ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿದ ಸರ್ಫರಾಝ್ ಖಾನ್

Update: 2024-02-15 17:45 GMT

ರಾಜ್ಕೋಟ್: ನಾಯಕ ರೋಹಿತ್ ಶರ್ಮಾ ಹಾಗೂ ಮಧ್ಯಮ ಸರದಿಯ ಬ್ಯಾಟರ್ ರವೀಂದ್ರ ಜಡೇಜ ಸಿಡಿಸಿದ ಶತಕ, ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ತನ್ನ ಆಗಮನವನ್ನು ವಿಶ್ವಕ್ಕೆ ಸಾರಿದ ಸರ್ಫರಾಝ್ ಖಾನ್ ಸಾಹಸದಿಂದ ಇಂಗ್ಲೆಂಡ್ ವಿರುದ್ಧ ಗುರುವಾರ ಆರಂಭವಾದ ಮೂರನೇ ಟೆಸ್ಟ್ನಲ್ಲಿ ಆರಂಭಿಕ ಕುಸಿತದಿಂದ ಪಾರಾದ ಭಾರತ 5 ವಿಕೆಟ್ಗಳ ನಷ್ಟಕ್ಕೆ 326 ರನ್ ಕಲೆ ಹಾಕಿದೆ.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಮ್ನಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತವು 33 ರನ್ಗೆ 3 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ವೇಗದ ಬೌಲರ್ ಮಾರ್ಕ್ ವುಡ್ ಭಾರತಕ್ಕೆ ಸವಾಲಾದರು.

4ನೇ ವಿಕೆಟ್ಗೆ 204 ರನ್ ಜೊತೆಯಾಟ ನಡೆಸಿದ ರೋಹಿತ್(131 ರನ್, 196 ಎಸೆತ) ಹಾಗೂ ರವೀಂದ್ರ ಜಡೇಜ (ಔಟಾಗದೆ 110 ರನ್, 212 ಎಸೆತ) ಆತಿಥೇಯರನ್ನು ಮರಳಿ ಸ್ಪರ್ಧೆಗೆ ಎಳೆತಂದರು. ಈ ಇಬ್ಬರ ಜೊತೆಯಾಟ ಅಂತ್ಯಗೊಂಡ ನಂತರ ಸರ್ಫರಾಝ್ ಖಾನ್(62 ರನ್, 66 ಎಸೆತ)ಚೊಚ್ಚಲ ಪಂದ್ಯದಲ್ಲೇ ಜಂಟಿ ವೇಗದ ಅರ್ಧಶತಕ ದಾಖಲಿಸಿದ ಭಾರತದ ಬ್ಯಾಟರ್ ಎನಿಸಿಕೊಂಡರು. ಈ ಮೂಲಕ ಭಾರತದ ಸ್ಕೋರನ್ನು 300ರ ಗಡಿ ದಾಟಿಸಿದರು.

ಮೊದಲ ದಿನದಾಟದಂತ್ಯಕ್ಕೆ ಜಡೇಜ ತನ್ನ ನಾಲ್ಕನೇ ಶತಕ(110 ರನ್) ಸಿಡಿಸಿ ನೈಟ್ವಾಚ್ಮ್ಯಾನ್ ಕುಲದೀಪ್ ಯಾದವ್(1 ರನ್)ರೊಂದಿಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಭಾರತವು 2ನೇ ದಿನದಾಟದಲ್ಲಿ ಒಟ್ಟು 500 ರನ್ ಗಳಿಸುವ ವಿಶ್ವಾಸದಲ್ಲಿದೆ.

11ನೇ ಟೆಸ್ಟ್ ಶತಕವನ್ನು ಸಿಡಿಸಿದ ಆರಂಭಿಕ ಬ್ಯಾಟರ್ ರೋಹಿತ್ ಒಂದು ಬಾರಿ ಜೀವದಾನ ಪಡೆದಿದ್ದಲ್ಲದೆ, ಎಲ್ಬಿಡಬ್ಲ್ಯು ಬಲೆಗೆ ಬೀಳುವುದರಿಂದ ಬಚಾವಾಗಿದ್ದರು.

ಐದು ಪಂದ್ಯಗಳ ಸರಣಿಯು 1-1ರಿಂದ ಸಮಬಲದಲ್ಲಿರುವಾಗ ಟಾಸ್ ಜಯಿಸಿದ ರೋಹಿತ್ ಮೊದಲು ಬ್ಯಾಟ್ ಆಯ್ದುಕೊಂಡಾಗ ಅಚ್ಚರಿ ನಿರ್ಧಾರ ಎನಿಸಲಿಲ್ಲ. ಆದರೆ ಮಾರ್ಕ್ ವುಡ್ ಎಕ್ಸ್ಪ್ರೆಸ್ ವೇಗದಲ್ಲಿ ಭಾರತದ ಬ್ಯಾಟರ್ಗಳನ್ನು ಕಾಡಿದರು. ವುಡ್ ತನ್ನ 2ನೇ ಓವರ್ನಲ್ಲಿ ಯಶಸ್ವಿ ಜೈಸ್ವಾಲ್(10 ರನ್)ವಿಕೆಟ್ ಉರುಳಿಸಿದರು. ವುಡ್ ಎಸೆದ ಮುಂದಿನ ಓವರ್ನಲ್ಲಿ ಶುಭಮನ್ ಗಿಲ್(0)ಶೂನ್ಯಕ್ಕೆ ಔಟಾದರು.

