ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಕೇಂದ್ರೀಯ ಗುತ್ತಿಗೆ ರದ್ದು : ಬಿಸಿಸಿಐ ನಿರ್ಧಾರಕ್ಕೆ ಕಪಿಲ್ ದೇವ್ ಬೆಂಬಲ
ಹೊಸದಿಲ್ಲಿ : ದೇಶೀಯ ಕ್ರಿಕೆಟ್ ನಲ್ಲಿ ಬದ್ಧತೆ ವ್ಯಕ್ತಪಡಿಸದ ಆಟಗಾರರ ಕೇಂದ್ರೀಯ ಗುತ್ತಿಗೆಯನ್ನು ರದ್ದುಪಡಿಸಿದ ಬಿಸಿಸಿಐ ನಿರ್ಧಾರವನ್ನು ಶುಕ್ರವಾರ ಬೆಂಬಲಿಸಿರುವ ಭಾರತದ ಮಾಜಿ ನಾಯಕ ಕಪಿಲ್ ದೇವ್, ಇದರಿಂದ ಕೆಲವು ಆಟಗಾರರಿಗೆ ಸಮಸ್ಯೆ ಆಗುತ್ತದೆ. ಆದರೆ ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಬೇಕೆಂಬ ಕ್ರಿಕೆಟ್ ಮಂಡಳಿಯ ಸೂಚನೆಯನ್ನು ಕಡೆಗಣಿಸಿದ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರನ್ನು ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಬಿಸಿಸಿಐ ಬುಧವಾರ ಕೈಬಿಟ್ಟಿತ್ತು. ಬಿಸಿಸಿಐಯ ಈ ನಿರ್ಧಾರಕ್ಕೆ ಕೆಲವು ಮಾಜಿ ಆಟಗಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕೀರ್ತಿ ಆಝಾದ್ ಹಾಗೂ ಇರ್ಫಾನ್ ಪಠಾಣ್ ಅವರು ಶ್ರೇಯಸ್ ಹಾಗೂ ಇಶಾನ್ ಅವರ ಬೆಂಬಲಕ್ಕೆ ನಿಂತಿದ್ದರು.
ದೇಶೀಯ ಕ್ರಿಕೆಟನ್ನು ಸಂರಕ್ಷಿಸಲು ಅತ್ಯಗತ್ಯವಿರುವ ಹೆಜ್ಜೆಯನ್ನು ತೆಗೆದುಕೊಂಡಿರುವುದಕ್ಕೆ ಬಿಸಿಸಿಐಗೆ ನಾನು ಧನ್ಯವಾದ ಸಲ್ಲಿಸುವೆ. ಅಂತರ್ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಮ್ಮೆ ನೆಲೆ ಕಂಡುಕೊಂಡ ನಂತರ ಆಟಗಾರರು ದೇಶೀಯ ಕ್ರಿಕೆಟನ್ನು ಮರೆತುಬಿಡುವುದನ್ನು ನೋಡಲು ಬೇಸರವಾಗುತ್ತದೆ ಎಂದು 1983ರ ವಿಶ್ವಕಪ್ ವಿಜೇತ ತಂಡದ ನಾಯಕರಾಗಿರುವ ಕಪಿಲ್ ಹೇಳಿದ್ದಾರೆ.
ಕೇಂದ್ರೀಯ ಗುತ್ತಿಗೆಯನ್ನು ಪ್ರಕಟಿಸಿರುವ ಬಿಸಿಸಿಐ, ದೇಶೀಯ ಸ್ಪರ್ಧಾವಳಿಗಳತ್ತ ಗಮನ ನೀಡುವಂತೆ ಆಟಗಾರರನ್ನು ವಿನಂತಿಸಿದೆ.
ವೈಯಕ್ತಿಕ ಕಾರಣಕ್ಕೆ ಡಿಸೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹಿಂದೆ ಸರಿದ ನಂತರ ರಾಷ್ಟ್ರೀಯ ತಂಡದಲ್ಲಿರದ 25ರ ಹರೆಯದ ಕಿಶನ್ ಈ ಋತುವಿನಲ್ಲಿ ರಣಜಿ ಟ್ರೋಫಿಯಲ್ಲಿ ತನ್ನ ತವರು ರಾಜ್ಯ ಜಾರ್ಖಂಡ್ ಪರ ಒಂದೂ ಪಂದ್ಯವನ್ನು ಆಡಿರಲಿಲ್ಲ. ಅದರ ಬದಲಿಗೆ ಮುಂಬರುವ ಐಪಿಎಲ್ ನಲ್ಲಿ ತನ್ನ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಪರ ತಯಾರಿ ನಡೆಸುವತ್ತ ಗಮನ ಹರಿಸಿದ್ದರು.
ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದ ನಂತರ ಭಾರತೀಯ ಕ್ರಿಕೆಟ್ ತಂಡದಿಂದ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್ ಮುಂಬೈ ತಂಡ ಆಡಿರುವ ಬರೋಡಾ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲಭ್ಯವಿರಲಿಲ್ಲ. ಮಾ.2ರಿಂದ ಆರಂಭವಾಗಲಿರುವ ತಮಿಳುನಾಡು ವಿರುದ್ದದ ರಣಜಿ ಸೆಮಿ ಫೈನಲ್ ಪಂದ್ಯಕ್ಕೆ ಮುಂಬೈ ತಂಡಕ್ಕೆ ಲಭ್ಯವಿರುವುದಾಗಿ ತಿಳಿಸಿದ್ದರು.
ಅಂತರ್ರಾಷ್ಟ್ರೀಯ ಆಟಗಾರರು ತಮಗೆ ಸಂಬಂಧಿತ ರಾಜ್ಯಗಳ ರಣಜಿ ಪಂದ್ಯಗಳಿಗೆ ಲಭ್ಯವಿರುವ ಪ್ರಕ್ರಿಯೆಯ ಮೇಲೆ ನಾನು ಯಾವಾಗಲೂ ನಂಬಿಕೆ ಇರಿಸಿದ್ದೇನೆ. ಇದು ದೇಶೀಯ ಆಟಗಾರರಿಗೆ ತಮ್ಮ ಬೆಂಬಲ ನೀಡಲು ನೆರವಾಗುತ್ತದೆ. ಸುಪ್ತ ಪ್ರತಿಭೆಯ ಆಟಗಾರರಿಗೆ ರಾಜ್ಯ ಸಂಸ್ಥೆ ನೀಡುತ್ತಿರುವ ಸೇವೆಗೆ ತಮ್ಮ ಕೊಡುಗೆ ನೀಡಲು ಸೀನಿಯರ್ ಆಟಗಾರರಿಗೆ ಇದು ಸಹಾಯ ಮಾಡುತ್ತದೆ ಎಂದು ಕಪಿಲ್ ದೇವ್ ಹೇಳಿದ್ದಾರೆ.
ಮಾಜಿ ಕ್ರಿಕೆಟಿಗರ ಪಿಂಚಣಿ ಮೊತ್ತವನ್ನು ಹೆಚ್ಚಿಸಿರುವ ಬಿಸಿಸಿಐಗೆ ಕಪಿಲ್ ದೇವ್ ಕೃತಜ್ಞತೆ ವ್ಯಕ್ತಪಡಿಸಿದ್ದು, ಹಲವು ಮಾಜಿ ಆಟಗಾರರ ಕುಟುಂಬಗಳ ಪಿಂಚಣಿ ಹೆಚ್ಚಿಸಿರುವ ಬಿಸಿಸಿಐ ನಿರ್ಧಾರ ನನಗೆ ಖುಷಿ ಕೊಟ್ಟಿದೆ. ಪಿಂಚಣಿಯನ್ನು ಅವಲಂಬಿಸಿರುವ ಕುಟುಂಬಕ್ಕೆ ಇದು ತುಂಬಾ ಸಹಾಯ ಮಾಡಿದೆ ಎಂದರು.
2022ರಲ್ಲಿ ಪುರುಷ ಹಾಗೂ ಮಹಿಳಾ ಕ್ರಿಕೆಟಿಗರಿಗೆ ಬಿಸಿಸಿಐ ತಿಂಗಳ ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಕುರಿತು ಘೋಷಣೆ ಮಾಡಿತ್ತು. ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗರು ಈ ಹಿಂದೆ ತಿಂಗಳಿಗೆ 15,000 ಪಡೆಯುತ್ತಿದ್ದವರು ಈಗ 30 ಸಾವಿರ ರೂ., ಮಾಜಿ ಟೆಸ್ಟ್ ಕ್ರಿಕೆಟಿಗರು ಈ ಮೊದಲು 37,500 ರೂ. ಪಿಂಚಣಿ ಪಡೆಯುತ್ತಿದ್ದರು. ಈಗ 60,000 ರೂ. ಪಿಂಚಣಿ ಪಡೆಯುತ್ತಿದ್ದಾರೆ.