ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಮುಂಬೈ ಚಾಂಪಿಯನ್
ಬೆಂಗಳೂರು: ಸೂರ್ಯಕುಮಾರ್ ಯಾದವ್ (48 ರನ್, 35 ಎಸೆತ), ಅಜಿಂಕ್ಯ ರಹಾನೆ(37 ರನ್, 30 ಎಸೆತ) ಹಾಗೂ ಸೂರ್ಯಾಂಶ್ ಶೆಡ್ಗೆ(ಔಟಾಗದೆ 36)ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಕ್ರಿಕೆಟ್ ತಂಡವು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ 2022-23ರ ಋತುವಿನಲ್ಲಿ ಗೆದ್ದಿರುವ ಪ್ರಶಸ್ತಿಯನ್ನು ತನ್ನಲ್ಲೆ ಉಳಿಸಿಕೊಂಡಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ತಂಡದ ವಿರುದ್ಧ ಗೆಲ್ಲಲು 175 ರನ್ ಗುರಿ ಬೆನ್ನಟ್ಟಿದ ಮುಂಬೈ ತಂಡವು 17.5 ಓವರ್ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 180 ರನ್ ಗಳಿಸಿತು. ಅಥರ್ವ ಅಂಕೋಲೆಕರ್(ಔಟಾಗದೆ 16 ರನ್, 6 ಎಸೆತ)ಹಾಗೂ ಸೂರ್ಯಾಂಶ್(ಔಟಾಗದೆ 36, 15 ಎಸೆತ, 3 ಬೌಂಡರಿ, 3 ಸಿಕ್ಸರ್)6ನೇ ವಿಕೆಟ್ಗೆ ಕೇವಲ 19 ಎಸೆತಗಳಲ್ಲಿ 51 ರನ್ ಜೊತೆಯಾಟ ನಡೆಸಿ ಎದುರಾಳಿಯಿಂದ ಪಂದ್ಯವನ್ನು ಕಸಿದುಕೊಂಡರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಮಧ್ಯಪ್ರದೇಶ ತಂಡವು ರಜತ್ ಪಾಟಿದಾರ್(ಔಟಾಗದೆ 81, 40 ಎಸೆತ, 6 ಬೌಂಡರಿ, 6 ಸಿಕ್ಸರ್)ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 174 ರನ್ ಗಳಿಸಿತು. ಸುಭ್ರಾಂಶ್ ಸೇನಾಪತಿ(23 ರನ್) ಹಾಗೂ ರಾಹುಲ್ ಬಾಥಮ್(19 ರನ್) ಎರಡಂಕೆಯ ಸ್ಕೋರ್ ಗಳಿಸಿದರು.
ಮುಂಬೈ ಪರ ರಾಯ್ಸ್ಟನ್ ಡಯಾಸ್(2-32) ಹಾಗೂ ಶಾರ್ದೂಲ್ ಠಾಕೂರ್(2-41)ತಲಾ ಎರಡು ವಿಕೆಟ್ ಗಳನ್ನು ಪಡೆದರು.
ಆಲ್ರೌಂಡ್ ಪ್ರದರ್ಶನ ನೀಡಿದ ಸೂರ್ಯಾಂಶ್( 36 ರನ್, 1-32)ಪಂದ್ಯಶ್ರೇಷ್ಠ ಹಾಗೂ ಸರಣಿಯಲ್ಲಿ ಒಟ್ಟು 469 ರನ್ ಗಳಿಸಿರುವ ಅಜಿಂಕ್ಯ ರಹಾನೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.