ಟಿ20 ವಿಶ್ವಕಪ್: ಪಾಕಿಸ್ತಾನಕ್ಕೆ ಮೊದಲ ವಿಜಯದ ಸಂಭ್ರಮ

Update: 2024-06-12 03:12 GMT

PC: x.com/CricketNDTV

ಹೊಸದಿಲ್ಲಿ: ಅಮೆರಿಕ ಹಾಗೂ ಭಾರತ ವಿರುದ್ಧ ಹೀಗೆ ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ ಪಂದ್ಯಾವಳಿಯ ಎ ಗುಂಪಿನ ಪಂದ್ಯದಲ್ಲಿ ಮಂಗಳವಾರ ಕೆನಡಾ ವಿರುದ್ಧ ಸುಲಭ ಜಯ ಸಾಧಿಸಿತು.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಪಾಕಿಸ್ತಾನ ಪರ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿ ಎದುರಾಳಿಗಳ 7 ವಿಕೆಟ್ ಕಿತ್ತು 106 ರನ್ಗಳಿಗೆ ಕಟ್ಟಿಹಾಕಿದರು. ಇದಕ್ಕೆ ಉತ್ತರವಾಗಿ ಆರಂಭಿಕ ಬ್ಯಾಟ್ಸ್ಮನ್ ಗಳಾದ ಮೊಹ್ಮದ್ ರಿಜ್ವಾನ್ ಹಾಗೂ ನಾಯಕ ಬಾಬರ್ ಆಝಂ ಇನ್ನೂ 15 ಎಸೆತಗಳು ಇರುವಂತೆಯೇ ಜಯ ಸಾಧಿಸಲು ನೆರವಾದರು. ಎರಡನೇ ವಿಕೆಟ್ ಗೆ 63 ರನ್ ಗಳನ್ನು ಸೇರಿಸಿದ್ದು, ತಂಡದ ಜಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು.

ಬಾಬರ್ ಒಂದು ಸಿಕ್ಸ್ ಹಾಗೂ ಒಂದು ಬೌಂಡರಿ ಒಳಗೊಂಡಂತೆ 33 ಎಸೆತಗಳಲ್ಲಿ 33 ರನ್ ಗಳಿಸಿದರೆ, ರಿಜ್ವಾನ್ 53 ಎಸೆತಗಳಲ್ಲಿ ಅಷ್ಟೇ ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಇನಿಂಗ್ಸ್ ನಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿತ್ತು. ಇನಿಂಗ್ಸ್ ಆರಂಭದ ಪವರ್ ಪ್ಲೇಯಲ್ಲಿ ಪಾಕಿಸ್ತಾನ ಒಂದಷ್ಟು ಪರದಾಟಿತು. ಮೊದಲ ಆರು ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿತ್ತು. ಆದರೆ ಸ್ಪಿನ್ ಬೌಲಿಂಗ್ ನಲ್ಲಿ ಅನುಭವಿ ಬ್ಯಾಟ್ಸ್ಮನ್ ಗಳು ಸರಾಗವಾಗಿ ರನ್ ಗಳಿಸಲಾರಂಭಿಸಿದರು.

ಕೆನಡಾ ಪರ ಅರೋನ್ ಜಾನ್ಸನ್ 52 ರನ್ ಗಳಿಸಿ ತಂಡದ ಮೊತ್ತ ಮೂರಂಕಿ ಗಳಿಸಲು ನೆರವಾದರು. ನಾಲ್ಕು ಸಿಕ್ಸರ್ ಹಾಗೂ 4 ಬೌಂಡರಿಗಳನ್ನು ಸಿಡಿಸಿದ ಅವರು 44 ಎಸೆತಗಳಲ್ಲಿ 52 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರು.

ಎ ಗುಂಪಿನಲ್ಲಿ ಕೆನಡಾ ವಿರುದ್ಧ ಜಯ ಸಾಧಿಸಿದ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ತಲಾ 4 ಅಂಕ ಪಡೆದಿರುವ ಭಾರತ ಹಾಗೂ ಅಮೆರಿಕ ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News