ಹಿರಿಯರ 77ನೇ ನ್ಯಾಷನಲ್ ಈಜು ಚಾಂಪಿಯನ್‌ಶಿಪ್ | ಪುರುಷರ 4x100 ಮೀ. ಮಿಡ್ಲೆಯಲ್ಲಿ ತಮಿಳುನಾಡಿನ ಹೊಸ ದಾಖಲೆ
ಮಂಗಳೂರು : ನಿತಿಕ್ ನಥೆಲ್ಲಾ, ಧನುಷ್ ಸುರೇಶ್, ಬಿ ಬೆನೆಡಿಕ್ಟನ್ ರೋಹಿತ್ ಮತ್ತು ಆದಿತ್ಯ ದಿನೇಶ್ ಅವರನ್ನು ಒಳಗೊಂಡ ತಮಿಳುನಾಡಿನ ಪುರುಷರ ತಂಡ ನಗರದ ಎಮ್ಮೆಕೆರೆಯ ಅಂತರರಾಷ್ಟ್ರೀಯ ಈಜು ಕೊಳದಲ್ಲಿ ನಡೆಯುತ್ತಿರುವ 77ನೇ ಹಿರಿಯರ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನ ಪುರುಷರ 4 x100 ಮೀ ಮಿಡ್ಲೆಯಲ್ಲಿ ಚಿನ್ನ ಗೆಲ್ಲವುದರೊಂದಿಗೆ ಹೊಸ ದಾಖಲೆ ಬರೆದಿದೆ.
ಈಜು ಚಾಂಪಿಯನ್‌ಶಿಪ್‌ನ ಮೂರನೇ ದಿನವಾದ ಗುರುವಾರ ಕರ್ನಾಟಕ 3 ಚಿನ್ನ, 4 ಬೆಳ್ಳಿ ಮತ್ತು 1 ಕಂಚಿನ ಪದಕಗಳನ್ನು ಬಾಚಿಕೊಂಡಿದೆ. ಇದರೊಂದಿಗೆ, ಕರ್ನಾಟಕ ತಂಡವು ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಅದು ಈವರೆಗೆ 12 ಚಿನ್ನ, 11 ಬೆಳ್ಳಿ ಮತ್ತು 2 ಕಂಚು ಸೇರಿದಂತೆ ಒಟ್ಟು 25 ಪದಕಗಳನ್ನು ಜಮೆ ಮಾಡಿದೆ.
ಪುರುಷರ 4 x100 ಮೀ ಮಿಡ್ಲೆ ರಿಲೇಯಲ್ಲಿ 3 ನಿಮಿಷ ಮತ್ತು 45.66 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ತಮಿಳುನಾಡು ತಂಡ ರಾಷ್ಟ್ರೀಯ ಕೂಟ ದಾಖಲೆಯನ್ನು ನಿರ್ಮಿಸಿದೆ. 2022ರಲ್ಲಿ ಸರ್ವಿಸಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ (ಎಸ್‌ಎಸ್‌ಸಿಬಿ) ನಿರ್ಮಿಸಿದ್ದ ದಾಖಲೆಯನ್ನು (3 ನಿಮಿಷ ಮತ್ತು 47.22 ಸೆಕೆಂಡ್) ಅದು ಅಳಿಸಿ ಹಾಕಿದೆ.
ಆಕಾಶ್ ಮಣಿ, ವಿದಿತ್, ಎಸ್. ಶಂಕರ್, ಕಾರ್ತಿಕೇಯನ್ ನಾಯರ್ ಮತ್ತು ಶ್ರೀಹರಿ ನಟರಾಜ್ ಅವರನ್ನೊಳಗೊಂಡ ಕರ್ನಾಟಕ ತಂಡವು 3 ನಿಮಿಷ ಮತ್ತು 46.09 ಸೆಕೆಂಡ್‌ನಲ್ಲಿ ಗುರಿ ಮುಟ್ಟಿ ಎರಡನೇ ಸ್ಥಾನ ಪಡೆಯಿತು.
