ದ್ವಿತೀಯ ಟೆಸ್ಟ್: ಬಾಂಗ್ಲಾದೇಶ ವಿರುದ್ಧ ಭರ್ಜರಿ ಜಯ

Update: 2024-04-03 15:51 GMT

ಚಿತ್ತಗಾಂಗ್: ಶ್ರೀಲಂಕಾ ಕ್ರಿಕೆಟ್ ತಂಡ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು 192 ರನ್ ಅಂತರದಿಂದ ಭರ್ಜರಿ ಯಾಗಿ ಗೆದ್ದುಕೊಂಡಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡು ಕ್ಲೀನ್ ಸ್ವೀಪ್ಸಾಧಿಸಿದೆ.

50 ರನ್ ಗೆ 4 ವಿಕೆಟ್ ಗಳನ್ನು ಉರುಳಿಸಿದ ವೇಗದ ಬೌಲರ್ ಲಹಿರು ಕುಮಾರ ಶ್ರೀಲಂಕಾದ ಬೌಲಿಂಗ್ ನಲ್ಲಿ ಮಿಂಚಿದ್ದು, ಖಾಲಿದ್ ಅಹ್ಮದ್ ವಿಕೆಟನ್ನು ಉರುಳಿಸಿ ಐದನೇ ಹಾಗೂ ಅಂತಿಮ ದಿನವಾದ ಬುಧವಾರ ಲಂಚ್ ವಿರಾಮಕ್ಕೆ ಮೊದಲು ತನ್ನ ತಂಡಕ್ಕೆ ಗೆಲುವು ತಂದುಕೊಟ್ಟರು. ಕಮಿಂಡು ಮೆಂಡಿಸ್(3-32) ಹಾಗೂ ಪ್ರಭಾತ್ ಜಯಸೂರ್ಯ(2-99) ಐದು ವಿಕೆಟ್ ಗಳನ್ನು ಹಂಚಿಕೊಂಡು ಲಹಿರು ಕುಮಾರಗೆ ಸಾಥ್ ನೀಡಿದರು.

ತನ್ನ ಎರಡನೇ ಇನಿಂಗ್ಸ್ ನಲ್ಲಿ ಗೆಲ್ಲಲು 511 ರನ್ ಕಠಿಣ ಸವಾಲು ಪಡೆದಿದ್ದ ಆತಿಥೇಯ ಬಾಂಗ್ಲಾದೇಶ ತಂಡ ಬುಧವಾರ 7 ವಿಕೆಟ್ ಗಳ ನಷ್ಟಕ್ಕೆ 268 ರನ್ನಿಂದ ಇನಿಂಗ್ಸ್ ಮುಂದುವರಿಸಿತು. ನಿನ್ನೆಯ ಮೊತ್ತಕ್ಕೆ ಕೇವಲ 50 ರನ್ ಸೇರಿಸುವಷ್ಟರಲ್ಲಿ 318 ರನ್ ಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು. ಮೆಹದಿ ಹಸನ್ ಮಿರಾಝ್ ತನ್ನ ಆರನೇ ಅರ್ಧಶತಕವನ್ನು (ಔಟಾಗದೆ 81, 110 ಎಸೆತ,14 ಬೌಂಡರಿ)ಸಿಡಿಸಿ ಏಕಾಂಗಿ ಹೋರಾಟ ನೀಡಿದರು. ಶ್ರೀಲಂಕಾದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ಬಾಂಗ್ಲಾದೇಶ ಸುಲಭವಾಗಿ ಶರಣಾಯಿತು.

ಆಕ್ರಮಣಕಾರಿ ಆಟಕ್ಕೆ ಮೊರೆ ಹೋದ ಮೆಹಿದಿ ಹಸನ್ 68 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು.10 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ತೈಜುಲ್ ಇಸ್ಲಾಮ್ 14 ರನ್ ಗೆ ವಿಕೆಟ್ ಒಪ್ಪಿಸಿದ ನಂತರ ಬಾಂಗ್ಲಾದೇಶದ ಮರು ಹೋರಾಟದ ವಿಶ್ವಾಸ ಕಮರಿಹೋಯಿತು.

