ಟೆಸ್ಟ್ ಕ್ರಿಕೆಟ್ | ಜಸ್‌ಪ್ರಿತ್ ಬುಮ್ರಾರ ಮಹತ್ವದ ದಾಖಲೆ ಮುರಿದ ಇಂಗ್ಲೆಂಡ್ ವೇಗಿ ಅಟ್ಕಿನ್ಸನ್

Update: 2024-12-14 15:13 GMT

ಅಟ್ಕಿನ್ಸನ್ | PC : PTI 

ಹ್ಯಾಮಿಲ್ಟನ್ : ನ್ಯೂಝಿಲ್ಯಾಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ವೇಳೆ ಇಂಗ್ಲೆಂಡ್‌ನ ವೇಗದ ಬೌಲರ್ ಗಸ್ ಅಟ್ಕಿನ್ಸನ್ ಮಹತ್ವದ ಮೈಲಿಗಲ್ಲು ತಲುಪಿದರು. ಟೆಸ್ಟ್ ಕ್ರಿಕೆಟ್ ಆಡಿದ ಮೊದಲ ವರ್ಷವೇ ಶ್ರೇಷ್ಠ ಪ್ರದರ್ಶನ ನೀಡಿ ವಿಶೇಷ ಕ್ಲಬ್‌ನಲ್ಲಿ ಸ್ಥಾನ ಪಡೆದಿದ್ದಾರೆ.

ಅಟ್ಕಿನ್ಸನ್ ಅವರು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತನ್ನ ಚೊಚ್ಚಲ ಕ್ಯಾಲೆಂಡರ್ ವರ್ಷದಲ್ಲಿ 50ಕ್ಕೂ ಅಧಿಕ ವಿಕೆಟ್‌ಗಳನ್ನು ಉರುಳಿಸಿದ ವಿಶ್ವದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.

3ನೇ ಟೆಸ್ಟ್ ಪಂದ್ಯಕ್ಕಿಂತ ಮೊದಲು ಅಟ್ಕಿನ್ಸನ್ ಒಟ್ಟು 48 ವಿಕೆಟ್‌ಗಳನ್ನು ಪಡೆದಿದ್ದರು. ಇಂದು ವಿಲ್ ಯಂಗ್, ಡ್ಯಾರಿಲ್ ಮಿಚೆಲ್ ಹಾಗೂ ಟಿಮ್ ಸೌಥಿ ಅವರ ವಿಕೆಟ್‌ಗಳನ್ನು ಕಬಳಿಸಿದ ಅಟ್ಕಿನ್ಸನ್ ಒಟ್ಟು 51 ವಿಕೆಟ್‌ಗಳನ್ನು ಕಬಳಿಸಿದರು. ಆಸ್ಟ್ರೇಲಿಯದ ವೇಗಿ ಟೆರ್ರಿ ಅಲ್ಡರ್‌ಮನ್ ನಂತರ ಈ ಸಾಧನೆ ಮಾಡಿದ 2ನೇ ಬೌಲರ್ ಆಗಿದ್ದಾರೆ. ಅಲ್ಡರ್‌ಮನ್ 1981ರಲ್ಲಿ ತನ್ನ ಮೊದಲ ಕ್ಯಾಲೆಂಡರ್ ವರ್ಷದಲ್ಲಿ 54 ವಿಕೆಟ್‌ಗಳನ್ನು ಪಡೆದಿದ್ದರು.

ಅಟ್ಕಿನ್ಸನ್ ಅವರು ವೇಗದ ಲೆಜೆಂಡ್‌ಗಳಾದ ಕರ್ಟ್ಲಿ ಅಂಬ್ರೋಸ್(1988ರಲ್ಲಿ 49 ವಿಕೆಟ್‌ಗಳು) ಹಾಗೂ ಜಸ್‌ಪ್ರಿತ್ ಬುಮ್ರಾ(2018ರಲ್ಲಿ 48 ವಿಕೆಟ್‌ಗಳು)ಅವರ ದಾಖಲೆಗಳನ್ನು ಮುರಿದರು.

ಅಟ್ಕಿನ್ಸನ್ ಅವರು 2017ರ ನಂತರ ಕ್ಯಾಲೆಂಡರ್ ವರ್ಷದಲ್ಲಿ 50 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ ಇಂಗ್ಲೆಂಡ್‌ನ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. 2017ರಲ್ಲಿ ಜೇಮ್ಸ್ ಆ್ಯಂಡರ್ಸನ್ 55 ವಿಕೆಟ್‌ಗಳನ್ನು ಬಾಚಿಕೊಂಡಿದ್ದರು.

ಬಲಗೈ ವೇಗದ ಬೌಲರ್ ಅಟ್ಕಿನ್ಸನ್ 2024ರ ಜುಲೈನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗಳ ಸಹಿತ ಒಟ್ಟು 12 ವಿಕೆಟ್‌ಗಳ ಗೊಂಚಲು ಪಡೆದ ಅಟ್ಕಿನ್ಸನ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

11 ಪಂದ್ಯಗಳಲ್ಲಿ 20 ಇನಿಂಗ್ಸ್‌ಗಳಲ್ಲಿ ಆಡಿರುವ ಅಟ್ಕಿನ್ಸನ್ 22.05ರ ಸರಾಸರಿ, 34ರ ಸ್ಟ್ರೈಕ್‌ರೇಟ್‌ನಲ್ಲಿ 3 ಐದು ವಿಕೆಟ್ ಗೊಂಚಲುಗಳ ಸಹಿತ ಒಟ್ಟು 45 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News