ದ್ವಿತೀಯ ಟೆಸ್ಟ್ : ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ 531 ರನ್
ಚಿತ್ತಗಾಂಗ್ : ಬಾಂಗ್ಲಾದೇಶ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಶ್ರೀಲಂಕಾ ತಂಡ 531 ರನ್ ಗಳಿಸಿದೆ. ಕಮಿಂಡು ಮೆಂಡಿಸ್ ಸತತ ಟೆಸ್ಟ್ ಇನಿಂಗ್ಸ್ ಗಳಲ್ಲಿ ಮೂರನೇ ಶತಕ ಗಳಿಸುವುದರಿಂದ ವಂಚಿತರಾದರು.
2ನೇ ದಿನದಾಟವಾದ ರವಿವಾರ ಶ್ರೀಲಂಕಾ ತಂಡ ಯಾವುದೇ ಬ್ಯಾಟರ್ಗಳ ಶತಕದ ಸಹಾಯವಿಲ್ಲದೆ ಟೆಸ್ಟ್ನಲ್ಲಿ ಗರಿಷ್ಠ ರನ್ ಗಳಿಸಿದ ಸಾಧನೆ ಮಾಡಿತು. 1976ರಲ್ಲಿ ನಾಗ್ಪುರದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಭಾರತವು 9ಕ್ಕೆ 524 ರನ್ ಗಳಿಸಿತ್ತು.
ಬಾಂಗ್ಲಾದೇಶ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿದೆ. ಶ್ರೀಲಂಕಾದ ಇನಿಂಗ್ಸ್ ಗಿಂತ 476 ರನ್ ಹಿನ್ನಡೆಯಲ್ಲಿದೆ.
ಶ್ರೀಲಂಕಾದ ಕೊನೆಯ ಆಟಗಾರ ಅಸಿತಾ ಫೆರ್ನಾಂಡೊ ಶೂನ್ಯಕ್ಕೆ ಔಟಾದರು. ಹೀಗಾಗಿ ಔಟಾಗದೆ 92 ರನ್ ಗಳಿಸಿದ್ದ ಮೆಂಡಿಸ್ 8 ರನ್ನಿಂದ ಶತಕ ವಂಚಿತರಾದರು. ಸತತ ಇನಿಂಗ್ಸ್ ಗಳಲ್ಲಿ 3 ಶತಕಗಳನ್ನು ಸಿಡಿಸಿದ ಶ್ರೀಲಂಕಾದ ನಾಲ್ಕನೇ ಬ್ಯಾಟರ್ ಎನಿಸಿಕೊಳ್ಳುವ ಅವಕಾಶದಿಂದ ವಂಚಿತರಾದರು.
ಕೇವಲ 3 ಟೆಸ್ಟ್ ಪಂದ್ಯವನ್ನಾಡುತ್ತಿರುವ ಬಲಗೈ ಬ್ಯಾಟರ್ ಮೆಂಡಿಸ್ ಮೊದಲ ಟೆಸ್ಟ್ನಲ್ಲಿ 102 ಹಾಗೂ 164 ರನ್ ಗಳಿಸಿದ್ದರು. ಮೆಂಡಿಸ್ರಲ್ಲದೆ ಧನಂಜಯ ಡಿಸಿಲ್ವ(70 ರನ್), ದಿನೇಶ್ ಚಾಂಡಿಮಾಲ್(59 ರನ್), ಕುಶಾಲ್ ಮೆಂಡಿಸ್(93 ರನ್), ಡಿ.ಕರುಣರತ್ನೆ(86 ರನ್) ಹಾಗೂ ನಿಶಾನ್ ಮದುಷ್ಕ (57 ರನ್)ಅರ್ಧಶತಕದ ಕೊಡುಗೆ ನೀಡಿದ್ದಾರೆ. 4 ವಿಕೆಟ್ಗಳ ನಷ್ಟಕ್ಕೆ 314 ರನ್ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಲಂಕಾ 500ರ ಗಡಿ ದಾಟಲು ಯಶಸ್ವಿಯಾಯಿತು. ಬಾಂಗ್ಲಾದ ಪರ ಶಾಕಿಬ್ ಅಲ್ ಹಸನ್(3-110)ಯಶಸ್ವಿ ಪ್ರದರ್ಶನ ನೀಡಿದರು.
್