ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿದ ಸೌರವ್ ಗಂಗುಲಿ

Update: 2024-02-29 15:35 GMT

ಸೌರವ್ ಗಂಗುಲಿ ,ಶ್ರೇಯಸ್ ಅಯ್ಯರ್ , ಇಶಾನ್ ಕಿಶನ್ | Photo: PTI 

ಹೊಸದಿಲ್ಲಿ: ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ರಂತಹ ಆಟಗಾರರು ದೇಶೀಯ ಕ್ರಿಕೆಟ್ ನಲ್ಲಿ ಆಡದೇ ಇರುವುದನ್ನು ನೋಡಿ ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಮೆಂಟ್ ನಲ್ಲಿ ಭಾಗವಹಿಸದೆ ವಿವಾದಕ್ಕೆ ಒಳಗಾಗಿದ್ದ ಟೀಮ್ ಇಂಡಿಯಾ ಆಟಗಾರರಾದ ಅಯ್ಯರ್ ಹಾಗೂ ಕಿಶನ್ ರನ್ನು ಬಿಸಿಸಿಐ ಬುಧವಾರ ಪ್ರಕಟಿಸಿರುವ ವಾರ್ಷಿಕ ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಕೈಬಿಟ್ಟಿತ್ತು.

ಫೆಬ್ರವರಿ 23ರಂದು ನಡೆದಿದ್ದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಿಂದ ಅಯ್ಯರ್ ಹೊರಗುಳಿದಿದ್ದರು.

ಕಿಶನ್ ರಾಷ್ಟ್ರೀಯ ತಂಡದಲ್ಲಿ ಆಡದೇ ಇದ್ದರೂ ಇತ್ತೀಚೆಗೆ ರಣಜಿ ಟ್ರೋಫಿ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ವೈಯಕ್ತಿಕ ವಿಚಾರವನ್ನು ಮುಂದಿಟ್ಟುಕೊಂಡು ಭಾರತೀಯ ತಂಡದಿಂದ ಕಿಶನ್ ಹಿಂದೆ ಸರಿದಿದ್ದರು. ಭಾರತದ ಪರ ಟಿ-20 ಪಂದ್ಯಗಳನ್ನು ಆಡುವ ಉದ್ದೇಶದಿಂದ ಕಳೆದ ವರ್ಷ ನವೆಂಬರ್ ನಲ್ಲಿ ಜಾರ್ಖಂಡ್ ಒಳಗೊಂಡಿರುವ ರಣಜಿ ಪಂದ್ಯಗಳಲ್ಲಿ ಕಿಶನ್ ಆಡಿರಲಿಲ್ಲ.

ರಣಜಿ ಟ್ರೋಫಿ ಪ್ರತಿಷ್ಠಿತ ಸ್ಪರ್ಧಾವಳಿಯಾಗಿರುವ ಕಾರಣ ಎಲ್ಲ ಆಟಗಾರರು ಇದರಲ್ಲಿ ಭಾಗವಹಿಸಲೇಬೇಕು. ಆಟಗಾರರು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಆಡಬೇಕೆಂದು ಬಿಸಿಸಿಐ ಬಯಸುತ್ತದೆ. ರಣಜಿ ಟ್ರೋಫಿಯಲ್ಲಿ ಶ್ರೇಯಸ್ ಅಯ್ಯರ್ ಏಕೆ ಆಡಲಿಲ್ಲ ಎಂಬ ಕುರಿತು ನನಗೆ ಅಚ್ಚರಿಯಾಗುತ್ತಿದೆ. ಇದು ಪ್ರಮುಖ ಟೂರ್ನಮೆಂಟ್ ಆಗಿರುವ ಹಿನ್ನೆಲೆಯಲ್ಲಿ ಅದರಲ್ಲಿ ಆಡಲೇಬೇಕಾಗುತ್ತದೆ. ಅಯ್ಯರ್, ಇಶಾನ್ ಕಿಶನ್ ಗುತ್ತಿಗೆ ರದ್ದುಪಡಿಸಿರುವುದು ಬಿಸಿಸಿಐನ ನಿರ್ಧಾರವಾಗಿದೆ. ಪ್ರತಿಯೊಬ್ಬ ಗುತ್ತಿಗೆ ಆಟಗಾರ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಆಡಬೇಕು ಎಂದು ಗಂಗುಲಿ ಹೇಳಿದ್ದಾರೆ.

ನೀವು ಗುತ್ತಿಗೆ ಆಟಗಾರರಾಗಿದ್ದರೆ, ಪ್ರಮುಖ ಟೂರ್ನಿಯಲ್ಲಿ ಆಡುವ ನಿರೀಕ್ಷೆ ಇರುತ್ತದೆ. ಶ್ರೇಯಸ್ ಅಯ್ಯರ್ ಇದೀಗ ಮುಂಬೈ ಪರ ಸೆಮಿ ಫೈನಲ್ ಪಂದ್ಯ ಆಡಲು ನಿರ್ಧರಿಸಿದ್ದಾರೆ. ಕಿಶನ್ ರಂತಹ ಯುವ ಆಟಗಾರರ ನಿರ್ಧಾರವು ನನಗೆ ಅಚ್ಚರಿವುಂಟು ಮಾಡಿದೆ. ಅವರು ಭಾರತೀಯ ತಂಡದಲ್ಲಿ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿದ್ದಾರೆ. ಐಪಿಎಲ್ ನಲ್ಲಿ ದೊಡ್ಡ ಗುತ್ತಿಗೆಯನ್ನು ಪಡೆದಿದ್ದಾರೆ. ಅವರು ಏಕೆ ಹೀಗೆ ಮಾಡಿದ್ದಾರೆಂದು ನನಗೆ ಗೊತ್ತಿಲ್ಲ. ನೀವು ಭಾರತದ ಪರ ಎಲ್ಲ ಮಾದರಿ ಕ್ರಿಕೆಟ್ ಆಡುವಾಗ ರಣಜಿಯಲ್ಲಿ ಆಡಲೇಬೇಕಾಗುತ್ತದೆ ಎಂದು ಗಂಗುಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News