ಮೊದಲ ಇನಿಂಗ್ಸ್ ನಲ್ಲಿ ಔಟಾಗದೆ 92 ರನ್ ಗಳಿಸಿ ಬ್ಯಾಟಿಂಗ್ನಲ್ಲಿ ಮಿಂಚಿದ್ದ ಕಮಿಂಡು ಮೆಂಡಿಸ್ ತನ್ನ ಆಲ್ರೌಂಡ್ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಮೊದಲ ಟೆಸ್ಟ್ನ ಎರಡೂ ಇನಿಂಗ್ಸ್ ಗಳಲ್ಲಿ ಶತಕ ಗಳಿಸಿದಕ್ಕಾಗಿ ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾದ ವೇಗದ ಬೌಲರ್ಗಳು ಪ್ರಾಬಲ್ಯ ಸಾಧಿಸಿದ್ದು, ಬಾಂಗ್ಲಾದೇಶ ಕಳೆದುಕೊಂಡಿರುವ 40 ವಿಕೆಟ್ ಗಳ ಪೈಕಿ 33 ವಿಕೆಟ್ ಗಳು ವೇಗಿಗಳ ಪಾಲಾದವು. ಬಾಂಗ್ಲಾದೇಶದ ಸ್ಪಿನ್ ಸ್ನೇಹಿ ಪಿಚ್ ಗಳಲ್ಲಿ ಇದು ಮಹತ್ವದ ಸಾಧನೆಯಾಗಿದೆ.

ಇದೇ ವೇಳೆ, ಬಾಂಗ್ಲಾದೇಶದ ನಾಯಕ ನಜ್ಮುಲ್ ಹುಸೈನ್ ತನ್ನ ತಂಡದ ಪ್ರದರ್ಶನದ ಬಗ್ಗೆ ನಿರಾಶೆ ವ್ಯಕ್ತಪಡಿಸಿದರು. ತನ್ನ ತಂಡದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಬಾಂಗ್ಲಾದೇಶ ತಂಡವು ಜೂನ್ನಲ್ಲಿ ಆರಂಭವಾಗಲಿರುವ ಟಿ-20 ವಿಶ್ವಕಪ್ ಗಿಂತ ಮೊದಲು ಮೇನಲ್ಲಿ ಝಿಂಬಾಬ್ವೆ ವಿರುದ್ಧ ಐದು ಪಂದ್ಯಗಳ ಟಿ-20 ಸರಣಿಯನ್ನು ಆಡಲಿದೆ.

ಸಂಕ್ಷಿಪ್ತ ಸ್ಕೋರ್

ಶ್ರೀಲಂಕಾ ಮೊದಲ ಇನಿಂಗ್ಸ್: 531 ರನ್

ಬಾಂಗ್ಲಾದೇಶ ಮೊದಲ ಇನಿಂಗ್ಸ್: 178 ರನ್

ಶ್ರೀಲಂಕಾ ಎರಡನೇ ಇನಿಂಗ್ಸ್: 157/7 ಡಿಕ್ಲೇರ್

ಬಾಂಗ್ಲಾದೇಶ ಎರಡನೇ ಇನಿಂಗ್ಸ್: 318 ರನ್ ಗೆ ಆಲೌಟ್

(ಮೆಹಿದಿ ಹಸನ್ ಮಿರಾಝ್ ಔಟಾಗದೆ 81, ಮೂಮಿನುಲ್ ಹಕ್ 50, ಲಿಟನ್ ದಾಸ್ 38, ಲಹಿರು ಕುಮಾರ 4-50, ಕಮಿಂಡು ಮೆಂಡಿಸ್ 3-32, ಪ್ರಭಾತ್ ಜಯಸೂರ್ಯ 2-99)

ಪಂದ್ಯಶ್ರೇಷ್ಠ: ಕಮಿಂಡು ಮೆಂಡಿಸ್

ಸರಣಿಶ್ರೇಷ್ಠ: ಕಮಿಂಡು ಮೆಂಡಿಸ್

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News