ದ್ವಿತೀಯ ಟೆಸ್ಟ್: 29ನೇ ಶತಕ ಸಿಡಿಸಿ ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಕೊಹ್ಲಿ

Update: 2023-07-21 18:03 GMT

ವಿರಾಟ್ ಕೊಹ್ಲಿ | Photo : PTI 

ಟ್ರಿನಿಡಾಡ್, ಜು.21: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, 'ರನ್ ಯಂತ್ರ' ಖ್ಯಾತಿಯ ವಿರಾಟ್ ಕೊಹ್ಲಿ ವೆಸ್ಟ್‌ಇಂಡೀಸ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಕ್ರಿಕೆಟ್ ಪಂದ್ಯದ 2ನೇ ದಿನವಾದ ಶುಕ್ರವಾರ ಅಮೋಘ ಶತಕ ಸಿಡಿಸಿದ್ದಾರೆ. ತಾನಾಡಿದ 500ನೇ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 2018ರ ನಂತರ ವಿದೇಶಿ ನೆಲದಲ್ಲಿ ಮೊದಲ ಬಾರಿ ಮೂರಂಕೆ ದಾಟಿ ಶತಕದ ಬರ ನೀಗಿಸಿಕೊಂಡರು. ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಸಿಡಿಸಿದವರ ಪಟ್ಟಿಯಲ್ಲಿ ಕೊಹ್ಲಿ ಆಸ್ಟ್ರೇಲಿಯದ ದಂತಕತೆ ಸರ್ ಡಾನ್ ಬ್ರಾಡ್ಮನ್(52 ಟೆಸ್ಟ್, 29 ಶತಕ) ದಾಖಲೆ ಸರಿಗಟ್ಟಿದರು. ಕೊಹ್ಲಿ ಈ ಮೈಲಿಗಲ್ಲನ್ನು 111ನೇ ಟೆಸ್ಟ್‌ನಲ್ಲಿ ತಲುಪಿದರು.

ಕೊಹ್ಲಿ ಸಹ ಆಟಗಾರ ಜಡೇಜರನ್ನು ಆಲಿಂಗಿಸಿಕೊಳ್ಳುವ ಮೂಲಕ ಸಾಧನೆಯನ್ನು ಸಂಭ್ರಮಿಸಿದರು. ಸಹ ಆಟಗಾರರು ಎದ್ದುನಿಂತು ಗೌರವ ಸಲ್ಲಿಸಿದರು.ಕೊಹ್ಲಿ ಮೊದಲ ಟೆಸ್ಟ್‌ನಲ್ಲಿ 76 ರನ್ ಗಳಿಸಿ ಮಿಂಚಿದ್ದರು.

ಕೊಹ್ಲಿ ಈ ವರ್ಷದ ಹಿಂದಿನ 5 ಇನಿಂಗ್ಸ್‌ಗಳಲ್ಲಿ ಎರಡನೇ ಬಾರಿ ಶತಕ ಸಿಡಿಸಿದ್ದಾರೆ. 2019 ನವೆಂಬರ್‌ನಿಂದ 2023ರ ಮಾರ್ಚ್ ತನಕ 41 ಇನಿಂಗ್ಸ್‌ಗಳಲ್ಲಿ ಕೊಹ್ಲಿ ಶತಕವನ್ನೇ ಗಳಿಸಿರಲಿಲ್ಲ.

ಶುಕ್ರವಾರ 87 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಕೊಹ್ಲಿ 180 ಎಸೆತಗಳಲ್ಲಿ 10 ಬೌಂಡರಿ ನೆರವಿನಿಂದ 29ನೇ ಶತಕ ಪೂರೈಸಿದರು. ಆಲ್‌ರೌಂಡರ್ ರವೀಂದ್ರ ಜಡೇಜ(61 ರನ್)ಅವರೊಂದಿಗೆ 159 ರನ್ ಜೊತೆಯಾಟ ನಡೆಸಿದ ಕೊಹ್ಲಿ ತಂಡವನ್ನು ಆಧರಿಸಿದರು. ಕೊಹ್ಲಿ ರನೌಟಾಗುವ ಮೊದಲು 121 ರನ್(206 ಎಸೆತ,11 ಬೌಂಡರಿ)ಗಳಿಸಿದರು.

ಭಾರತ ಭೋಜನ ವಿರಾಮದ ವೇಳೆಗೆ 6 ವಿಕೆಟ್‌ಗಳ ನಷ್ಟಕ್ಕೆ 373 ರನ್ ಗಳಿಸಿದೆ. ಕಿಶನ್(18) ಹಾಗೂ ಅಶ್ವಿನ್(6)ಕ್ರೀಸ್ ಕಾಯ್ದುಕೊಂಡಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News