ನಾಳೆ ಸರಣಿ ನಿರ್ಣಾಯಕ 3ನೇ ಏಕದಿನ ಪಂದ್ಯ: ಭಾರತ-ದಕ್ಷಿಣ ಆಫ್ರಿಕಾ ಮುಖಾಮುಖಿ
ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ನಿರ್ಣಾಯಕ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವು ಗುರುವಾರ ಪಾರ್ಲ್ ನಲ್ಲಿ ನಡೆಯಲಿದ್ದು, ಭಾರತವು ದಕ್ಷಿಣ ಆಫ್ರಿಕಾ ನೆಲದಲ್ಲಿ ತನ್ನ ಎರಡನೇ ಏಕದಿನ ಸರಣಿ ಗೆಲ್ಲಬೇಕಾದರೆ ಆರಂಭಿಕ ಆಟಗಾರರು ಉತ್ತಮ ಆರಂಭವನ್ನು ನೀಡಬೇಕಾದ ಅನಿವಾರ್ಯತೆಯಿದೆ.
ಭಾರತ ತಂಡ ದಕ್ಷಿಣ ಆಫ್ರಿಕಾ ನೆಲದಲ್ಲಿ 2018ರಲ್ಲಿ ಕೊನೆಯ ಬಾರಿ ಏಕದಿನ ಸರಣಿಯನ್ನು ಜಯಿಸಿತ್ತು. ಇದೀಗ ಮತ್ತೊಮ್ಮೆ ಸರಣಿ ಜಯಿಸಬೇಕಾದರೆ ಆರಂಭಿಕ ಆಟಗಾರರಾದ ಋತುರಾಜ್ ಗಾಯಕ್ವಾಡ್ ಹಾಗೂ ಬಿ.ಸಾಯಿ ಸುದರ್ಶನ್ ಪ್ರಚಂಡ ಆರಂಭ ಒದಗಿಸುವ ಅಗತ್ಯವಿದೆ.
ಸರಣಿಯ ಮೊದಲೆರಡು ಪಂದ್ಯಗಳಲ್ಲಿ 55 ಹಾಗೂ 62 ರನ್ ಗಳಿಸಿರುವ ಸಾಯಿ ಸುದರ್ಶನ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಆದರೆ ಗಾಯಕ್ವಾಡ್ ಅವರು ಸುದರ್ಶನ್ ಗೆ ಉತ್ತಮ ಸಾಥ್ ನೀಡುತ್ತಿಲ್ಲ.
ಜೋಹಾನ್ಸ್ ಬರ್ಗ್ ಹಾಗೂ ಪೋರ್ಟ್ ಎಲಿಝಬೆತ್ ನಲ್ಲಿ ಭಾರತದ ಮೊದಲ ವಿಕೆಟ್ ಜೊತೆಯಾಟವು ಕ್ರಮವಾಗಿ 23 ಹಾಗೂ 4 ರನ್ ಗೆ ಕೊನೆಯಾಗಿತ್ತು. ಬಲಗೈ ಬ್ಯಾಟರ್ ಗಾಯಕ್ವಾಡ್ ಕೇವಲ 5 ಹಾಗೂ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.
ಮತ್ತೊಂದೆಡೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಆರಂಭಿಕ ಆಟಗಾರರಾದ ಟೋನಿ ಡಿ ರೆರ್ಝಿ ಹಾಗೂ ರೀಝಾ ಹೆಂಡ್ರಿಕ್ಸ್ ಎರಡನೇ ಏಕದಿನ ಪಂದ್ಯದಲ್ಲಿ ಮೊದಲ ವಿಕೆಟ್ ಗೆ 130 ರನ್ ಜೊತೆಯಾಟ ನಡೆಸಿ ಭರ್ಜರಿ ಆರಂಭ ಒದಗಿಸಿದ್ದರು. ಟೋನಿ ಚೊಚ್ಚಲ ಶತಕವನ್ನು ಸಿಡಿಸಿ ಆತಿಥೇಯರಿಗೆ 8 ವಿಕೆಟ್ ಗೆಲುವು ತಂದುಕೊಟ್ಟಿದ್ದರು.
