ಅಜೇಯ ಭಾರತಕ್ಕೆ ರವಿವಾರ ದಕ್ಷಿಣ ಆಫ್ರಿಕಾ ಸವಾಲು
ಕೋಲ್ಕತಾ: ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿರುವ ಏಕೈಕ ತಂಡ ಭಾರತ ಹಾಗೂ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ರವಿವಾರ ನಡೆಯಲಿರುವ ಪಂದ್ಯದಲ್ಲಿ ಸೆಣಸಾಡಲಿದ್ದು, ತೀವ್ರ ಪೈಪೋಟಿಯ ಪ್ರದರ್ಶನವನ್ನು ನಿರೀಕ್ಷಿಸಲಾಗುತ್ತಿದೆ.
2011ರ ಆವೃತ್ತಿಯ ವಿಶ್ವಕಪ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಮಾತ್ರ 3 ವಿಕೆಟ್‌ನಿಂದ ಸೋತಿತ್ತು. ನಾಗ್ಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತವು ಸಚಿನ್ ತೆಂಡುಲ್ಕರ್ ಶತಕದ ಹೊರತಾಗಿಯೂ ಬ್ಯಾಟಿಂಗ್ ಕುಸಿತ ಕಂಡಿತ್ತು. ಆಶೀಶ್ ನೆಹ್ರಾ ಬೌಲಿಂಗ್‌ನಲ್ಲಿ ಹೊಸ ಆಟಗಾರ ರಾಬಿನ್ ಪೀಟರ್ಸನ್ 19 ರನ್ ಗಳಿಸಿ ದ.ಆಫ್ರಿಕಾಕ್ಕೆ ಗೆಲುವು ತಂದುಕೊಟ್ಟಿದ್ದರು.
2011ರ ವಿಶ್ವಕಪ್‌ನಲ್ಲಿ ಆಡಿದ್ದ ವಿರಾಟ್ ಕೊಹ್ಲಿ ಹಾಗೂ ಆರ್.ಅಶ್ವಿನ್ ಮಾತ್ರ ಈಗಿನ ತಂಡದಲ್ಲಿದ್ದಾರೆ.
ಸದ್ಯ ಭಾರತವು ಅಜೇಯ ಗೆಲುವಿನ ಓಟದೊಂದಿಗೆ ಸೆಮಿ ಫೈನಲ್‌ಗೆ ಪ್ರವೇಶಿಸಿದ ಮೊದಲ ತಂಡವಾಗಿದೆ. ಹರಿಣ ಪಡೆಯನ್ನು ಸೋಲಿಸಿ ಒಟ್ಟು 16 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಳ್ಳುವ ಇರಾದೆಯಲ್ಲಿದೆ. ಮುಂಬೈನಲ್ಲಿ ಶ್ರೀಲಂಕಾ ವಿರುದ್ಧ ಐಸಿಸಿ ವಿಶ್ವಕಪ್ ಇತಿಹಾಸದಲ್ಲಿ 2ನೇ ಅತಿದೊಡ್ಡ ಗೆಲುವು (302 ರನ್)ದಾಖಲಿಸಿದೆ.
ಮತ್ತೊಂದೆಡೆ ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್ ಅಭಿಯಾನದಲ್ಲಿ ಧರ್ಮಶಾಲಾದಲ್ಲಿ ನೆದರ್‌ಲ್ಯಾಂಡ್ಸ್ ವಿರುದ್ದ ಮಾತ್ರ ಸೋತಿತ್ತು. ಆರು ಪಂದ್ಯಗಳಲ್ಲಿ ಜಯ ಸಾಧಿಸಿರುವ ಆಫ್ರಿಕಾ ತಂಡ ಬಲಿಷ್ಠ ಬ್ಯಾಟಿಂಗ್ ಸರದಿ ಹೊಂದಿದೆ. ಪವರ್-ಹಿಟ್ಟರ್‌ಗಳ ಹಾಗೂ ಗೇಮ್ ಚೇಂಜರ್‌ಗಳ ದಂಡೇ ಇದೆ. ಇವರು ಭಾರತದ ವೇಗದ ದಾಳಿಗೆ ಸವಾಲಾಗಬಲ್ಲರು. ಸೆಮಿ ಫೈನಲ್‌ಗೆ ಮೊದಲು ಗ್ರೂಪ್ ಟಾಪರ್ ಯಾರೆಂಬುದನ್ನು ಈ ಪಂದ್ಯ ನಿರ್ಧರಿಸುತ್ತದೆ.
