ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಟೀಮ್ ಇಂಡಿಯಾವು ಪಾಕಿಸ್ತಾನಕ್ಕೆ ಪ್ರಯಾಣಿಸುವ ಸಾಧ್ಯತೆಯಿಲ್ಲ : ಬಿಸಿಸಿಐ
ಹೊಸದಿಲ್ಲಿ: 2025ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಗಾಗಿ ನಡೆಯುವ ಟೂರ್ನಮೆಂಟ್ನಲ್ಲಿ ಭಾಗವಹಿಸಲು ಭಾರತೀಯ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವ ಸಾಧ್ಯತೆಯಿಲ್ಲ. ದುಬೈ ಅಥವಾ ಶ್ರೀಲಂಕಾದಲ್ಲಿ ಪಂದ್ಯಗಳನ್ನು ಆಯೋಜಿಸುವಂತೆ ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ)ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ಗೆ(ಐಸಿಸಿ)ಕೇಳಿಕೊಂಡಿದೆ ಎಂದು ಬಿಸಿಸಿಐ ಮೂಲಗಳು ಸುದ್ದಿಸಂಸ್ಥೆ ಎಎನ್ಐಗೆ ಗುರುವಾರ ತಿಳಿಸಿವೆ.
ಭಾರತ ಕ್ರಿಕೆಟ್ ತಂಡವು 2008ರಿಂದ ಪಾಕಿಸ್ತಾನಕ್ಕೆ ಕ್ರಿಕೆಟ್ ಪ್ರವಾಸ ಕೈಗೊಂಡಿಲ್ಲ. ಸಾಂಪ್ರದಾಯಿಕ ಎದುರಾಳಿಗಳು ಹಲವು ತಂಡಗಳು ಭಾಗವಹಿಸುತ್ತಿರುವ ಟೂರ್ನಿಗಳಲ್ಲಿ ಮಾತ್ರ ಪರಸ್ಪರ ಆಡಿವೆ.
ಪಾಕಿಸ್ತಾನವು ಕಳೆದ ವರ್ಷ ಏಶ್ಯಕಪ್ನ ಆತಿಥ್ಯವಹಿಸಿತ್ತು. ಆದರೆ,ಸಂಘಟಕರು ಸಿದ್ಧಪಡಿಸಿರುವ ಹೈಬ್ರಿಡ್ ಮಾದರಿಯಡಿ ಭಾರತಕ್ಕೆ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾ ನೆಲದಲ್ಲಿ ಆಡಲು ಅನುಮತಿ ನೀಡಲಾಗಿತ್ತು.
ಏಶ್ಯಕಪ್ ಟೂರ್ನಿಯಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಮ್ಮ ಸರಕಾರವು ಅನುಮತಿ ನೀಡಿಲ್ಲ ಎಂದು ಬಿಸಿಸಿಐ ಆಗ ಹೇಳಿತ್ತು.
8 ರಾಷ್ಟ್ರಗಳು ಸ್ಪರ್ಧಿಸಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್ ಮುಂದಿನ ವರ್ಷದ ಫೆಬ್ರವರಿ ಹಾಗೂ ಮಾರ್ಚ್ನಲ್ಲಿ ಪಾಕಿಸ್ತಾನದಲ್ಲಿ ನಡೆಸಲು ನಿರ್ಧರಿಸಲಾಗಿದೆ.
1996ರಲ್ಲಿ ಭಾರತ ಹಾಗೂ ಶ್ರೀಲಂಕಾದ ಜೊತೆಗೆ ಜಂಟಿಯಾಗಿ ವಿಶ್ವಕಪ್ ಟೂರ್ನಿ ಆಯೋಜಿಸಿದ ನಂತರ ಪಾಕಿಸ್ತಾನ ಇದೇ ಮೊದಲ ಬಾರಿ ತನ್ನ ನೆಲದಲ್ಲಿ ಪ್ರಮುಖ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲು ಸಜ್ಜಾಗಿದೆ.
ಫೆಬ್ರವರಿ 19ರಿಂದ ಮಾ. 9ರ ತನಕ ನಡೆಯಲಿರುವ ಸ್ಪರ್ಧಾವಳಿಯ ಪಂದ್ಯಗಳ ದಿನಾಂಕವನ್ನು ಇನ್ನಷ್ಟೇ ಪ್ರಕಟಿಸಬೇಕಾಗಿದೆ.
ಚಾಂಪಿಯನ್ಸ್ ಟ್ರೋಫಿಗಿಂತ ಮೊದಲು ಭಾರತವು ಫೆಬ್ರವರಿಯಲ್ಲಿ ಒಟ್ಟು 6 ಏಕದಿನ ಪಂದ್ಯಗಳನ್ನು ಆಡಲಿದೆ. ಶ್ರೀಲಂಕಾ ವಿರುದ್ದ ವಿದೇಶದಲ್ಲಿ 3 ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳನ್ನು ಸ್ವದೇಶದಲ್ಲಿ ಆಡಲಿದೆ.