ತನ್ನ 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ 9ನೇ ಓವರ್ನಲ್ಲಿ ಸ್ಪಿನ್ ಬೌಲರನ್ನು ಕಣಕ್ಕಿಳಿಸಿದರು. ಸ್ಪಿನ್ನರ್ ಟಾಮ್ ಹಾರ್ಟ್ಲಿ ಅವರು ರಜತ್ ಪಾಟಿದಾರ್(5 ರನ್)ವಿಕೆಟನ್ನು ಉರುಳಿಸಿ ನಾಯಕನ ನಿರ್ಧಾರವನ್ನು ಸಮರ್ಥಿಸಿದರು.

ಮತ್ತೊಂದೆಡೆ ವುಡ್ ದಣಿವಿಲ್ಲದೆ ಬೌಲಿಂಗ್ ದಾಳಿ ಮುಂದುವರಿಸಿದರು. ಒಂದು ಹಂತದಲ್ಲಿ ವುಡ್ ಅವರ ಎಸೆತವು ರೋಹಿತ್ಗೆ ಹೆಲ್ಮೆಟ್ ಗ್ರಿಲ್ಗೆ ಅಪ್ಪಳಿಸಿತ್ತು. ರೋಹಿತ್ 27 ರನ್ ಗಳಿಸಿದಾಗ ಹಾರ್ಟ್ಲಿ ಎಸೆತವನ್ನು ಕೆಣಕಲು ಹೋದರು. ಆದರೆ ಸ್ಲಿಪ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರೂಟ್ ಕ್ಯಾಚ್ ಕೈಚೆಲ್ಲಿದರು.

ವೇಗಿ ಜೇಮ್ಸ್ ಆ್ಯಂಡರ್ಸನ್, ರೋಹಿತ್ರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದರು. ಚೆಂಡು ಮೊದಲಿಗೆ ಬ್ಯಾಟ್ಗೆ ತಗಲಿರುವುದು ರಿಪ್ಲೇಯಲ್ಲಿ ಖಚಿತವಾದ ನಂತರ ಎಲ್ಬಿಡಬ್ಲ್ಯು ನಿರ್ಧಾರವನ್ನು ಹಿಂತೆಗೆದುಕೊಳ್ಳಲಾಯಿತು.

ಜಡೇಜರನ್ನು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಸಿದ ಟೀಮ್ ಮ್ಯಾನೇಜ್ಮೆಂಟ್ ಭಾರತೀಯ ಪಾಳಯದ ಒತ್ತಡವನ್ನು ಕಡಿಮೆ ಮಾಡಲು ಮುಂದಾಯಿತು. ಜಡೇಜ ತಾನಾಡಿದ 70 ಟೆಸ್ಟ್ ಪಂದ್ಯಗಳಲ್ಲಿ 5 ಬಾರಿ 5ನೇ ಕ್ರಮಾಂಕದಲ್ಲಿ ಆಡಿದ್ದಾರೆ.

ರೋಹಿತ್ ಹಾಗೂ ಜಡೇಜ 2ನೇ ಸೆಶನ್ನಲ್ಲಿ ಇಂಗ್ಲೆಂಡ್ ಮೇಲುಗೈ ಸಾಧಿಸುವುದನ್ನು ನಿರಾಕರಿಸಿದರು. ಭಾರತವನ್ನು ಮತ್ತೆ ಸ್ಪರ್ಧೆಯಲ್ಲಿರುವಂತೆ ನೋಡಿಕೊಂಡರು. ರೋಹಿತ್ 157 ಎಸೆತಗಳಲ್ಲಿ 11ನೇ ಶತಕವನ್ನು ಪೂರೈಸಿದರು. ರೋಹಿತ್ ವಿರುದ್ಧ ಶಾರ್ಟ್ ಬಾಲ್ ತಂತ್ರ ಪ್ರಯೋಗಿಸಿದ ಇಂಗ್ಲೆಂಡ್ ಇದರಲ್ಲಿ ಯಶಸ್ಸು ಕಂಡಿತು. ವುಡ್ ಎಸೆತದಲ್ಲಿ ರೋಹಿತ್ ಅವರು ಮಿಡ್ವಿಕೆಟ್ನಲ್ಲಿ ಸ್ಟೋಕ್ಸ್ಗೆ ಕ್ಯಾಚ್ ನೀಡಿದರು.

