
2024-25ರ ದೇಶೀಯ ಋತುವಿಗೆ ಮೊದಲು ಮುಶೀರ್ ಗಾಯಗೊಂಡಿರುವುದು ಮುಂಬೈ ಕ್ರಿಕೆಟ್ ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ. ಈ ನಿರಾಶಾದಾಯಕ ಬೆಳವಣಿಗೆಯಿಂದಾಗಿ ಮುಶೀರ್ ಕ್ರಿಕೆಟ್‌ನಿಂದ ಕನಿಷ್ಠ 3 ತಿಂಗಳು ದೂರ ಉಳಿಯಲಿದ್ದಾರೆ. 19ರ ಹರೆಯದ ಮುಶೀರ್ ಅ.1ರಿಂದ 5ರ ತನಕ ಲಕ್ನೊದಲ್ಲಿ ನಡೆಯಲಿರುವ ಇರಾನಿ ಕಪ್ ಮಾತ್ರವಲ್ಲ, ಅಕ್ಟೋಬರ್ 11ರಿಂದ ಆರಂಭವಾಗಲಿರುವ ರಣಜಿ ಟ್ರೋಫಿಯ ಆರಂಭಿಕ ಸುತ್ತುಗಳ ಪಂದ್ಯದಿಂದಲೂ ಹೊರಗುಳಿಯುವ ಸಾಧ್ಯತೆಯಿದೆ.
ಇರಾನಿ ಕಪ್‌ಗಾಗಿ ಲಕ್ನೊಗೆ ಮುಂಬೈ ತಂಡದೊಂದಿಗೆ ಪ್ರಯಾಣಿಸದ ಮುಶೀರ್ ಅವರು ತನ್ನ ತಂದೆಯೊಂದಿಗೆ ಅಝಂಗಢದಿಂದ ಲಕ್ನೊಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
19ರ ಹರೆಯದ ಮುಶೀರ್ ಅವರು ಪೃಥ್ವಿ ಶಾರೊಂದಿಗೆ ಮುಂಬೈ ಕ್ರಿಕೆಟ್ ತಂಡದ ಇನಿಂಗ್ಸ್ ಆರಂಭಿಸಬೇಕಾಗಿತ್ತು. ಮುಶೀರ್ ಅನುಪಸ್ಥಿತಿಯಲ್ಲಿ 17ರ ಹರೆಯದ ಆಯುಷ್ ಮ್ಹಾತ್ರೆ ಮೊದಲ ಅವಕಾಶ ಪಡೆಯುವ ನಿರೀಕ್ಷೆ ಇದೆ. ಮುಂಬೈನ 15 ಆಟಗಾರರು ಲಭ್ಯವಿದ್ದು, ಸರ್ಫರಾಝ್ ಖಾನ್ ಶೀಘ್ರವೇ ಲಕ್ನೊದಲ್ಲಿ ಮುಂಬೈ ತಂಡವನ್ನು ಸೇರಲಿದ್ದಾರೆ.
ತನ್ನ ಚೊಚ್ಚಲ ಪ್ರಥಮ ದರ್ಜೆ ಋತುವಿನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದ ಮುಶೀರ್ ಅವರು ಭಾರತ ಎ ತಂಡದೊಂದಿಗೆ ಆಸ್ಟ್ರೇಲಿಯಕ್ಕೆ ಪ್ರಯಾಣಿಸಲು ಸಜ್ಜಾಗಿದ್ದರು. ಅಲ್ಲಿ ಮೂರು ಚತುರ್ದಿನ ಟೆಸ್ಟ್ ಪಂದ್ಯಗಳು ನಿಗದಿಯಾಗಿವೆ. ರಣಜಿ ಕ್ವಾರ್ಟರ್ ಫೈನಲ್‌ನಲ್ಲಿ ದ್ವಿಶತಕ ಹಾಗೂ ಫೈನಲ್‌ನಲ್ಲಿ ಶತಕ ಗಳಿಸಿದ್ದ ಮುಶೀರ್ ಅವರು ಇತ್ತೀಚೆಗೆ ದುಲೀಪ್ ಟ್ರೋಫಿಯಲ್ಲಿ ಮಿಂಚಿದ್ದ ಹಿನ್ನೆಲೆಯಲ್ಲಿ ಭಾರತ ಎ ತಂಡದಲ್ಲಿ ಸ್ಥಾನ ಖಚಿತಪಡಿಸಿಕೊಂಡಿದ್ದರು.