ಎರಡನೇ ಟೆಸ್ಟ್ | ಶುಭಮನ್ ಗಿಲ್ ಶತಕ, ಇಂಗ್ಲೆಂಡ್ ಗೆಲುವಿಗೆ ಕಠಿಣ ಸವಾಲು ಒಡ್ಡಿದ ಭಾರತ

Update: 2024-02-04 16:09 GMT

ಶುಭಮನ್ ಗಿಲ್ | Photo: PTI  

ವಿಶಾಖಪಟ್ಟಣ : ಅಗ್ರ ಸರದಿಯ ಬ್ಯಾಟರ್ ಶುಭಮನ್ ಗಿಲ್ ಆಕರ್ಷಕ ಶತಕದ(104 ರನ್, 147 ಎಸೆತ)ಸಹಾಯದಿಂದ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡಕ್ಕೆ ದ್ವಿತೀಯ ಟೆಸ್ಟ್ ಪಂದ್ಯದ ಗೆಲುವಿಗೆ 399 ರನ್ ಕಠಿಣ ಸವಾಲು ಒಡ್ಡಿದೆ.

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆಯಲ್ಲಿರುವ ಇಂಗ್ಲೆಂಡ್ ರವಿವಾರ ಮೂರನೇ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದೆ. ಆರಂಭಿಕ ಬ್ಯಾಟರ್ ಬೆನ್ ಡಕೆಟ್ 28 ರನ್ ಗಳಿಸಿ ಔಟಾಗಿದ್ದಾರೆ.

ಎಡಗೈ ಬ್ಯಾಟರ್ ಡಕೆಟ್ ಸಹ ಆರಂಭಿಕ ಆಟಗಾರ ಝಾಕ್ ಕ್ವಾವ್ಲೆ(ಔಟಾಗದೆ 29)ಅವರೊಂದಿಗೆ 10.5 ಓವರ್ ಗಳಲ್ಲಿ 50 ರನ್ ಜೊತೆಯಾಟ ನಡೆಸಿದ್ದಾರೆ. ಡಕೆಟ್ ವಿಕೆಟನ್ನು ಪಡೆದು ಈ ಜೋಡಿಯನ್ನು ಬೇರ್ಪಡಿಸಿರುವ ಹಿರಿಯ ಸ್ಪಿನ್ನರ್ ಆರ್.ಅಶ್ವಿನ್ ವೃತ್ತಿಬದುಕಿನಲ್ಲಿ ತನ್ನ 497ನೇ ಟೆಸ್ಟ್ ವಿಕೆಟ್ ಪಡೆದರು.

ಇಂಗ್ಲೆಂಡ್ ಉಳಿದಿರುವ ಎರಡು ದಿನಗಳ ಆಟದಲ್ಲಿ ಗೆಲ್ಲಲು ಇನ್ನೂ 332 ರನ್ ಗಳಿಸಬೇಕಾಗಿದೆ. ನೈಟ್ವಾಚ್ಮ್ಯಾನ್ ರೆಹಾನ್ ಅಹ್ಮದ್(9) ಹಾಗೂ ಕ್ರಾವ್ಲೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್ ತಂಡ 2022ರಲ್ಲಿ ಎಜ್ಬಾಸ್ಟನ್ನಲ್ಲಿ ಭಾರತ ವಿರುದ್ಧ 4ನೇ ಇನಿಂಗ್ಸ್ ನಲ್ಲಿ 378 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು. ಭಾರತ ನೆಲದಲ್ಲಿ ಭಾರತವು 2008ರಲ್ಲಿ ಇಂಗ್ಲೆಂಡ್ ವಿರುದ್ಧ 378 ರನ್ ಅನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು.

*ಭಾರತ 255 ರನ್ ಗೆ ಆಲೌಟ್

ಗಿಲ್ ಶತಕದ ಹೊರತಾಗಿಯೂ ಇಂಗ್ಲೆಂಡ್ ಸ್ಪಿನ್ನರ್ ಗಳಾದ ಟಾಮ್ ಹಾರ್ಟ್ಲಿ(4-77) ಹಾಗೂ ರೆಹಾನ್ ಅಹ್ಮದ್(3-88) ಏಳು ವಿಕೆಟ್ ಹಂಚಿಕೊಂಡು ಭಾರತ ತಂಡವನ್ನು 2ನೇ ಇನಿಂಗ್ಸ್ ನಲ್ಲಿ 255 ರನ್ ಗೆ ನಿಯಂತ್ರಿಸಿದರು.

ಹಿರಿಯ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಭಾರತದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ(13 ರನ್) ಹಾಗೂ ಮೊದಲ ಇನಿಂಗ್ಸ್ ನ ದ್ವಿಶತಕ ವೀರ ಯಶಸ್ವಿ ಜೈಸ್ವಾಲ್(17 ರನ್)ವಿಕೆಟ್ ಗಳನ್ನು ಉರುಳಿಸಿದರು. ಭಾರತ 30 ರನ್ ಗೆ 2 ವಿಕೆಟ್ ಕಳೆದುಕೊಂಡಾಗ ತಂಡಕ್ಕೆ ಆಸರೆಯಾದ ಗಿಲ್ ಮೂರನೇ ಟೆಸ್ಟ್ ಶತಕವನ್ನು ಗಳಿಸಿದರು. ಶ್ರೇಯಸ್ ಅಯ್ಯರ್(29 ರನ್, 52 ಎಸೆತ)ಅವರೊಂದಿಗೆ 3ನೇ ವಿಕೆಟ್ಗೆ 81 ರನ್ ಹಾಗೂ ಅಕ್ಷರ್ ಪಟೇಲ್(45 ರನ್, 84 ಎಸೆತ)ಜೊತೆಗೆ 5ನೇ ವಿಕೆಟ್ಗೆ 89 ರನ್ ಸೇರಿಸಿ ಭಾರತದ ಸ್ಕೋರನ್ನು ಹಿಗ್ಗಿಸಿದರು.

