ಭಾರತ ವಿರುದ್ಧ ಗರಿಷ್ಠ ಶತಕ ಗಳಿಸಿ ಜೋ ರೂಟ್ ದಾಖಲೆ ಸರಿಗಟ್ಟಿದ ಸ್ಮಿತ್
ಬ್ರಿಸ್ಬೇನ್: ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯದ ಹಿರಿಯ ಬ್ಯಾಟರ್ ಸ್ಟೀವನ್ ಸ್ಮಿತ್ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಭಾರತ ವಿರುದ್ಧ ಗರಿಷ್ಠ ಟೆಸ್ಟ್ ಶತಕಗಳನ್ನು ಸಿಡಿಸುವ ಮೂಲಕ ಇಂಗ್ಲೆಂಡ್‌ನ ಜೋ ರೂಟ್ ದಾಖಲೆ(10 ಶತಕಗಳು)ಯನ್ನು ಸರಿಗಟ್ಟಿದ್ದಾರೆ.
ಆಸ್ಟ್ರೇಲಿಯದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸ್ಮಿತ್ ಆರನೇ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿದ್ದು, ಮಾರ್ಕ್ ವಾ ಅವರ ದಾಖಲೆ ಮುರಿದಿದ್ದಾರೆ.
ಸ್ಮಿತ್ 190 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ 101 ರನ್ ಗಳಿಸಿ ತನ್ನ ಫಾರ್ಮ್‌ಗೆ ಮರಳಿದ್ದಾರೆ. 25 ಇನಿಂಗ್ಸ್‌ಗಳ ನಂತರ ಮೊದಲ ಬಾರಿ ಶತಕ ಸಿಡಿಸಿದ್ದಾರೆ. ಈ ಹಿಂದೆ ಚೊಚ್ಚಲ ಪಂದ್ಯ ಆಡಿದ 22 ಇನಿಂಗ್ಸ್‌ಗಳ ನಂತರ ತನ್ನ ಮೊದಲ ಟೆಸ್ಟ್ ಶತಕ ಗಳಿಸಿದ್ದರು.
344 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಸ್ಮಿತ್ ಅವರು 47.58ರ ಸರಾಸರಿಯಲ್ಲಿ 16,561 ರನ್ ಗಳಿಸಿದ್ದಾರೆ. ಇದರಲ್ಲಿ 45 ಶತಕಗಳು ಹಾಗೂ 80 ಅರ್ಧಶತಕಗಳಿವೆ. 239 ಗರಿಷ್ಠ ಸ್ಕೋರಾಗಿದೆ.
ಮಾರ್ಕ್ ವಾ 372 ಪಂದ್ಯಗಳಲ್ಲಿ 16,529 ರನ್ ಗಳಿಸಿದ್ದು, ಇದರಲ್ಲಿ 38 ಶತಕಗಳು ಹಾಗೂ 97 ಅರ್ಧಶತಕಗಳಿವೆ. ಗರಿಷ್ಠ ಸ್ಕೋರ್ 173 ಆಗಿದೆ.
ಸ್ಮಿತ್ ಅವರು ಇದೀಗ ಬಾರ್ಡರ್-ಗವಾಸ್ಕರ್ ಟ್ರೋಫಿ ಇತಿಹಾಸದಲ್ಲಿ ಗರಿಷ್ಠ ಶತಕಗಳ ದಾಖಲೆಯನ್ನು ವಿರಾಟ್ ಕೊಹ್ಲಿ ಹಾಗೂ ಸಚಿನ್ ತೆಂಡುಲ್ಕರ್‌ರೊಂದಿಗೆ ಹಂಚಿಕೊಂಡಿದ್ದಾರೆ. ಈ ಇಬ್ಬರು ತಲಾ 9 ಶತಕಗಳನ್ನು ಗಳಿಸಿದ್ದಾರೆ.
ಸ್ಮಿತ್ ಅವರು ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 2,000 ರನ್ ಗಳಿಸಿದ 8ನೇ ಆಟಗಾರ ಎನಿಸಿಕೊಂಡರು. ಸ್ಮಿತ್ 60.81ರ ಸರಾಸರಿಯಲ್ಲಿ 21 ಪಂದ್ಯಗಳಲ್ಲಿ 2,007 ರನ್ ಗಳಿಸಿದ್ದಾರೆ. ಇದರಲ್ಲಿ 9 ಶತಕಗಳು ಹಾಗೂ 5 ಅರ್ಧಶತಕಗಳಿವೆ.