ಐಪಿಎಲ್‌ನಲ್ಲಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ ಶಿಖರ್ ಧವನ್

Update: 2024-08-24 16:28 GMT

ಶಿಖರ್ ಧವನ್ | PTI 

ಹೊಸದಿಲ್ಲಿ: ಭಾರತದ ಶ್ರೇಷ್ಠ ಸೀಮಿತ ಓವರ್‌ಗಳ ಕ್ರಿಕೆಟ್‌ನ ಆರಂಭಿಕರ ಪೈಕಿ ಒಬ್ಬರಾಗಿರುವ ಶಿಖರ್ ಧವನ್ ಶನಿವಾರ ದೇಶಿ ಮತ್ತು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಕೋರಿದ್ದಾರೆ. ತನ್ನ ಅಭಿಮಾನಿಗಳಿಗಾಗಿ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಭಾವನಾತ್ಮಕ ಸಂದೇಶವೊಂದರಲ್ಲಿ, ಎಡಗೈ ಬ್ಯಾಟರ್ ಎಲ್ಲಾ ಮಾದರಿಗಳ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ತನ್ನ ನಿರ್ಧಾರವನ್ನು ಘೋಷಿಸಿದ್ದಾರೆ.

ಧವನ್ ಕೊನೆಯದಾಗಿ ಭಾರತದ ಪರವಾಗಿ ಆಡಿದ್ದು 2022ರಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ. ಆದರೆ, ಕಳೆದ ಎರಡು ವರ್ಷಗಳಲ್ಲಿ ಅವರ ಆರಂಭಿಕ ಬ್ಯಾಟರ್‌ನ ಸ್ಥಾನ ಶುಬ್‌ಮನ್ ಗಿಲ್ ಮತ್ತು ಇತರ ಯುವ ಬ್ಯಾಟರ್‌ಗಳಿಗೆ ಹೋಗಿದೆ.

ಆದರೆ, ರಾಷ್ಟ್ರೀಯ ತಂಡದಿಂದ ಹೊರಹೋದರೂ, ಲೀಗ್ ಕ್ರಿಕೆಟ್‌ನಲ್ಲಿ, ಅದರಲ್ಲೂ ಮುಖ್ಯವಾಗಿ ಐಪಿಎಲ್‌ನಲ್ಲಿ ಮುಂದುವರಿಯುವ ಸೂಚನೆಯನ್ನು 38 ವರ್ಷದ ಧವನ್ ನೀಡಿದ್ದಾರೆ.

‘‘ಇದೊಂದು ಕಠಿಣ ನಿರ್ಧಾರದಂತೆ ನನಗೆ ಅನಿಸುತ್ತಿಲ್ಲ. ನಾನು ಭಾವವೇಶಕ್ಕೂ ಒಳಗಾಗಿಲ್ಲ. ನಾನು ಅಳಬೇಕೆಂದು ಅಥವಾ ಬೇರೇನಾದರೂ ಮಾಡಬೇಕೆಂದೂ ಅನಿಸುತ್ತಿಲ್ಲ. ಆದರೆ, ನನ್ನಲ್ಲಿ ಕೃತಜ್ಞತಾ ಭಾವ ಮತ್ತು ಪ್ರೀತಿಯೇ ತುಂಬಿಕೊಂಡಿದೆ. ನಾನು ನನ್ನ ಬದುಕಿನ ಹೆಚ್ಚಿನ ಭಾಗವನ್ನು ಕ್ರಿಕೆಟ್ ಆಡುತ್ತಾ ಕಳೆದೆ. ಇನ್ನು ಅಂತರ್‌ರಾಷ್ಟ್ರೀಯ ಮತ್ತು ದೇಶಿ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆಯಬೇಕು ಎಂದು ಬಯಸುವ ಹಂತವನ್ನು ನಾನೀಗ ತಲುಪಿದ್ದೇನೆ ಎಂದು ನನಗನಿಸುತ್ತದೆ’’ ಎಂದು ಅವರು ‘ಹಿಂದೂಸ್ತಾನ್ ಟೈಮ್ಸ್’ನೊಂದಿಗೆ ಮಾತನಾಡುತ್ತಾ ಹೇಳಿದರು.