ಚೊಚ್ಚಲ ಪಂದ್ಯವನ್ನಾಡಿದ ಸ್ಪಿನ್ನರ್ ಶುಐಬ್ ಬಶೀರ್ ಬೌಲಿಂಗ್ ನಲ್ಲಿ ಒಂಟಿ ರನ್ ಗಳಿಸಿ ಶತಕ ಪೂರೈಸಿದ ಗಿಲ್ ರವಿವಾರದಂದು ನೆರೆದಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ಬ್ಯಾಟ್ ಎತ್ತಿ ಹಿಡಿದು ಸಂಭ್ರಮಿಸಿದರು.

ಶತಕ ಗಳಿಸಿದ ನಂತರ ಹೆಚ್ಚು ಹೊತ್ತು ನಿಲ್ಲದ ಗಿಲ್ ಅವರು ಬಶೀರ್ ಬೌಲಿಂಗ್ ನಲ್ಲಿ ರಿವರ್ಸ್ ಸ್ವೀಪ್ ಮಾಡಲು ಯತ್ನಿಸಿ ವಿಕೆಟ್ ಕೀಪರ್ ಬೆನ್ ಫೋಕ್ಸ್ಗೆ ಕ್ಯಾಚ್ ನೀಡಿದರು. ಗಿಲ್ ಎರಡು ಬಾರಿ ಜೀವದಾನ ಪಡೆದರು. ಎರಡೂ ಬಾರಿಯೂ ಎಲ್ಬಿಡಬ್ಲ್ಯು ಬಲೆಗೆ ಬೀಳುವುದರಿಂದ ಪಾರಾದರು.

ಆಲ್ರೌಂಡರ್ ಅಕ್ಷರ್ ಪಟೇಲ್ ಹಾಗೂ ಆರ್.ಅಶ್ವಿನ್ ಗಮನಾರ್ಹ ಕೊಡುಗೆ ನೀಡಿದರು.

ಎಡಗೈ ಸ್ಪಿನ್ನರ್ ಹಾರ್ಟ್ಲಿ ಆಲ್ರೌಂಡರ್ ಅಕ್ಷರ್ ಪಟೇಲ್(45 ರನ್)ರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದರು. ಆಗ ಟೀ ವಿರಾಮದ ವೇಳೆ ಭಾರತ ಆರನೇ ವಿಕೆಟ್ ಕಳೆದುಕೊಂಡಿತು.

ಅಶ್ವಿನ್ ಇನಿಂಗ್ಸ್ ಕೊನೆಯಲ್ಲಿ ಅಹ್ಮದ್ ಗೆ ವಿಕೆಟ್ ಒಪ್ಪಿಸುವ ಮೊದಲು 29 ರನ್ ಗಳಿಸಿದರು. ಅಶ್ವಿನ್ ವಿಕೆಟ್ ಪತನದೊಂದಿಗೆ ಭಾರತದ 2ನೇ ಇನಿಂಗ್ಸ್ಗೆ ತೆರೆ ಬಿತ್ತು.

3ನೇ ದಿನದಾಟದ ಮೊದಲ ಅವಧಿಯಲ್ಲಿ 29 ರನ್ ಗಳಿಸಿದ ಶ್ರೇಯಸ್ ಅವರು ನಾಯಕ ಸ್ಟೋಕ್ಸ್ ಅವರ ಆಕರ್ಷಕ ಕ್ಯಾಚ್ ಗೆ ಔಟಾದರು. ಅಯ್ಯರ್ ಅವರು ಹಾರ್ಟ್ಲಿ ಬೌಲಿಂಗ್ ನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದರು. ಸ್ಟೋಕ್ಸ್ ಮಿಡ್ ಆಫ್ ನಿಂದ ಹಿಂದಕ್ಕೆ ಓಡಿ ಡೈವ್ ಹೊಡೆದು ಕ್ಯಾಚ್ ಪಡೆದರು.

ಬೆಳಗ್ಗಿನ ಅವಧಿಯಲ್ಲಿ ಅಮೋಘ ಬೌಲಿಂಗ್ ಮಾಡಿದ ಆ್ಯಂಡರ್ಸನ್ ಸೂಪರ್ಬ್ ಎಸೆತದಿಂದ ರೋಹಿತ್ ಶರ್ಮಾರ ಸ್ಟಂಪನ್ನು ಉಡಾಯಿಸಿದರು. ಆ ನಂತರ ಆ್ಯಂಡರ್ಸನ್ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ವಿಕೆಟನ್ನು ಪಡೆದರು. ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಅವರು ಗಳಿಸಿರುವ 695ನೇ ವಿಕೆಟ್ ಆಗಿದೆ.

ಎರಡನೇ ಇನಿಂಗ್ಸ್ ಆರಂಭದಲ್ಲಿ 143 ರನ್ ಮುನ್ನಡೆ ಪಡೆದಿದ್ದ ಭಾರತವು ಇಂದು ವಿಕೆಟ್ ನಷ್ಟವಿಲ್ಲದೆ 28 ರನ್ನಿಂದ ಬ್ಯಾಟಿಂಗ್ ಮುಂದುವರಿಸಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News