ದಕ್ಷಿಣ ಆಫ್ರಿಕಾ ಪ್ರಸಕ್ತ ವಿಶ್ವಕಪ್‌ನಲ್ಲಿ ನಿರಂತರವಾಗಿ ಗರಿಷ್ಠ ಸ್ಕೋರ್ ಗಳಿಸುತ್ತಾ ಬಂದಿದ್ದು, ಬೌಲರ್‌ಗಳಿಗೆ ಸವಾಲಾಗಿದೆ. ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾದ ವಿರುದ್ಧ 5 ವಿಕೆಟ್ ನಷ್ಟಕ್ಕೆ 428 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾ ಪ್ರಸಕ್ತ ವಿಶ್ವಕಪ್‌ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ತಂಡ ಎನಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಎಲ್ಲ 5 ಪಂದ್ಯಗಳಲ್ಲಿ 300ಕ್ಕೂ ಅಧಿಕ ರನ್ ಗಳಿಸಿದೆ. ನ್ಯೂಝಿಲ್ಯಾಂಡ್ ವಿರುದ್ಧದ ಹಿಂದಿನ ಪಂದ್ಯದಲ್ಲಿ 190 ರನ್‌ನಿಂದ ಜಯ ದಾಖಲಿಸಿದೆ. ಕ್ವಿಂಟನ್ ಡಿಕಾಕ್ 7 ಪಂದ್ಯಗಳಲ್ಲಿ ಒಟ್ಟು 545 ರನ್ ಗಳಿಸಿ ಗರಿಷ್ಠ ಸ್ಕೋರರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಚೇಸ್ ವಿಚಾರದಲ್ಲಿ ದಕ್ಷಿಣ ಆಫ್ರಿಕಾದ ದೌರ್ಬಲ್ಯ ಹೊಂದಿದೆ. ನೆದರ್‌ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಇದು ಸಾಬೀತಾಗಿದೆ. ಡಚ್ಚರ ವಿರುದ್ಧ 245 ರನ್ ಚೇಸ್ ವೇಳೆ ಆಫ್ರಿಕನ್ನರು 207 ರನ್‌ಗೆ ಆಲೌಟಾಗಿದ್ದರು. ಇಬ್ಬನಿಯ ಕಾರಣಕ್ಕೆ 2ನೇ ಬ್ಯಾಟಿಂಗ್‌ಗೆ ಹಿಂಜರಿಯುತ್ತಿರುವ ದಕ್ಷಿಣ ಆಫ್ರಿಕಾವು ಮೊದಲು ಬ್ಯಾಟಿಂಗ್ ಮಾಡಲು ಆದ್ಯತೆ ನೀಡಲಿದೆ.
ಮತ್ತೊಂದೆಡೆ ಭಾರತವು ಚೇಸ್ ಮಾಸ್ಟರ್ ಎನಿಸಿಕೊಂಡಿದೆ. ಕಡಿಮೆ ಮೊತ್ತ ಗಳಿಸಿದ್ದರೂ ಬೌಲಿಂಗ್ ಬಲದಿಂದ ಪಂದ್ಯ ಗೆದ್ದುಕೊಂಡಿದೆ. ಇಬ್ಬನಿಯ ಕಾಟದಿಂದಾಗಿ ಈಡನ್‌ಗಾರ್ಡನ್ಸ್‌ನಲ್ಲಿ ಚೇಸಿಂಗ್ ಸುಲಭವಾಗುವ ಸಾಧ್ಯತೆ ಇದೆ. ಆದರೆ ದಕ್ಷಿಣ ಆಫ್ರಿಕಾ ಭರ್ಜರಿ ಮೊತ್ತ ದಾಖಲಿಸುವ ವಿಶ್ವಾಸದಲ್ಲಿದೆ.
