ಬಾಂಗ್ಲಾದೇಶ ಕ್ರಿಕೆಟ್ ತಂಡದಲ್ಲಿ ಶಾಕಿಬ್ ಅಲ್ ಹಸನ್ ಕಾಲದ ಅಂತ್ಯ
ಢಾಕಾ : ಆಲ್ರೌಂಡರ್ ಶಾಕಿಬ್ ಅಲ್ ಹಸನ್ ರ ನಾಪತ್ತೆಯ ಬಗ್ಗೆ ಯೋಚಿಸುವುದಕ್ಕಿಂತಲು ಹೆಚ್ಚು ನಾವು ದಕ್ಷಿಣ ಆಫ್ರಿಕ ವಿರುದ್ಧದ ಸ್ಪರ್ಧೆಯ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದೇವೆ ಎಂದು ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ನಜ್ಮುಲ್ ಹುಸೈನ್ ಶಾಂಟೊ ಹೇಳಿದ್ದಾರೆ.
ಬಾಂಗ್ಲಾದೇಶವು ಸೋಮವಾರ ಮೀರ್ಪುರದಲ್ಲಿ ಆರಂಭಗೊಳ್ಳಲಿರುವ ಮೊದಲ ಟೆಸ್ಟ್ ನಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕವನ್ನು ಎದುರಿಸಲಿದೆ. ಎರಡು ಟೆಸ್ಟ್ ಗಳ ಹಾಲಿ ಸರಣಿಯು, ಇತ್ತೀಚೆಗೆ ನಡೆದ ಬಂಡಾಯದ ಬಳಿಕ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮೊದಲ ಅಂತರ್ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯಾಗಿದೆ. ವಿದ್ಯಾರ್ಥಿಗಳ ನೇತೃತ್ವದ ಬಂಡಾಯದ ಹಿನ್ನೆಲೆಯಲ್ಲಿ, ಮಾಜಿ ಪ್ರಧಾನಿ ಶೇಕ್ ಹಸೀನಾ ಅಧಿಕಾರದಿಂದ ಕೆಳಗಿಳಿದು ಭಾರತಕ್ಕೆ ಪಲಾಯನಗೈದಿದ್ದಾರೆ.
ಭದ್ರತಾ ಭೀತಿಯ ಹಿನ್ನೆಲೆಯಲ್ಲಿ, ಶಾಕಿಬ್ ಅಲ್ ಹಸನ್ ಬಾಂಗ್ಲಾದೇಶದ ಪಾಕಿಸ್ತಾನ ಪ್ರವಾಸದ ಬಳಿಕ ಸ್ವದೇಶಕ್ಕೆ ಮರಳಿಲ್ಲ. ಹಾಗಾಗಿ, ಅವರ ಸ್ಥಾನದಲ್ಲಿ ತಂಡಕ್ಕೆ ಹೊಸಬ ಎಡಗೈ ಸ್ಪಿನ್ನರ್ ಹಸನ್ ಮುರಾದ್ರನ್ನು ಸೇರಿಸಿಕೊಳ್ಳಲಾಗಿದೆ.
ಶಾಕಿಬ್ ಕಳೆದ ತಿಂಗಳು ಅಂತರ್ರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಸ್ವದೇಶದಲ್ಲಿ ಕೊನೆಯ ಟೆಸ್ಟ್ ಸರಣಿಯೊಂದನ್ನು ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
37 ವರ್ಷದ ಶಾಕಿಬ್ ಬಂಡಾಯಕ್ಕಿಂತ ಮೊದಲು ಅಧಿಕಾರದಲ್ಲಿದ್ದ ಸರಕಾರದಲ್ಲಿ ಸಂಸದರಾಗಿದ್ದರು. ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಸೀನಾ ಜೊತೆಗೆ ಅವರು ಹೊಂದಿರುವ ನಂಟಿನಿಂದಾಗಿ ಅವರು ಸಾರ್ವಜನಿಕ ಆಕ್ರೋಶವನ್ನು ಎದುರಿಸುತ್ತಿದ್ದಾರೆ.
‘‘ಈ ಬಗ್ಗೆ ತುಂಬಾ ಯೋಚಿಸುವುದು ಸಮಯವನ್ನು ವ್ಯರ್ಥ ಮಾಡಿದಂತೆ. ಯಾಕೆಂದರೆ ಅದರ ನಿಯಂತ್ರಣ ನಮ್ಮ ಕೈಯಲ್ಲಿಲ್ಲ’’ ಎಂದು ಮೀರ್ಪುರ್ ಟೆಸ್ಟ್ ನ ಮುನ್ನಾ ದಿನವಾದ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಜ್ಮುಲ್ ಹೇಳಿದರು.
ಶೇಕ್ ಹಸೀನಾರ ಢಾಕಾದಲ್ಲಿರುವ ಅರಮನೆಗೆ ಪ್ರತಿಭಟನಕಾರರು ಮುತ್ತಿಗೆ ಹಾಕಲು ಸಜ್ಜಾದಾಗ, ಅವರು ಆಗಸ್ಟ್ 5ರಂದು ಹೆಲಿಕಾಪ್ಟರ್ ಒಂದರಲ್ಲಿ ಭಾರತಕ್ಕೆ ಪಲಾಯನಗೈದಿದ್ದಾರೆ. ಬಂಡಾಯದ ವೇಳೆ 700ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.