ಪುರುಷರ 1,500 ಮೀಟರ್ ಫ್ರೀಸ್ಟೈಲ್‌ನಲ್ಲಿ ಕರ್ನಾಟಕದ ಅನೀಶ್ ಎಸ್ ಗೌಡ ಅವರು ತನ್ನ ರಾಜ್ಯದವರೇ ಆಗಿರುವ ದರ್ಶನ್ ಎಸ್. ಅವರನ್ನು ಹಿಂದಿಕ್ಕಿ ಚಿನ್ನ ಪಡೆದರು. ಅನೀಶ್ 16 ನಿಮಿಷ ಮತ್ತು 6.11 ಸೆಕೆಂಡ್‌ನಲ್ಲಿ ಆರಾಮವಾಗಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ದರ್ಶನ್ ಎಸ್. 16 ನಿಮಿಷ ಮತ್ತು 16.83 ಸೆಕೆಂಡ್ ಸಾಧನೆಯೊಂದಿಗೆ ಎರಡನೇ ಸ್ಥಾನ ಪಡೆದರು.
ಮಹಿಳೆಯರ 800 ಮೀಟರ್ ಫ್ರೀಸ್ಟೈಲ್‌ನಲ್ಲಿ ತೆಲಂಗಾಣದ ವೃದ್ಧಿ ಅಗರ್ವಾಲ್ (9:16.14) ಅಗ್ರ ಸ್ಥಾನ ಪಡೆದರು. ದಿಲ್ಲಿಯ ಭವ್ಯ ಸಚ್‌ದೇವ ಮತ್ತು ಕರ್ನಾಟಕದ ಶ್ರೀ ಚರಣಿ ತುಮು ಅವರು ಅಂತಿಮ ಸುತ್ತಿನವರೆಗೂ ಹಣಾಹಣಿ ನಡೆಸಿದರು. ದಿಲ್ಲಿಯ ಭವ್ಯಾ (9:19.74 ) ಅವರು ಎರಡನೇ ಸ್ಥಾನ ಪಡೆದರು. ಕರ್ನಾಟಕದ ಶ್ರೀ ಚರಣಿ ತುಮು (9:20.40) ಕಂಚು ಪಡೆದರು.
ರೈಲ್ವೇ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್‌ನ ಬಿಕ್ರಮ್ ಚಾಂಗ್ಮಾಯಿ ಮತ್ತು ಧನುಷ್ ಎಸ್. 200 ಮೀಟರ್ ಬಟರ್‌ಫ್ಲೈನಲ್ಲಿ ಮುಖಾಮುಖಿಯಾದರು. ಬಿಕ್ರಮ್ ಚಾಂಗ್ಮಾಯಿ (2:02.76) ಚಿನ್ನ ಪಡೆದರೆ, ಹರ್ಯಾಣದ ಹರ್ಷ್ (2:03.95) ಎರಡನೇ ಸ್ಥಾನ ಪಡೆದರು.
ಮಹಿಳೆಯರ 200 ಮೀಟರ್ ಬಟರ್‌ಫ್ಲೈನಲ್ಲಿ ಆಸ್ತಾ ಚೌಧರಿ, ಹಶಿಕಾ ರಾಮಚಂದ್ರ ಮತ್ತು ವೃದ್ಧಿ ಅಗರ್ವಾಲ್ ಅವರು ಮೊದಲ ಸುತ್ತಿನಿಂದಲೇ ತ್ರಿಕೋನ ಹೋರಾಟದಲ್ಲಿ ತೊಡಗಿದ್ದರು. ಕರ್ನಾಟಕದ ಹಶಿಕಾ ಕೊನೆಯ ಕ್ಷಣದಲ್ಲಿ 2:21.16 ಹೊತ್ತುಗಾರಿಕೆಯೊಂದಿಗೆ ಗುರಿ ತಲುಪಿ ರಾಜ್ಯಕ್ಕೆ ಮೂರನೇ ಚಿನ್ನದ ಪದಕವನ್ನು ಖಚಿತಪಡಿಸಿದರು. ತೆಲಂಗಾಣದ ವೃದ್ಧಿ ಅಗರ್ವಾಲ್ (2:21.89) ಎರಡನೇ ಸ್ಥಾನವನ್ನು ಪಡೆದರು.
ಮಹಿಳೆಯರ 50 ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ ಬಂಗಾಳದ ಸೌಬ್ರಿಟಿ ಮಂಡಲ್ ಚಿನ್ನ (30.14 ಸೆಕೆಂಡ್) ಮತ್ತು ವಿಹಿತಾ ನಾರಾಯಣ ಲೋಕನಾಥನ್(30.59 ಸೆಕೆಂಡ್) ಬೆಳ್ಳಿ ಪದಕಗಳನ್ನು ಗೆದ್ದರು.