ಧವನ್ ‘ಎಕ್ಸ್’ನಲ್ಲಿ ಹಾಕಿದ ತನ್ನ ಸುದೀರ್ಘ ವೀಡಿಯೊ ವಿದಾಯ ಸಂದೇಶದಲ್ಲಿ, ತನ್ನ ಕ್ರೀಡಾ ಜೀವನದ ಉದ್ದಕ್ಕೂ ತನ್ನ ಮೇಲೆ ಇಟ್ಟಿರುವ ಪ್ರೀತಿ ಮತ್ತು ನೀಡಿರುವ ಬೆಂಬಲಕ್ಕಾಗಿ ತನ್ನ ಅಭಿಮಾನಿಗಳು ಮತ್ತು ಕ್ರಿಕೆಟ್ ಅಸೋಸಿಯೇಶನ್‌ಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

‘‘ನಾನು ಈಗ ಎಲ್ಲಿರುವೆನೋ ಅಲ್ಲಿ ನಿಂತು ಹಿಂದಕ್ಕೆ ನೋಡಿದಾಗ ನನಗೆ ನೆನಪುಗಳಷ್ಟೇ ಕಾಣುತ್ತಿವೆ ಮತ್ತು ಮುಂದಕ್ಕೆ ನೋಡಿದಾಗ ಹೊಸ ಬದುಕೊಂದು ಕಾಣುತ್ತಿದೆ. ಭಾರತಕ್ಕಾಗಿ ಆಡುವುದು ಯಾವತ್ತೂ ನನ್ನ ಕನಸಾಗಿತ್ತು ಮತ್ತು ಆ ಕನಸು ನನಸಾಯಿತು. ಅದಕ್ಕಾಗಿ ನಾನು ತುಂಬಾ ಜನರಿಗೆ ಆಭಾರಿಯಾಗಿದ್ದೇನೆ. ಮೊದಲಿಗೆ, ನನ್ನ ಕುಟುಂಬ, ನನ್ನ ಬಾಲ್ಯದ ಕೋಚ್‌ಗಳು ಮತ್ತು ಬಳಿಕ ನಾನು ಹಲವಾರು ವರ್ಷಗಳವರೆಗೆ ಆಡಿದ ನನ್ನ ತಂಡ. ನನಗೆ ಹೊಸ ಕುಟುಂಬ, ಕೀರ್ತಿ ಮತ್ತು ಪ್ರೀತಿ ಸಿಕ್ಕಿತು. ಆದರೆ, ಮುಂದೆ ಹೋಗಬೇಕಾದರೆ ಪುಟಗಳನ್ನು ತಿರುಗಿಸಬೇಕು ಎಂಬ ಮಾತಿದೆ’’ ಎಂಬುದಾಗಿ ಧವನ್ ‘ಎಕ್ಸ್’ನಲ್ಲಿ ಬರೆದಿದ್ದಾರೆ.

‘‘ಅಂತರ್‌ರಾಷ್ಟ್ರೀಯ ಮತ್ತು ದೇಶಿ ಕ್ರಿಕೆಟ್‌ನಿಂದ ನಾನು ನಿವೃತ್ತಿ ಘೋಷಿಸುತ್ತಿದ್ದೇನೆ. ನನ್ನ ಕ್ರಿಕೆಟ್ ಯಾನಕ್ಕೆ ವಿದಾಯ ಕೋರುತ್ತಿರುವಂತೆಯೇ, ನನ್ನ ಹೃದಯದಲ್ಲಿ ಶಾಂತಿ ನೆಲೆಸಿದೆ. ನಾನು ನನ್ನ ದೇಶಕ್ಕಾಗಿ ತುಂಬಾ ಕ್ರಿಕೆಟ್ ಆಡಿದ್ದೇನೆ. ‘ಮತ್ತೊಮ್ಮೆ ನಿನ್ನ ದೇಶಕ್ಕಾಗಿ ಆಡದಿರುವ ಬಗ್ಗೆ ನೀನು ಹತಾಶನಾಗಬೇಕಾಗಿಲ್ಲ, ದೇಶಕ್ಕಾಗಿ ಆಡುವ ಅವಕಾಶ ನಿನಗೆ ಸಿಕ್ಕಿದೆ ಎಂಬ ಬಗ್ಗೆ ಸಂತೋಷ ಪಡು’ ಎಂದಷ್ಟೇ ನಾನು ನನ್ನನ್ನು ಉದ್ದೇಶಿಸಿ ಹೇಳುತ್ತೇನೆ’’ ಎಂಬುದಾಗಿ ಬರೆದು ಅವರು ತನ್ನ ವಿದಾಯ ಸಂದೇಶವನ್ನು ಮುಕ್ತಾಯಗೊಳಿಸಿದ್ದಾರೆ.