ಹಾರ್ದಿಕ್ ಪಾಂಡ್ಯ ಗಾಯಗೊಂಡು ಟೂರ್ನಿಯಿಂದ ಹೊರಗುಳಿದ ನಂತರ ಆಡುವ ಬಳಗಕ್ಕೆ ಸೇರಿದ ಭಾರತದ ವೇಗಿ ಮುಹಮ್ಮದ್ ಶಮಿ ಅತ್ಯುತ್ತಮ ಪ್ರದರ್ಶನದಿಂದ ಗಮನ ಸೆಳೆಯುತ್ತಿದ್ದಾರೆ. ವಿಶ್ವಕಪ್‌ನಲ್ಲಿ ಆಡಿರುವ 3 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಜಸ್ಟ್ರೀತ್ ಬುಮ್ರಾ ಹಾಗೂ ಮುಹಮ್ಮದ್ ಸಿರಾಜ್ ಕೂಡ ಹೊಸ ಚೆಂಡಿನಲ್ಲಿ ಎದುರಾಳಿಗೆ ಭಯಹುಟ್ಟಿಸುತ್ತಿದ್ದಾರೆ. ಬುಮ್ರಾ ಹಾಗೂ ಸಿರಾಜ್ ಪವರ್ ಪ್ಲೇನಲ್ಲಿ ತಲಾ 10 ವಿಕೆಟ್‌ಗಳನ್ನು ಪಡೆದಿದ್ದಾರೆ. ಪವರ್‌ಪ್ಲೇನಲ್ಲಿ ಭಾರತ ಹೆಚ್ಚು ರನ್ ನೀಡದ ತಂಡ ಎನಿಸಿಕೊಂಡಿದೆ.
ಕ್ವಿಂಟನ್ ಡಿಕಾಕ್ ಹಾಗೂ ರಾಸ್ಸಿ ವಾನ್‌ಡರ್ ಡುಸ್ಸೆನ್ ಈ ಬಾರಿ ವಿಶ್ವಕಪ್‌ನಲ್ಲಿ ತಲಾ 3 ಶತಕಗಳನ್ನು ಗಳಿಸಿದ್ದಾರೆ. ಹೆನ್ರಿಕ್ ಕ್ಲಾಸೆನ್ ಸ್ಪಿನ್ ಬೌಲರ್ ಎದುರು ಆಕ್ರಮಣಕಾರಿಯಾಗಿ ಆಡಬಲ್ಲರು.
ಭಾರತದ ಬಲಿಷ್ಠ ಬ್ಯಾಟಿಂಗ್ ಸರದಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿದ್ದಾರೆ. ಈ ಇಬ್ಬರು ಈಡನ್‌ಗಾರ್ಡನ್ಸ್ ಸ್ಟೇಡಿಯಮ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ದಾಖಲೆ ಇದೆ.
ಕೊಹ್ಲಿಗೆ 49ನೇ ಏಕದಿನ ಶತಕ ಪೂರೈಸಲು ಒಂದು ಶತಕದ ಅಗತ್ಯವಿದೆ. ತನ್ನ 35ನೇ ಹುಟ್ಟುಹಬ್ಬದ ದಿನದಂದು ಈ ಮೈಲಿಗಲ್ಲು ತಲುಪಲು ಕೊಹ್ಲಿ ಕಾತರಗೊಂಡಿದ್ದಾರೆ. ಮುಂಬೈನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಬೇಗನೆ ವಿಕೆಟ್ ಒಪ್ಪಿಸಿದ್ದ ರೋಹಿತ್ ದೊಡ್ಡ ಸ್ಕೋರ್ ಗಳಿಸುವತ್ತ ಚಿತ್ತಹರಿಸಿದ್ದು, ತಂಡದ ಪ್ರಮುಖ ಆಟಗಾರನಾಗಿದ್ದಾರೆ.