ಟೆಸ್ಟ್ ಬೌಲರ್‌ಗಳ ರ‍್ಯಾಂಕಿಂಗ್ | ನಂ.1 ಸ್ಥಾನ ಕಳೆದುಕೊಂಡ ಜಸ್‌ಪ್ರಿತ್ ಬುಮ್ರಾ

Update: 2024-10-30 15:19 GMT

ಜಸ್‌ಪ್ರಿತ್ ಬುಮ್ರಾ |  PC : PTI 

ಹೊಸದಿಲ್ಲಿ : ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ಅವರು ಭಾರತದ ಸ್ಟಾರ್ ಬೌಲರ್ ಜಸ್‌ಪ್ರಿತ್ ಬುಮ್ರಾರನ್ನು ಹಿಂದಿಕ್ಕಿ ಮಂಗಳವಾರ ಬಿಡುಗಡೆಯಾದ ಟೆಸ್ಟ್ ಬೌಲರ್‌ಗಳ ಐಸಿಸಿ ರ‍್ಯಾಂಕಿಂಗ್‌ ನಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.

ಮೀರ್ಪುರದಲ್ಲಿ ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾ ತಂಡವು 7 ವಿಕೆಟ್‌ಗಳಿಂದ ಜಯ ಸಾಧಿಸಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ರಬಾಡ ಅವರು 9 ವಿಕೆಟ್‌ಗಳನ್ನು ಕಬಳಿಸಿದ್ದು, ಈ ಸಾಧನೆಯ ಮೂಲಕ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. ಈ ಪಂದ್ಯದ ವೇಳೆ ಬಲಗೈ ವೇಗದ ಬೌಲರ್ ರಬಾಡ 300 ಟೆಸ್ಟ್ ವಿಕೆಟ್‌ ಗಳ ಮೈಲುಗಲ್ಲು ತಲುಪಿದ್ದರು.

ಬಾಂಗ್ಲಾದೇಶ ವಿರುದ್ಧ ಶ್ರೇಷ್ಠ ಪ್ರದರ್ಶನ ನೀಡಿದ್ದ ರಬಾಡ ಮೂರು ಸ್ಥಾನ ಭಡ್ತಿ ಪಡೆದು ಬುಮ್ರಾರನ್ನು ಅಗ್ರ ಸ್ಥಾನದಿಂದ ಕೆಳಗಿಳಿಸಿದ್ದಾರೆ.

29ರ ಹರೆಯದ ರಬಾಡ 2018ರ ಜನವರಿಯಲ್ಲಿ ಮೊದಲ ಬಾರಿ ಅಗ್ರಮಾನ್ಯ ಟೆಸ್ಟ್ ಬೌಲರ್ ಎನಿಸಿಕೊಂಡಿದ್ದರು. 2019ರ ಫೆಬ್ರವರಿಯಲ್ಲಿ ನಂ.1 ಸ್ಥಾನ ಕಳೆದುಕೊಂಡಿದ್ದರು.

ಇದೇ ವೇಳೆ, ಬುಮ್ರಾ ಅವರು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಆಸ್ಟ್ರೇಲಿಯದ ವೇಗದ ಬೌಲರ್ ಜೋಶ್ ಹೇಝಲ್‌ ವುಡ್ 2ನೇ ಸ್ಥಾನದಲ್ಲಿದ್ದಾರೆ. ಭಾರತದ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 4ನೇ ಸ್ಥಾನ ಪಡೆದಿದ್ದು, ಆಸ್ಟ್ರೇಲಿಯದ ನಾಯಕ ಹಾಗೂ ವೇಗದ ಬೌಲರ್ ಪ್ಯಾಟ್ ಕಮಿನ್ಸ್ 5ನೇ ಸ್ಥಾನದಲ್ಲಿದ್ದಾರೆ.

ಪಾಕಿಸ್ತಾನದ ಸ್ಪಿನ್ನರ್ ನುಮಾನ್ ಅಲಿ ಟಾಪ್-10ರೊಳಗೆ ಪ್ರವೇಶಿಸಿದ್ದು , ಅವರು 9ನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್ ವಿರುದ್ಧದ 2ನೇ ಹಾಗೂ 3ನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ನುಮಾನ್ ಅಲಿ ಪಾಕಿಸ್ತಾನ ತಂಡವು 2-1 ಅಂತರದಿಂದ ಸರಣಿ ಗೆಲ್ಲಲು ನೆರವಾಗಿದ್ದರು. 8 ಸ್ಥಾನ ಮೇಲಕ್ಕೇರಿರುವ ನುಮಾನ್ ಜೀವನ ಶ್ರೇಷ್ಠ ರ‍್ಯಾಂಕಿಂಗ್ ತಲುಪಿದ್ದಾರೆ.

ಭಾರತ ವಿರುದ್ಧ ಪುಣೆ ಟೆಸ್ಟ್‌ನಲ್ಲಿ ನ್ಯೂಝಿಲ್ಯಾಂಡ್ ತಂಡವು ಐತಿಹಾಸಿಕ ಸರಣಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ತನ್ನ ವೈಯಕ್ತಿಕ ಶ್ರೇಷ್ಠ ರ‍್ಯಾಂಕಿಂಗ್ ಪಡೆದಿದ್ದಾರೆ.

ಪುಣೆ ಟೆಸ್ಟ್ ಪಂದ್ಯದಲ್ಲಿ ಒಟ್ಟು 13 ವಿಕೆಟ್‌ಗಳನ್ನು ಉರುಳಿಸಿರುವ ಸ್ಯಾಂಟ್ನರ್ 30 ಸ್ಥಾನ ಮೇಲಕ್ಕೇರಿ 44ನೇ ಸ್ಥಾನ ತಲುಪಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News