ಧವನ್ ಒಟ್ಟು 269 ಅಂತರ್‌ರಾಷ್ಟ್ರೀಯ ಪಂದ್ಯಗಳಿಂದ 10,867 ರನ್‌ಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ 24 ಶತಕಗಳು ಮತ್ತು 44 ಅರ್ಧ ಶತಕಗಳಿವೆ.

ಧವನ್ ಭಾರತದ ಪರವಾಗಿ 34 ಟೆಸ್ಟ್‌ಗಳು, 167 ಏಕದಿನ ಪಂದ್ಯಗಳು ಮತ್ತು 68 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ ಪಂದ್ಯಗಳಲ್ಲಿ 40.61ರ ಸರಾಸರಿಯಲ್ಲಿ 2,315 ರನ್‌ಗಳನ್ನು ಸಂಪಾದಿಸಿದರೆ, ಏಕದಿನ ಪಂದ್ಯಗಳಲ್ಲಿ 44.11ರ ಸರಾಸರಿಯಲ್ಲಿ 6793 ರನ್‌ಗಳನ್ನು ಪೇರಿಸಿದ್ದಾರೆ.

ಅಂಡರ್-19 ವಿಶ್ವಕಪ್‌ನಲ್ಲಿ ಬೆಳಗಿದ ‘ಶಿಖರ’:

ಶಿಖರ್ ಧವನ್ 2004ರ ಅಂಡರ್-19 ವಿಶ್ವಕಪ್‌ನಲ್ಲಿ ಪ್ರವರ್ಧಮಾನಕ್ಕೆ ಬಂದರು. ಆ ಪಂದ್ಯಾವಳಿಯಲ್ಲಿ ಅವರು ಮೂರು ಶತಕಗಳನ್ನು ಒಳಗೊಂಡ 505 ರನ್‌ಗಳನ್ನು ಗಳಿಸಿದರು.

ಅವರು ಭಾರತ ತಂಡಕ್ಕೆ ಪ್ರವೇಶ ಪಡೆದದ್ದು 2010ರಲ್ಲಿ, ಆಸ್ಟ್ರೇಲಿಯ ವಿರುದ್ಧದ ಏಕದಿನ ಪಂದ್ಯದ ಮೂಲಕ. ಆ ಪಂದ್ಯದಲ್ಲಿ ಅವರು ಎರಡು ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾದರು. ಒಂದು ವರ್ಷದ ಬಳಿಕ, ಅವರು ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಿದರು. ಆ ಸರಣಿಯಲ್ಲಿ ಅವರು ಮಾಡಿದ ಅತ್ಯಧಿಕ ರನ್ 51.

ತನ್ನ ನೈಜ ಪ್ರತಿಭೆಯನ್ನು ತೋರಿಸಲು ಅವರು 2013ರವರೆಗೆ ಕಾಯಬೇಕಾಯಿತು. ಆ ವರ್ಷ ನಡೆದ ಆಸ್ಟ್ರೇಲಿಯ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ, ಅವರು ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿದರು. ಅವರು 85 ಎಸೆತಗಳಲ್ಲಿ ಶತಕ ಪೂರೈಸಿದರು. ಅದು ಕ್ರಿಕೆಟಿಗನೊಬ್ಬ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಗಳಿಸಿದ ಅತ್ಯಂತ ವೇಗದ ಶತಕವಾಗಿ ದಾಖಲಾಯಿತು.

