ಸುನೀಲ್ ಗವಾಸ್ಕರ್ ದಾಖಲೆ ಮುರಿದ ಜೋ ರೂಟ್

Update: 2024-10-09 16:24 GMT

ಜೋ ರೂಟ್ | PC : NDTV

ಮುಲ್ತಾನ್ : ಇಂಗ್ಲೆಂಡ್‌ನ ಮಾಜಿ ನಾಯಕ ಜೋ ರೂಟ್ ಭಾರತೀಯ ಬ್ಯಾಟಿಂಗ್ ದಂತಕತೆ ಸುನೀಲ್ ಗವಾಸ್ಕರ್ ಅವರ 34ನೇ ಟೆಸ್ಟ್ ಶತಕದ ದಾಖಲೆಯನ್ನು ಮುರಿದಿದ್ದಾರೆ. ಪಾಕಿಸ್ತಾನ ವಿರುದ್ದ ಬುಧವಾರ ನಡೆದ ಮೊದಲ ಟೆಸ್ಟ್‌ ನ ಮೂರನೇ ದಿನದಾಟದಲ್ಲಿ ರೂಟ್ ಈ ಸಾಧನೆ ಮಾಡಿದ್ದಾರೆ.

ಅಬ್ರಾರ್ ಅಹ್ಮದ್ ಅವರ ಬೌಲಿಂಗ್‌ನಲ್ಲಿ ಒಂದು ರನ್ ಗಳಿಸುವ ಮೂಲಕ ರೂಟ್ ಈ ಮೈಲಿಗಲ್ಲು ತಲುಪಿದರು. ಇದೇ ವೇಳೆ ಅಲಸ್ಟೈರ್ ಕುಕ್ ಅವರ ರನ್ ದಾಖಲೆ(12,472 ರನ್)ಯನ್ನೂ ಮುರಿದರು.

1970 ಹಾಗೂ 1980ರಲ್ಲಿ ವೇಗದ ಬೌಲಿಂಗ್ ಅದರಲ್ಲೂ ಮುಖ್ಯವಾಗಿ ವೆಸ್ಟ್‌ ಇಂಡೀಸ್ ತಂಡದ ವೇಗಿಗಳನ್ನು ದಿಟ್ಟವಾಗಿ ಎದುರಿಸಿದ್ದ ಗವಾಸ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಹಾಗೂ 34 ಶತಕಗಳನ್ನು ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು. ಕ್ರಿಕೆಟ್ ಇತಿಹಾಸದಲ್ಲಿ ಓರ್ವ ಶ್ರೇಷ್ಠ ಓಪನರ್ ಎಂದೇ ಪರಿಗಣಿಸಲ್ಪಟ್ಟಿದ್ದಾರೆ.

ಗವಾಸ್ಕರ್ ಅವರ 34 ಟೆಸ್ಟ್ ಶತಕ ದಾಖಲೆಯು ಸುಮಾರು ಎರಡು ದಶಕಗಳ ಕಾಲ ಉಳಿದುಕೊಂಡಿದ್ದು, ಸಚಿನ್ ತೆಂಡುಲ್ಕರ್ ಈ ದಾಖಲೆಯನ್ನು ಮೊದಲಿಗೆ ಮುರಿದಿದ್ದರು.

ಗವಾಸ್ಕರ್ ಅವರು 1986ರ ಡಿಸೆಂಬರ್‌ನಲ್ಲಿ ಕಾನ್ಪುರದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ತನ್ನ 34ನೇ ಹಾಗೂ ಕೊನೆಯ ಟೆಸ್ಟ್ ಶತಕ(176 ರನ್)ಗಳಿಸಿದ್ದರು.

ರೂಟ್ ಅವರು ಸ್ಪಿನ್ ಹಾಗೂ ವೇಗದ ಬೌಲರ್‌ಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಬಲ್ಲರು. ಎಲ್ಲ ವಾತಾವರಣದಲ್ಲಿ ಒಗ್ಗಿಕೊಳ್ಳಬಲ್ಲರು. ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್ ಪೈಕಿ ಒಬ್ಬರಾಗಿರುವ ರೂಟ್ ಅವರು ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ ಹಾಗೂ ಸ್ಟೀವ್ ಸ್ಮಿತ್ ಅವರನ್ನೊಳಗೊಂಡ ಫ್ಯಾಬ್ ಫೋರ್‌ನಲ್ಲಿದ್ದಾರೆ. ಇಂಗ್ಲೆಂಡ್‌ನ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ರನ್ ಸ್ಕೋರರ್ ಆಗಿದ್ದಾರೆ.

35ನೇ ಶತಕವನ್ನು ಗಳಿಸುವ ಮೂಲಕ ರೂಟ್ ಅವರು ಮಹೇಲ ಜಯವರ್ಧನೆ, ಬ್ರಿಯಾನ್ ಲಾರಾ ಹಾಗೂ ಯೂನಿಸ್ ಖಾನ್ ಅವರ ದಾಖಲೆಯನ್ನೂ ಮುರಿದಿದ್ದಾರೆ. ಈ ಮೂವರು ಬ್ಯಾಟರ್‌ಗಳು 34 ಟೆಸ್ಟ್ ಶತಕಗಳನ್ನು ಸಿಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News