ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲಲು ವಿಫಲವಾದ ಲಕ್ಷ್ಯಸೇನ್ ವಿರುದ್ಧ ಸುನೀಲ್ ಗಾವಸ್ಕರ್ ವಾಗ್ದಾಳಿ
ಹೊಸದಿಲ್ಲಿ: ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಒಂದೂ ಪದಕ ಗೆಲ್ಲದ ಭಾರತೀಯ ಬ್ಯಾಡ್ಮಿಂಟನ್ ಗುಂಪಿನ ವಿರುದ್ಧ ತಂಡದ ಮುಖ್ಯ ಕೋಚ್ ಪ್ರಕಾಶ್ ಪಡುಕೋಣೆ ವಾಗ್ದಾಳಿ ನಡೆಸಿರುವ ಬೆನ್ನಿಗೇ, ಅವರ ಬೆಂಬಲಕ್ಕೆ ನಿಂತಿರುವ ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್, “ಪ್ರತಿ ಬಾರಿಯೂ ಚಿನ್ನದ ಪದಕ ಗೆಲ್ಲಬೇಕಾದಾಗಲೆಲ್ಲ ಸಬೂಬು ನೀಡಲಾಗುತ್ತಿದೆ. ಹೀಗಾಗಿ, ಅವರ ಕುರಿತು ನಡೆಯುತ್ತಿರುವ ಒಣ ಚರ್ಚೆಗಿಂತ ಅವರ ಹೇಳಿಕೆಯೇ ದೊಡ್ಡದು” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಪ್ರಕಾಶ್ ಪಡುಕೋಣೆಯು ಸಂಕೋಚ ಸ್ವಭಾವದ ಹಾಗೂ ಸಾರ್ವಜನಿಕ ಪ್ರಚಾರವನ್ನು ಬಯಸದ ವ್ಯಕ್ತಿ. ಅವರು ನೆಟ್ ಬಳಿ ಡ್ರಿಬಲ್ ಮಾಡುವುದಕ್ಕೆ ಖ್ಯಾತರಾಗಿರುವಷ್ಟೇ ತಮ್ಮ ಬದುಕನ್ನು ಮೌನವಾಗಿ ಕಳೆದಿರುವುದಕ್ಕೂ ಖ್ಯಾತರಾಗಿದ್ದಾರೆ. ಹೀಗಾಗಿ, ಬ್ಯಾಡ್ಮಿಂಟನ್ ಹಿನ್ನಡೆಯ ಕುರಿತು ಅವರು ಮುಕ್ತವಾಗಿ ಹಂಚಿಕೊಂಡಿರುವ ಹೇಳಿಕೆಯು ಅವರನ್ನು ಹಲವಾರು ವರ್ಷಗಳಿಂದ ನೋಡಿರುವವರಲ್ಲಿ ಅಚ್ಚರಿ ಮೂಡಿಸಿದೆ. ಈ ಕುರಿತು ಹೆಚ್ಚೇನು ಹೇಳುವ ಅಗತ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ಪ್ರಕಾಶ್ ಪಡುಕೋಣೆ ಹೇಳಿಕೆಯನ್ನು ಬೆಂಬಲಿಸಿರುವ ಸುನೀಲ್ ಗಾವಸ್ಕರ್, ಲಕ್ಷ್ಯಸೇನ್ ರಂತಹ ಆಟಗಾರರ ದುರ್ಬಲ ಮನಸ್ಥಿತಿಯು ಮಹತ್ವದ ಘಟ್ಟದಲ್ಲಿ ಬ್ಯಾಡ್ಮಿಂಟನ್ ನಲ್ಲಿ ಅತ್ಯಂತ ಕಠಿಣ ನಷ್ಟಕ್ಕೆ ಕಾರಣವಾಯಿತು. ಇದು ಅವರಿಗೆ ದುಬಾರಿಯಾಯಿತು ಎಂದೂ ಹೇಳಿದ್ದಾರೆ.
ಮಹತ್ವದ ಕ್ಷಣಗಳಲ್ಲಿ ಏಕಾಗ್ರತೆಯನ್ನು ಕಾಯ್ದುಕೊಳ್ಳಲು ಮಾನಸಿಕ ತರಬೇತಿ ಹಾಗೂ ಗಮನ ಕೇಂದ್ರೀಕರಿಸಿಕೊಳ್ಳುವುದರ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಲಕ್ಷ್ಯಸೇನ್ ರಲ್ಲಿ ಈ ಕೊರತೆ ಕಂಡು ಬಂದಿದ್ದರಿಂದ ಅವರು ಪದಕ ವಂಚಿತರಾಗಬೇಕಾಯಿತು ಎಂಬುದರತ್ತ ಅವರು ಬೊಟ್ಟು ಮಾಡಿದ್ದಾರೆ.