ಯುರೋ ಕಪ್ : ಇಂಗ್ಲೆಂಡ್ ಗೆ ಸೋಲುಣಿಸಿ ದಾಖಲೆ ಪ್ರಶಸ್ತಿ ಗೆದ್ದ ಸ್ಪೇನ್
ಹೊಸದಿಲ್ಲಿ: ಪಂದ್ಯದ 87ನೇ ನಿಮಿಷದಲ್ಲಿ ಮೈಕೆಲ್ ಒಯರ್ಝೆಬಲ್ ಗಳಿಸಿದ ಗೋಲಿನ ನೆರವಿನಿಂದ ಇಂಗ್ಲೆಂಡ್ ವಿರುದ್ಧ 2-1 ಗೋಲುಗಳ ಜಯ ಸಾಧಿಸಿದ ಸ್ಪೇನ್, ಐತಿಹಾಸಿಕ ನಾಲ್ಕನೇ ಬಾರಿ ಯೂರೋಪಿಯನ್ ಚಾಂಪಿಯನ್ ಶಿಪ್ ಪ್ರಶಸ್ತಿ ಗೆದ್ದುಕೊಂಡಿದೆ.
ಈ ಗೆಲುವಿನ ಮೂಲಕ ಸ್ಪೇನ್ ಗೆಲುವಿನ ದಾಖಲೆ ಮತ್ತಷ್ಟು ವಿಸ್ತರಿಸಲ್ಪಟ್ಟಿತು. ಇದಕ್ಕೂ ಮುನ್ನ 1964, 2008 ಹಾಗೂ 2012ರಲ್ಲಿ ಸ್ಪೇನ್ ಪ್ರಶಸ್ತಿ ಪಡೆದಿತ್ತು. ಪಂದ್ಯ ಇನ್ನೇನು ಹೆಚ್ಚುವರಿ ಸಮಯಕ್ಕೆ ವಿಸ್ತರಣೆಯಾಗುತ್ತದೆ ಎಂಬ ಹಂತದಲ್ಲಿ ಮಾರ್ಕ್ ಕುಕ್ರೆಲ್ಲಾ ಅವರ ಕ್ರಾಸ್ ಅನ್ನು ನಿಯಂತ್ರಣಕ್ಕೆ ಪಡೆದ ಒಯರ್ಝಬಲ್ ಅದನ್ನು ಗೋಲಾಗಿ ಪರಿವರ್ತಿಸುವ ಮೂಲಕ ನಿರ್ಣಾಯಕ ಗೋಲು ಗಳಿಸಿದರು.
ಇದಕ್ಕೂ ಮುನ್ನ ಪಂದ್ಯದಲ್ಲಿ ಸಮಬಲ ಸಾಧಿಸುವ ಇಂಗ್ಲೆಂಡ್ ಪ್ರಯತ್ನದಲ್ಲಿ ಬದಲಿ ಆಟಗಾರ ಕೋಲ್ ಪಾಲ್ಮರ್ ಯಶಸ್ವಿಯಾದರು. 73ನೇ ನಿಮಿಷದಲ್ಲಿ ಇವರು ಗಳಿಸಿದ ಗೋಲು, ಪಂದ್ಯದ ಉತ್ತರಾರ್ಧದಲ್ಲಿ ನಿಕೊ ವಿಲಿಯಮ್ಸ್ ಗಳಿಸಿದ ಮುನ್ನಡೆಯನ್ನು ಸಮಗೊಳಿಸಿತು. ವಿಲಿಯಮ್ಸ್ 47ನೇ ನಿಮಿಷದಲ್ಲಿ, 17 ವರ್ಷದ ಲಮೈನ್ ಯಮಲ್ ಅವರ ನೆರವಿನಿಂದ ಗೋಲು ಗಳಿಸಿದರು.
ಇಂದಿನ ಫಲಿತಾಂಶದಿಂದಾಗಿ, 1966ರಲ್ಲಿ ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಸುಧೀರ್ಘ ಅವಧಿಯ ಪ್ರಶಸ್ತಿ ಬರದ ಸರಣಿ ಮುಂದುವರಿದಂತಾಗಿದೆ. ಇದೀಗ ಯೂರೊ ಫೈನಲ್ ನಲ್ಲಿ ಕೂಡಾ ನಿರಾಸೆ ಅನುಭವಿಸಿದೆ. ಅಂತರಾಷ್ಟ್ರೀಯ ವೇದಿಕೆಯಲ್ಲಿ ತನ್ನ ಸಾಮರ್ಥ್ಯವನ್ನು ಯಶಸ್ಸಾಗಿ ಪರಿವರ್ತಿಸಲು ಇಂಗ್ಲೆಂಡ್ ಮತ್ತೆ ವಿಫಲವಾಗಿದೆ.