ಲೆಜೆಂಡರಿ ಪರ್ಸಿ ಅಬೆಸೇಕರ ನೆನಪಿಗಾಗಿ ಕಪ್ಪು ತೋಳುಪಟ್ಟಿ ಧರಿಸಿದ ಶ್ರೀಲಂಕಾ ಆಟಗಾರರು
ಹೊಸದಿಲ್ಲಿ: ಇತ್ತೀಚೆಗೆ 87ನೇ ವಯಸ್ಸಿನಲ್ಲಿ ನಿಧನರಾದ ತಮ್ಮ ಪ್ರೀತಿಯ ಲೆಜೆಂಡರಿ ಚಿಯರ್‌ಲೀಡರ್ ಪರ್ಸಿ ಅಬೆಸೇಕರ ಅವರಿಗೆ ಭಾರತ ವಿರುದ್ಧ ಗುರುವಾರ ನಡೆದ ವಿಶ್ವಕಪ್ ಪಂದ್ಯದ ವೇಳೆ ಶ್ರೀಲಂಕಾ ಕ್ರಿಕೆಟ್ ತಂಡವು ಶ್ರದ್ದಾಂಜಲಿ ಸಲ್ಲಿಸಿತು.
ಪ್ರೀತಿಯಿಂದ ಅಂಕಲ್ ಪರ್ಸಿ ಎಂದು ಕರೆಯಲ್ಪಡುವ ಅಬೆಸೇಕರ ಅವರು ಶ್ರೀಲಂಕಾ ಕ್ರಿಕೆಟ್‌ನ ಕಟ್ಟಾ ಬೆಂಬಲಿಗರಾಗಿದ್ದರು ಹಾಗೂ ಕ್ರಿಕೆಟ್ ಜಗತ್ತಿನ ಅಪ್ರತಿಮ ವ್ಯಕ್ತಿಯಾಗಿದ್ದರು.
ಅಂಕಲ್ ಪರ್ಸಿ ಗೌರವಾರ್ಥ ಹಾಗೂ ಸ್ಮರಣಾರ್ಥ ವಿಶ್ವಕಪ್ ಪಂದ್ಯದ ವೇಳೆ ಶ್ರೀಲಂಕಾದ ಆಟಗಾರರು ತೋಳಿಗೆ ಕಪ್ಪುಪಟ್ಟಿ ಧರಿಸಿದರು. ಹಲವು ದಶಕಗಳ ಕಾಲ ಶ್ರೀಲಂಕಾ ತಂಡವನ್ನು ಬೆಂಬಲಿಸುತ್ತಿದ್ದ ಪರ್ಸಿ ಅಂಕಲ್ ಶ್ರೀಲಂಕಾದ ಸಹ ಆತಿಥ್ಯದಲ್ಲಿ ನಡೆದಿದ್ದ 1996ರ ವಿಶ್ವಕಪ್‌ನಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದರು. ಶ್ರೀಲಂಕಾದ ಅತಿದೊಡ್ಡ ಧ್ವಜವನ್ನು ಬೀಸುತ್ತಿದ್ದ ಅವರು ಆಟಗಾರರೊಂದಿಗೆ ಡ್ರೆಸ್ಸಿಂಗ್ ಕೋಣೆಗೆ ತೆರಳಿ ಪ್ರೋತ್ಸಾಹ ನೀಡುತ್ತಿದ್ದರು.
ಲೆಜೆಂಡರಿ ಚಿಯರ್ ಲೀಡರ್ ಪರ್ಸಿ ಅಬೆಸೇಕರ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲು ಭಾರತ ವಿರುದ್ಧದ ಇಂದಿನ ಪಂದ್ಯದಲ್ಲಿ ಶ್ರೀಲಂಕಾ ಆಟಗಾರರು ತೋಳಿಗೆ ಕಪ್ಪುಪಟ್ಟಿ ಧರಿಸಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್‌ಎಲ್‌ಸಿ)ತಿಳಿಸಿದೆ.
ಅಬೆಸೇಕರ ಅವರ ಕೊಲಂಬೊದಲ್ಲಿರುವ ಅವರ ಮನೆಗೆ ಭೇಟಿ ನೀಡಿ ಅವರನ್ನು ಭೇಟಿಯಾದ ನೆನಪನ್ನ್ನು ಭಾರತದ ನಾಯಕ ರೋಹಿತ್ ಶರ್ಮಾ ಹಂಚಿಕೊಂಡರು. ಅಂಕಲ್ ಪರ್ಸಿ ಕ್ರಿಕೆಟ್‌ನ ಅಪ್ಪಟ ಅಭಿಮಾನಿಯಾಗಿದ್ದರು. ಶ್ರೀಲಂಕಾ ಕ್ರಿಕೆಟ್ ತಂಡದ ಅಸಾಮಾನ್ಯ ಬೆಂಬಲಿಗರಾಗಿದ್ದರು ಎಂದು ಶರ್ಮಾ ಹೇಳಿದರು.