ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ಬ್ಯಾಡ್ಮಿಂಟನ್ ಟೂರ್ನಿ: ಎಚ್.ಎಸ್.ಪ್ರಣಯ್, ಲಕ್ಷ್ಯ ಸೇನ್ ಅಲಭ್ಯ

Update: 2023-11-28 17:13 GMT

Photo: badmintonworldtour.com

ಹೊಸದಿಲ್ಲಿ: ಭಾರತದ ಶಟ್ಲರ್‌ಗಳಾದ ಎಚ್.ಎಸ್.ಪ್ರಣಯ್ ಹಾಗೂ ಲಕ್ಷ್ಯ ಸೇನ್ ಅವರು ಸಯ್ಯದ್ ಮೋದಿ ಟೂರ್ನಮೆಂಟ್‌ನಿಂದ ಹೊರಗುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರದಿಂದ ಲಕ್ನೊದಲ್ಲಿ ಆರಂಭವಾಗಲಿರುವ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಉತ್ಸಾಹ ಕಡಿಮೆಯಾಗಿದೆ.

ಬೆನ್ನುನೋವಿನಿಂದ ಚೇತರಿಸಿಕೊಂಡಿರುವ ಏಶ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತ ಎಚ್.ಎಸ್.ಪ್ರಣಯ್ ಚೀನಾ ಮಾಸ್ಟರ್ಸ್ ಸೂಪರ್ 750 ಟೂರ್ನಿಯಲ್ಲಿ ಸೆಮಿ ಫೈನಲ್ ತಲುಪಿ ತನ್ನ ಫಾರ್ಮ್‌ನ್ನು ಪ್ರದರ್ಶಿಸಿದ್ದರು.

ಕೆನಡಾ ಓಪನ್ ವಿನ್ನರ್ ಲಕ್ಷ್ಯ ಸೇನ್ ಪ್ರಸ್ತುತ ವಿಶ್ವ ರ್ಯಾಂಕಿಂಗ್‌ನಲ್ಲಿ 17ನೇ ಸ್ಥಾನದಲ್ಲಿದ್ದಾರೆ. ಆಗಸ್ಟ್‌ನಿಂದ ಆರು ಬಾರಿ ಮೊದಲ ಸುತ್ತಿನಲ್ಲಿ ಸೋತಿರುವ ಸೇನ್ ಇದೀಗ ಕಳಪೆ ಫಾರ್ಮ್‌ನಲ್ಲಿದ್ದಾರೆ.

ಒಲಿಂಪಿಕ್ಸ್ ಅರ್ಹತಾ ಟೂರ್ನಿ ಇರುವ ಕಾರಣ ಆಟಗಾರರು ಕೆಲಸದ ಒತ್ತಡವನ್ನು ನಿಭಾಯಿಸಿ, ಮುಂಬರುವ ಋತುವಿನಲ್ಲಿ ಉತ್ತಮ ಪ್ರದರ್ಶನನೀಡುವುದಕ್ಕೆ ಒತ್ತು ನೀಡುತ್ತಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತೆ ಪಿ.ವಿ.ಸಿಂದು ಪ್ರಸ್ತುತ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಈ ಟೂರ್ನಿಗೆ ಲಭ್ಯವಿರುವುದಿಲ್ಲ. ಹೀಗಾಗಿ ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ಟೂರ್ನಮೆಂಟ್‌ನ ಗೈರಾಗುತ್ತಿರುವ ಆಟಗಾರರ ಪಟ್ಟಿಗೆ ಸಿಂಧು ಹೊಸ ಸೇರ್ಪಡೆಯಾಗಿದ್ದಾರೆ.

ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ಟೂರ್ನಿಯಲ್ಲಿ ವಿಶ್ವದ ನಂ.24ನೇ ಆಟಗಾರ ಕಿಡಂಬಿ ಶ್ರೀಕಾಂತ್ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ತಂಡವನ್ನು ಮುನ್ನಡೆಸಲಿದ್ದಾರೆ. ಪುರುಷರ ತಂಡದಲ್ಲಿ ಟೋಕಿಯೊ ಒಲಿಂಪಿಯನ್ ಬಿ.ಸಾಯಿ ಪ್ರಣೀತ್,ಇಂಡೋನೇಶ್ಯ ಮಾಸ್ಟರ್ಸ್ ಸೂಪರ್ 100ರಲ್ಲಿ ಜಯಶಾಲಿಯಾಗಿರುವ ಕಿರಣ್ ಜಾರ್ಜ್, ಈ ವರ್ಷ ಒರ್ಲಿಯನ್ಸ್ ಮಾಸ್ಟರ್ಸ್ ಸೂಪರ್ 300 ಪ್ರಶಸ್ತಿ ವಿಜೇತೆ ಪ್ರಿಯಾಂಶು ರಾಜಾವತ್ ಅವರಿದ್ದಾರೆ.

ಆರನೇ ಶ್ರೇಯಾಂಕದ ಶ್ರೀಕಾಂತ್ ಚೈನೀಸ್ ತೈಪೆಯ ಚಿಯಾ ಹಾವೊ ಲೀ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದ್ದಾರೆ. ಪ್ರಿಯಾಂಶು ಕಝಕ್‌ಸ್ತಾನದ ಡಿಮಿಟ್ರಿ ಪನಾರಿನ್‌ರನ್ನು ಎದುರಿಸಲಿದ್ದಾರೆ. ಕಿರಣ್ ಅವರು ಕ್ವಾಲಿಫೈಯರ್ ಆಟಗಾರನನ್ನು ಎದುರಿಸಲಿದ್ದಾರೆ. ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿರುವ ಪ್ರಣೀತ್ ಜಪಾನ್‌ನ 2ನೇ ಶ್ರೇಯಾಂಕದ ಕೆಂಟಾ ನಿಶಿಮೊಟೊ ಸವಾಲು ಎದುರಿಸಲಿದ್ದಾರೆ.

ಗಾಯದ ಸಮಸ್ಯೆಯ ವಿರುದ್ಧ ಹೋರಾಡುತ್ತಿರುವ ವಿಶ್ವದ ಮಾಜಿನಂ.11ನೇ ಆಟಗಾರ ಸಮೀರ್ ವರ್ಮಾ ಪುನರಾಗಮನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಚೈನೀಸ್ ತೈಪೆಯ ವಾಂಗ್ ಝು ವೀ ಅವರನ್ನು ಮೊದಲ ರೌಂಡ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.

ಮಿಥುನ್ ಮಂಜುನಾಥ್ ಫ್ರಾನ್ಸ್‌ನ ಅಲೆಕ್ಸ್ ಲ್ಯಾನೀಯರ್‌ರನ್ನು, ಮಾಜಿ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಎಸ್.ಶಂಕ ಮುತ್ತುಸ್ವಾಮಿ ಅವರು ಫ್ರಾನ್ಸ್‌ನ ಅರ್ನೌಡ್ ಮೆರ್ಕೆಲ್ ಸವಾಲು ಎದುರಿಸಲಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಮಾಳವಿಕಾ ಬಾನ್ಸೋಡ್, ಆಕರ್ಷಿ ಕಶ್ಯಪ್, ಉನ್ನತಿ ಹೂಡಾ, ಅನುಪಮಾ ಉಪಾಧ್ಯಾಯ, ಅಶ್ಮಿತಾ ಚಲಿಹಾ, ತನ್ಯಾ ಹೇಮಂತ್, ತಸ್ನಿಮ್ ಮೀರ್ ಹಾಗೂ ರಥ್ವಿಕ್ ಶಿವಾನಿ ಅವರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News