ದ್ವಿತೀಯ ಟ್ವೆಂಟಿ-20: ವೆಸ್ಟ್ಇಂಡೀಸ್ ಗೆ 153 ರನ್ ಗುರಿ ನೀಡಿದ ಭಾರತ
ಗಯಾನ: ಮಧ್ಯಮ ಸರದಿ ಬ್ಯಾಟರ್ ತಿಲಕ್ ವರ್ಮಾ ಗಳಿಸಿದ ಚೊಚ್ಚಲ ಅರ್ಧಶತಕದ ನೆರವಿನಿಂದ ಭಾರತ ಕ್ರಿಕೆಟ್ ತಂಡ ದ್ವಿತೀಯ ಟ್ವೆಂಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ವೆಸ್ಟ್ಇಂಡೀಸ್ ತಂಡದ ಗೆಲುವಿಗೆ 153 ರನ್ ಗುರಿ ನೀಡಿದೆ.
ರವಿವಾರ ಟಾಸ್ ಜಯಿಸಿದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 152 ರನ್ ಗಳಿಸಿತು.
ಭಾರತದ ಪರ ತಿಲಕ್ ವರ್ಮಾ ತಾನಾಡಿದ 2ನೇ ಟ್ವೆಂಟಿ-20 ಪಂದ್ಯದಲ್ಲಿ ತಂಡದ ಪರ ಸರ್ವಾಧಿಕ ಸ್ಕೋರ್(51 ರನ್, 41 ಎಸೆತ, 5 ಬೌಂಡರಿ, 1 ಸಿಕ್ಸರ್)ಗಳಿಸಿದರು. ಇಶಾನ್ ಕಿಶನ್(27 ರನ್, 23 ಎಸೆತ),ಹಾರ್ದಿಕ್ ಪಾಂಡ್ಯ(24 ರನ್, 18 ಎಸೆತ)ಹಾಗೂ ಅಕ್ಷರ್ ಪಟೇಲ್(14 ರನ್, 12 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ಹಾಗೂ ತಿಲಕ್ ವರ್ಮಾ 3ನೇ ವಿಕೆಟ್ಗೆ 42 ರನ್ ಜೊತೆಯಾಟದಲ್ಲಿ ಭಾಗಿಯಾದರು. ಕಿಶನ್ ಔಟಾದ ನಂತರ ನಾಯಕ ಪಾಂಡ್ಯ ಜೊತೆಗೆ ತಿಲಕ್ 5ನೇ ವಿಕೆಟ್ಗೆ 38 ರನ್ ಸೇರಿಸಿದರು. ಕೊನೆಯ ಓವರ್ನಲ್ಲಿ ಅಕ್ಷರ್ ಪಟೇಲ್(14 ರನ್)ವಿಕೆಟ್ ಪತನಗೊಂಡ ಹೊರತಾಗಿಯೂ ಭಾರತವು 13 ರನ್ ಗಳಿಸಿತು. ರವಿ ಬಿಷ್ಣೋಯ್(8 ರನ್, 4 ಎಸೆತ) ಹಾಗೂ ಅರ್ಷದೀಪ್ ಸಿಂಗ್(6 ರನ್, 3 ಎಸೆತ) ಅವರು ರೋಮಾರಿಯೊ ಶೆಫರ್ಡ್(2-28) ಬೌಲಿಂಗ್ನಲ್ಲಿ 13 ರನ್ ಕಬಳಿಸಿದರು.
ರೋಮಾರಿಯೊ ಶೆಫರ್ಡ್(2-28), ಅಲ್ಝಾರಿ ಜೋಸೆಫ್(2-28) ಹಾಗೂ ಅಕೀಲ್ ಹುಸೇನ್(2-29) ತಲಾ ಎರಡು ವಿಕೆಟ್ಗಳನ್ನು ಕಬಳಿಸಿ ಭಾರತವನ್ನು 152 ರನ್ಗೆ ನಿಯಂತ್ರಿಸಿದರು.