ಟೆಸ್ಟ್ ಪಂದ್ಯಗಳಲ್ಲಿ ಶಿಖರ್‌ರ ಸ್ಫೋಟಕ ಆರಂಭವನ್ನು ಕಂಡ ಆಯ್ಕೆಗಾರರು ಅವರನ್ನು ಏಕದಿನ ಪಂದ್ಯಗಳಿಗೂ ಸೆಳೆದರು. 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ, ನಾಯಕ ಮಹೇಂದ್ರ ಸಿಂಗ್ ಧೋನಿ, ಧವನ್ ಮತ್ತು ರೋಹಿತ್ ಶರ್ಮರ ಹೊಸ ಆರಂಭಿಕ ಜೋಡಿಯೊಂದನ್ನು ಒರೆಗೆ ಹಚ್ಚಿದರು. ಧವನ್ ದಕ್ಷಿಣ ಆಫ್ರಿಕ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಬೆನ್ನುಬೆನ್ನಿಗೆ ಶತಕಗಳನ್ನು ಬಾರಿಸಿದರು. ನಂತರದ್ದು ಇತಿಹಾಸ. ಆ ಪಂದ್ಯಾವಳಿಯಲ್ಲಿ ಧವನ್ 363 ರನ್‌ಗಳನ್ನು ಗಳಿಸಿದರು. ಭಾರತ ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿತು ಮತ್ತು ಧವನ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.

2015ರ ವಿಶ್ವಕಪ್‌ನಲ್ಲಿ ಅವರು 8 ಪಂದ್ಯಗಳಿಂದ 51.5ರ ಸರಾಸರಿಯಲ್ಲಿ 412 ರನ್‌ಗಳನ್ನು ಗಳಿಸಿದ ಅವರು ಭಾರತದ ಗರಿಷ್ಠ ರನ್ ಗಳಿಕೆದಾರರಾದರು. ದಕ್ಷಿಣ ಆಫ್ರಿಕದ ವಿರುದ್ಧ ಅವರು ಬಾರಿಸಿದ ಶತಕ (137 ರನ್)ವನ್ನು ಅವರ ಕ್ರೀಡಾ ಬದುಕಿನ ಶ್ರೇಷ್ಠ ಇನಿಂಗ್ಸ್ ಎಂಬುದಾಗಿ ಪರಿಗಣಿಸಲಾಗಿದೆ.

ಅರ್ಜುನ ಪ್ರಶಸ್ತಿ ವಿಜೇತ, ಉದ್ಯಮಿ:

ಶಿಖರ್ ಧವನ್‌ರಿಗೆ 2021ರಲ್ಲಿ ಅರ್ಜುನ ಪ್ರಶಸ್ತಿ ನೀಡಲಾಗಿದೆ.

ಅವರು ಈಗ ಉದ್ಯಮಿಯೂ ಆಗಿದ್ದು, ಸುಮಾರು 630 ಕೋಟಿ ರೂಪಾಯಿ ವೆಚ್ಚದಲ್ಲಿ ‘ಸ್ಪೋರ್ಟ್ಸ್ ಟೆಕ್ನಾಲಜಿ ಫಂಡ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಸೆಲೆಬ್ರಿಟಿ ರಿಯಾಲಿಟಿ ಶೋ ಒಂದರ ನಿರೂಪಕನಾಗಿದ್ದಾರೆ. ಅವರು 2022ರ ಹಿಂದಿ ಚಿತ್ರ ‘ಡಬಲ್ ಎಕ್ಸ್‌ಎಲ್’ನಲ್ಲಿ ನಟಿಸಿದ್ದಾರೆ.

ಈಗ ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿರುವ ತಂಡವೊಂದರ ಮಾಲೀಕನಾಗಿದ್ದಾರೆ.