4ನೇ ವಿಕೆಟ್ಗೆ 204 ರನ್ ಸೇರಿಸಿದ ರೋಹಿತ್ ಹಾಗೂ ಜಡೇಜ ಜೋಡಿ ಇಂಗ್ಲೆಂಡ್ ವಿರುದ್ಧ ದ್ವಿಶತಕ ಜೊತೆಯಾಟ ನಡೆಸಿರುವ ಸಚಿನ್ ತೆಂಡುಲ್ಕರ್ ಹಾಗೂ ಸೌರವ್ ಗಂಗುಲಿ(249 ರನ್, 2002ರಲ್ಲಿ ಇಂಗ್ಲೆಂಡ್ ವಿರುದ್ಧ ಲೀಡ್ಸ್ನಲ್ಲಿ)ಹಾಗೂ ವಿಜಯ್ ಹಝಾರೆ-ವಿಜಯ್ ಮಾಂಜ್ರೇಕರ್(1952ರಲ್ಲಿ ಲೀಡ್ಸ್ನಲ್ಲಿ ಇಂಗ್ಲೆಂಡ್ ವಿರುದ್ಧ 222 ರನ್)ಕಂಪೆನಿಯನ್ನು ಸೇರಿಕೊಂಡರು. ರೋಹಿತ್ ಹಾಗೂ ಜಡೇಜ ಇದೇ ಮೊದಲ ಬಾರಿ ಗರಿಷ್ಠ ಜೊತೆಯಾಟ ನಡೆಸಿದರು. 2016ರಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಕಾನ್ಪುರದಲ್ಲಿ 6ನೇ ವಿಕೆಟ್ಗೆ 100 ರನ್ ಸೇರಿಸಿದ್ದರು.

ಚೊಚ್ಚಲ ಪಂದ್ಯವನ್ನಾಡಿದ ಸರ್ಫರಾಝ್ 48 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅರ್ಧಶತಕ ಗಳಿಸಿದ ಗಮನ ಸೆಳೆದರು. ಆದರೆ 62 ರನ್ ಗಳಿಸಿದ್ದಾಗ ವುಡ್ರಿಂದ ರನೌಟಾದರು. ಸರ್ಫರಾಝ್ ರನೌಟಾದಾಗ ಕೋಪಗೊಂಡ ನಾಯಕ ರೋಹಿತ್ ಪೆವಿಲಿಯನ್ನಲ್ಲಿ ನೆಲದ ಮೇಲೆ ತನ್ನ ಕ್ಯಾಪ್ನ್ನು ಎಸೆದಿರುವುದು ಕಂಡುಬಂದಿತು.

ಸರ್ಫರಾಝ್ ರನೌಟಾದಾಗ 99 ರನ್ ಗಳಿಸಿದ್ದ ಜಡೇಜ 198 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ನೆರವಿನಿಂದ ಶತಕ ಸಿಡಿಸಿದರು. ತವರು ಮೈದಾನ ಎಸ್ಸಿಎನಲ್ಲಿ 2ನೇ ಟೆಸ್ಟ್ ಶತಕ ಗಳಿಸಿ ಉತ್ತಮ ದಾಖಲೆ ಕಾಯ್ದುಕೊಂಡರು. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಈ ಮೈದಾನದಲ್ಲಿ 12 ಪಂದ್ಯವನ್ನಾಡಿರುವ ಜಡೇಜ 17 ಇನಿಂಗ್ಸ್ಗಳಲ್ಲಿ ಒಟ್ಟು 1564 ರನ್ ಗಳಿಸಿದ್ದರು. ಇದರಲ್ಲಿ 6 ಶತಕ, 4 ಅರ್ಧಶತಕಗಳಿವೆ.

ಇದೇ ವೇಳೆ ಜಡೇಜ ಟೆಸ್ಟ್ ಕ್ರಿಕೆಟ್ನಲ್ಲಿ 3,000 ರನ್ ಹಾಗೂ 200 ವಿಕೆಟ್ ಮೂಲಕ ಡಬಲ್ ಸಾಧನೆ ಮಾಡಿದರು. ಕಪಿಲ್ದೇವ್(5,248 ರನ್, 434 ವಿಕೆಟ್) ಹಾಗೂ ಆರ್.ಅಶ್ವಿನ್(3,271ರ ನ್, 499 ವಿಕೆಟ್) ಡಬಲ್ ಸಾಧನೆ ಮಾಡಿರುವ ಭಾರತದ ಇನ್ನಿಬ್ಬರು ಆಲ್ರೌಂಡರ್ ಆಗಿದ್ದಾರೆ. ಜಡೇಜ ಸದ್ಯ 3,003 ರನ್ ಹಾಗೂ 280 ವಿಕೆಟ್ಗಳನ್ನು ಪಡೆದಿದ್ದಾರೆ.

ಇಂದು ಸರ್ಫರಾಝ್ ಜೊತೆಗೆ ವಿಕೆಟ್ಕೀಪರ್ ಧ್ರುವ್ ಜುರೆಲ್ ಭಾರತದ ಪರ ಪಾದರ್ಪಣೆ ಪಂದ್ಯ ಆಡಿದರು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News