ಭರವಸೆ ಮೂಡಿಸಿದ್ದ ಎಡಗೈ ಬ್ಯಾಟರ್ ತಿಲಕ್ ವರ್ಮಾ ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ರನ್ ಗಾಗಿ ಪರದಾಡುತ್ತಿದ್ದಾರೆ. ಸ್ವದೇಶದಲ್ಲಿ ಆಸ್ಟ್ರೇಲಿಯ ವಿರುದ್ಧ ಟಿ-20 ಸರಣಿಯಲ್ಲಿ ನೀಡಿದ್ದ ಪ್ರದರ್ಶನ ಪುನರಾವರ್ತಿಸಲು ಅವರು ವಿಫಲರಾಗಿದ್ದಾರೆ. ಹೈದರಾಬಾದ್ ಬ್ಯಾಟರ್ ಈ ತನಕ ಉತ್ತಮ ಪ್ರದರ್ಶನ ನೀಡಿಲ್ಲ.
ಮಧ್ಯಮ ಸರದಿಯಲ್ಲಿ ಇನಿಂಗ್ಸ್ ಗೆ ಶಕ್ತಿ ತುಂಬಬಲ್ಲ ಶ್ರೇಯಸ್ ಅಯ್ಯರ್ ಈಗ ಏಕದಿನ ತಂಡದಲ್ಲಿಲ್ಲ. ಹೀಗಾಗಿ ಗಾಯಕ್ವಾಡ್, ತಿಲಕ್ ವರ್ಮಾ ಹಾಗೂ ಹೊಸ ಆಟಗಾರ ರಜತ್ ಪಾಟಿದಾರ್ ಗುರುವಾರದ ಪಂದ್ಯದಲ್ಲಿ ಸಿಡಿದೇಳಬೇಕಾಗಿದೆ. ಮಧ್ಯ ಪ್ರದೇಶದ 30ರ ಹರೆಯದ ಪಾಟಿದಾರ್ 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ.
ಮೊದಲ ಏಕದಿನ ಪಂದ್ಯವನ್ನು ಆಡಿರುವ ಶ್ರೇಯಸ್ ಅಯ್ಯರ್ ಮುಂದಿನ ಟೆಸ್ಟ್ ಸರಣಿಗೆ ಸಜ್ಜಾಗಲು ಇಂಟರ್ ಸ್ಕ್ವಾಡ್ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ.
ಬೋಲ್ಯಾಂಡ್ ಪಾರ್ಕ್ ಪಿಚ್ ಹೆಚ್ಚಾಗಿ ಬ್ಯಾಟರ್ ಗಳ ಸ್ನೇಹಿಯಾಗಿದೆ. 2ನೇ ಪಂದ್ಯ ನಡೆದಿದ್ದ ಪೋರ್ಟ್ ಎಲಿಝಬೆತ್ ಸ್ಟೇಡಿಯಮ್ ಪಿಚ್ ಮೊದಲ ಇನಿಂಗ್ಸ್ನಲ್ಲಿ ಸ್ವಲ್ಪ ಅಸ್ಥಿರವಾಗಿ ವರ್ತಿಸಿತ್ತು. ಪಾರ್ಲ್ ಸ್ಟೇಡಿಯಮ್ ಪಿಚ್ ಬ್ಯಾಟರ್ ಗಳಿಗೆ ನಿರ್ಭಿತಿಯಿಂದ ಆಡಲು ಅನುವು ಮಾಡಿಕೊಡಲಿದೆ.
2ನೇ ಪಂದ್ಯದಲ್ಲಿ 12 ರನ್ ಗೆ ಔಟಾಗಿದ್ದ ಕೇರಳದ ಬ್ಯಾಟರ್ ಸಂಜು ಸ್ಯಾಮ್ಸನ್ ಗೆ ಮತ್ತೊಂದು ಅವಕಾಶ ನೀಡಲು ಟೀಮ್ ಮ್ಯಾನೇಜ್ಮೆಂಟ್ ಚಿಂತಿಸಬಹುದು.