ತನ್ನ ಸ್ಥಾನ ಕಸಿದುಕೊಂಡ ಶಿಖರ್‌ಗೆ ಸೆಹವಾಗ್ ಸಂದೇಶ:

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹವಾಗ್‌ರ ಸ್ಥಾನವನ್ನು ತುಂಬಿದವರು ಶಿಖರ್ ಧವನ್. ಸೆಹವಾಗ್‌ರಂತೆಯೇ ಶಿಖರ್ ಕೂಡ ಸ್ಫೋಟಕ ಬ್ಯಾಟರ್ ಆದರು. ತನ್ನ ಚೊಚ್ಚಲ ಟೆಸ್ಟ್‌ನಲ್ಲಿ ಅವರು ಆಸ್ಟ್ರೇಲಿಯದ ವಿರುದ್ಧ 185 ರನ್‌ಗಳನ್ನು ಸಿಡಿಸಿದರು. ಆ ಪಂದ್ಯದಲ್ಲಿ ಅವರು ಕೇವಲ 85 ಎಸೆತಗಳಲ್ಲಿ ಶತಕವನ್ನು ಪೂರೈಸಿದರು.

ಆ ಮೂಲಕ ಅವರು ಭಾರತೀಯ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿದರು.

ಸೆಹವಾಗ್‌ರ ಸ್ಥಾನವನ್ನು ಶಿಖರ್ ಧವನ್ ಯಶಸ್ವಿಯಾಗಿ ತುಂಬಿದರು. ಹಾಗಾಗಿ, 2012ರಲ್ಲಿ ತಂಡದಿಂದ ಹೊರಬಿದ್ದ ಬಳಿಕ ಸೆಹವಾಗ್‌ರಿಗೆ ತಂಡಕ್ಕೆ ಮರಳಲು ಸಾಧ್ಯವಾಗಲಿಲ್ಲ.

ಶಿಖರ್ ಧವನ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ, ಸೆಹವಾಗ್ ಭಾವಪೂರ್ಣ ಸಂದೇಶವೊಂದನ್ನು ಕಳುಹಿಸಿದ್ದಾರೆ.

‘‘ಅಭಿನಂದನೆಗಳು ಶಿಖ್ಖಿ. ಮೊಹಾಲಿಯಲ್ಲಿ ನನ್ನ ಸ್ಥಾನವನ್ನು ನೀವು ವಹಿಸಿಕೊಂಡಂದಿನಿಂದ ನೀವು ಹಿಂದಿರುಗಿ ನೋಡಿಲ್ಲ ಮತ್ತು ಈ ವರ್ಷಗಳಲ್ಲಿ ಹಲವು ಶ್ರೇಷ್ಠ ನಿರ್ವಹಣೆಗಳನ್ನು ನೀಡಿದ್ದೀರಿ. ನೀವು ಯಾವಾಗಲೂ ಸಂತೋಷವಾಗಿರಿ ಮತ್ತು ಬದುಕನ್ನು ಸಂಪೂರ್ಣವಾಗಿ ಆನಂದಿಸಿ. ಶುಭಾಶಯಗಳು’’ ಎಂಬುದಾಗಿ ಸೆಹವಾಗ್ ಬರೆದಿದ್ದಾರೆ.

ಚೊಚ್ಚಲ/ಕೊನೆಯ ಪಂದ್ಯಗಳು

ಚೊಚ್ಚಲ ಟೆಸ್ಟ್ 2013 ಮಾರ್ಚ್ 14 (ಆಸ್ಟ್ರೇಲಿಯ)

ಕೊನೆಯ ಟೆಸ್ಟ್ 2018 ಸೆಪ್ಟಂಬರ್ 7 (ಇಂಗ್ಲೆಂಡ್)

ಚೊಚ್ಚಲ ಏಕದಿನ 2010 ಅಕ್ಟೋಬರ್ 20 (ಆಸ್ಟ್ರೇಲಿಯ)

ಕೊನೆಯ ಏಕದಿನ 2022 ಡಿಸೆಂಬರ್ 10 (ಬಾಂಗ್ಲಾದೇಶ)

ಚೊಚ್ಚಲ ಟಿ20 2011 ಜೂನ್ 4 (ವೆಸ್ಟ್ ಇಂಡೀಸ್)

ಕೊನೆಯ ಟಿ20 2021 ಜುಲೈ 29 (ಶ್ರೀಲಂಕಾ)

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News