ತೃತೀಯ ಟೆಸ್ಟ್: ಇಂಗ್ಲೆಂಡ್ ಗೆಲುವಿಗೆ 658 ರನ್ ಗುರಿ ನೀಡಿದ ನ್ಯೂಝಿಲ್ಯಾಂಡ್

Update: 2024-12-16 16:21 GMT

ಕೇನ್ ವಿಲಿಯಮ್ಸನ್ | PC : PTI 

ಹ್ಯಾಮಿಲ್ಟನ್: ಕೇನ್ ವಿಲಿಯಮ್ಸನ್ ಸಿಡಿಸಿದ ಶತಕದ (156 ರನ್) ಸಹಾಯದಿಂದ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡವು ಇಂಗ್ಲೆಂಡ್ ತಂಡಕ್ಕೆ ಮೂರನೇ ಟೆಸ್ಟ್ ಪಂದ್ಯದ ಗೆಲುವಿಗೆ 658 ರನ್ ಕಠಿಣ ಗುರಿ ನೀಡಿದೆ.

ಮೂರನೇ ದಿನದಾಟದಂತ್ಯಕ್ಕೆ ಆರಂಭಿಕ ಆಟಗಾರರಾದ ಬೆನ್ ಡಕೆಟ್(4 ರನ್) ಹಾಗೂ ಝಾಕ್ ಕ್ರಾವ್ಲೆ (5 ರನ್) 5ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದ ನಂತರ ಇಂಗ್ಲೆಂಡ್ ತನ್ನ 2ನೇ ಇನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 18 ರನ್ ಗಳಿಸಿದೆ.

ಇಂಗ್ಲೆಂಡ್ ತಂಡವು ಮೊದಲೆರಡು ಟೆಸ್ಟ್ ಪಂದ್ಯಗಳನ್ನು ಸುಲಭವಾಗಿ ಗೆದ್ದುಕೊಂಡು ಸರಣಿಯಲ್ಲಿ ಈಗಾಗಲೇ 2-0 ಮುನ್ನಡೆ ಸಾಧಿಸಿದೆ. ತನ್ನ 2ನೇ ಇನಿಂಗ್ಸ್‌ನಲ್ಲಿ 453 ರನ್ ಗಳಿಸಿದ್ದ ನ್ಯೂಝಿಲ್ಯಾಂಡ್ ತಂಡಕ್ಕೆ ಸಮಾಧಾನಕರ ಗೆಲುವಿಗೆ 8 ವಿಕೆಟ್‌ಗಳ ಅಗತ್ಯವಿದೆ.

ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಮಾಡುವ ಕುರಿತು ಸಂಶಯ ಇರುವ ಕಾರಣ ಕಿವೀಸ್ ಗೆಲುವಿಗೆ ಇನ್ನು 7 ವಿಕೆಟ್‌ಗಳ ಅಗತ್ಯವಿದೆ.

ಸ್ಟೋಕ್ಸ್ ಅವರು ಬೌಲಿಂಗ್ ಮಾಡುವ ವೇಳೆ ಮಂಡಿರಜ್ಜಿನಲ್ಲಿ ನೋವು ಕಾಣಿಸಿಕೊಂಡಿದೆ.

4ನೇ ಇನಿಂಗ್ಸ್‌ನಲ್ಲಿ ವಿಶ್ವ ದಾಖಲೆಯ ಸ್ಕೋರ್ ಗಳಿಸುವ ಗುರಿ ಪಡೆದಿದ್ದ ಇಂಗ್ಲೆಂಡ್ ತಂಡವು ಡಕೆಟ್ ವಿಕೆಟನ್ನು ಬೇಗನೆ ಕಳೆದುಕೊಂಡಿತು. 107ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ವೇಗಿ ಟಿಮ್ ಸೌಥಿ ಅವರು ಡಕೆಟ್ ವಿಕೆಟನ್ನು ಪಡೆದರು.

5 ರನ್‌ಗೆ ಔಟಾದ ಕ್ರಾವ್ಲೆ ಅವರು ಸರಣಿಯಲ್ಲಿ ತಮ್ಮ ಕಳಪೆ ಪ್ರದರ್ಶನ ಮುಂದುವರಿಸಿದರು. ಕ್ರಾವ್ಲೆ ತನ್ನ ಎಲ್ಲ ಆರು ಇನಿಂಗ್ಸ್‌ಗಳಲ್ಲಿ ವೇಗದ ಬೌಲರ್ ಮ್ಯಾಟ್ ಹೆನ್ರಿಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಒಟ್ಟು 52 ರನ್ ಗಳಿಸಿದ್ದರು.

ಜೇಕಬ್ ಬೆಥೆಲ್(9 ರನ್)ಹಾಗೂ ಜೋ ರೂಟ್(0)ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮೊದಲು ಬೆಳಗ್ಗಿನ ಅವಧಿಯ ಆಟವು ಮಳೆಗಾಹುತಿಯಾಯಿತು. ಆದರೆ, ಔಟಾಗದೆ 50 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ವಿಲಿಯಮ್ಸನ್ 33ನೇ ಶತಕ ಸಿಡಿಸಿ ಕಿವೀಸ್ 453 ರನ್ ಗಳಿಸುವಲ್ಲಿ ನೆರವಾದರು. ಟೀ ವಿರಾಮದ ನಂತರ ಶುಐಬ್ ಬಶೀರ್‌ಗೆ(2-170) ಔಟಾದರು. ಕಿವೀಸ್‌ನ ಶ್ರೇಷ್ಠ ರನ್ ಸ್ಕೋರರ್ ವಿಲಿಯಮ್ಸನ್ ತನ್ನ 204 ಎಸೆತಗಳ ಇನಿಂಗ್ಸ್‌ನಲ್ಲಿ 20 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 156 ರನ್ ಗಳಿಸಿದರು.

3 ವಿಕೆಟ್‌ಗೆ 136 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಕಿವೀಸ್ ಪರ ವಿಲಿಯಮ್ಸನ್ ಅವರು ರಚಿನ್ ರವೀಂದ್ರ(44 ರನ್) ಜೊತೆಗೆ 4ನೇ ವಿಕೆಟ್‌ಗೆ 105 ರನ್ ಸೇರಿಸಿದರು.

ಡ್ಯಾರಿಲ್ ಮಿಚೆಲ್(60 ರನ್, 84 ಎಸೆತ) ಇಂಗ್ಲೆಂಡ್‌ನ ಯಶಸ್ವಿ ಬೌಲರ್ ಜೇಕಬ್ ಬೆಥೆಲ್‌ಗೆ(3-72)ವಿಕೆಟ್ ಒಪ್ಪಿಸಿದರು.

ಸತತ 2ನೇ ಅರ್ಧಶತಕದಿಂದ ವಂಚಿತರಾದ ಮಿಚೆಲ್ ಸ್ಯಾಂಟ್ನರ್(49 ರನ್) ಜೋ ರೂಟ್‌ಗೆ ಔಟಾದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News