ಮೂರನೇ ಏಕದಿನ ಪಂದ್ಯಕ್ಕಿಂತ ಮೊದಲು ಭಾರತಕ್ಕೆ ಬೌಲಿಂಗ್ ವಿಭಾಗ ಸ್ವಲ್ಪ ತಲೆನೋವು ತಂದಿದೆ. ಬಂಗಾಳದ ವೇಗದ ಬೌಲರ್ ಮುಕೇಶ್ ಕುಮಾರ್ ಕಳೆದ ಎರಡು ಪಂದ್ಯಗಳಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಸರಣಿಯ ಮೊದಲ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಹಾಗೂ ಅವೇಶ್ ಖಾನ್ ಉತ್ತಮ ಪ್ರದರ್ಶನ ನೀಡಿದ್ದರು. ಎರಡನೇ ಪಂದ್ಯದಲ್ಲೂ ಸಾಧಾರಣ ಪ್ರದರ್ಶನ ನೀಡಿದ್ದಾರೆ. ದಕ್ಷಿಣ ಆಫ್ರಿಕಾವನ್ನು ಕಟ್ಟಿಹಾಕಲು ಮಕೇಶ್ ಕುಮಾರ್ ಹೊಸ ಚೆಂಡಿನಲ್ಲಿ ಲಯ ಕಂಡುಕೊಂಡು ಬೇಗನೆ ವಿಕೆಟ್ ಪಡೆಯಬೇಕಾಗಿದೆ.
ಹಿರಿಯ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ರನ್ನು ಟೀಮ್ ಮ್ಯಾನೇಜ್ಮೆಂಟ್ ಆಡುವ 11ರ ಬಳಗಕ್ಕೆ ಸೇರಿಸಿಕೊಳ್ಳಬಹುದು. ಗುರುವಾರದ ಪಂದ್ಯದೊಂದಿಗೆ ಚಹಾಲ್ ಅವರ ದಕ್ಷಿಣ ಆಫ್ರಿಕಾ ಪ್ರವಾಸ ಕೊನೆಯಾಗಲಿದೆ.
ಚಹಾಲ್ ವಿಜಯ್ ಹಝಾರೆ ಟ್ರೋಫಿಯಲ್ಲಿ ಹರ್ಯಾಣದ ಪರ ಉತ್ತಮವಾಗಿ ಆಡಿದ್ದರು.
ಆದಾಗ್ಯೂ ಟೀಮ್ ಮ್ಯಾನೇಜ್ಮೆಂಟ್ ಚಹಾಲ್ ಗೆ ಅವಕಾಶ ನೀಡಲು ಅಕ್ಷರ್ ಪಟೇಲ್ ಅಥವಾ ಕುಲದೀಪ್ ಯಾದವ್ ಅವರನ್ನು ಇನ್ನಷ್ಟೇ ಮನವೊಲಿಸಬೇಕಾಗಿದೆ.
ಸ್ಪಿನ್ನರ್ ಗಳಾದ ಕುಲದೀಪ್ ಹಾಗೂ ಅಕ್ಷರ್ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಕಾರಣ ಅವರಿಗೆ ಇನ್ನಷ್ಟು ಅವಕಾಶವಿದೆ.
ಎಡಗೈ ಬ್ಯಾಟರ್ ಟೋನಿ ಡಿ ರೆರ್ಝಿ ದಕ್ಷಿಣ ಆಫ್ರಿಕಾ ತಂಡಕ್ಕೆ 2ನೇ ಪಂದ್ಯದಲ್ಲಿ ಉತ್ತಮ ಆರಂಭ ಒದಗಿಸುವ ಮೂಲಕ ದೀರ್ಘಕಾಲದಿಂದ ಕ್ವಿಂಟನ್ ಡಿಕಾಕ್ರಿಂದ ತೆರವಾದ ಸ್ಥಾನ ತುಂಬುವ ವಿಶ್ವಾಸ ಮೂಡಿಸಿದ್ದಾರೆ.
ಪಂದ್ಯದ ಸಮಯ: ಸಂಜೆ 4:30