ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ: ಮುಹಮ್ಮದ್ ಶಮಿ ಅಲಭ್ಯ
ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನ ಗುರಿ ಇಟ್ಟುಕೊಂಡಿರುವ ಭಾರತವು ಪ್ರಮುಖ ವೇಗದ ಬೌಲರ್ ಮುಹಮ್ಮದ್ ಶಮಿ ಸೇವೆಯಿಂದ ವಂಚಿತವಾಗಲಿದೆ. ಹಿರಿಯ ವೇಗದ ಬೌಲರ್ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.
ತಂಡದ ವೈದ್ಯಕೀಯ ಸಿಬ್ಬಂದಿಯಿಂದ ಶಮಿ ಅವರು ದೈಹಿಕ ಕ್ಷಮತೆಯ ಪ್ರಮಾಣಪತ್ರವನ್ನು ಸ್ವೀಕರಿಸಿಲ್ಲ ಎಂದು ಬಿಸಿಸಿಐ ಶನಿವಾರ ಪ್ರಕಟಿಸಿದೆ. ಶಮಿ ಇತ್ತೀಚೆಗೆ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಂತರ ಪಾದದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯಕೀಯ ತಂಡದ ಅನುಮತಿಯ ಮೇರೆಗೆ ಶಮಿ ಅವರನ್ನು ಆರಂಭದಲ್ಲಿ ಭಾರತದ ಟೆಸ್ಟ್ ತಂಡದಲ್ಲಿ ಸೇರಿಸಲಾಗಿತ್ತು.
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಡಿಸೆಂಬರ್ 26ರಿಂದ ಸೆಂಚೂರಿಯನ್ ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಶಮಿ ಅವರ ಬದಲಿ ಆಟಗಾರನನ್ನು ಬಿಸಿಸಿಐ ನೇಮಿಸಿಲ್ಲ. ಮೊದಲ ಟೆಸ್ಟ್ ಪಂದ್ಯ ಆರಂಭಕ್ಕೆ ಮೊದಲು ಭಾರತೀಯ ಟೆಸ್ಟ್ ತಂಡವು ಡಿಸೆಂಬರ್ 20ರಿಂದ ತ್ರಿದಿನ ಇಂಟರ್-ಸ್ಕ್ವಾಡ್ ಪಂದ್ಯವನ್ನು ಆಡಲಿದೆ.
ಶಮಿ ಮನೆಯಲ್ಲಿದ್ದುಕೊಂಡೇ ಚೇತರಿಸಿಕೊಳ್ಳಲಿದ್ದು ಜನವರಿ 25ರಿಂದ ಹೈದರಾಬಾದ್ ನಲ್ಲಿ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಟೆಸ್ಟ್ ಸರಣಿಯ ವೇಳೆ ತಂಡಕ್ಕೆ ವಾಪಸಾಗುವ ನಿರೀಕ್ಷೆ ಇದೆ.
ದಕ್ಷಿಣ ಆಫ್ರಿಕಾ ವಿರುದ್ದದ ಎರಡನೇ ಟೆಸ್ಟ್ ಪಂದ್ಯವು ಕೇಪ್ ಟೌನ್ ನಲ್ಲಿ ಜನವರಿ 3,2024ರಿಂದ ಆರಂಭವಾಗಲಿದೆ.
*ಏಕದಿನ ಸರಣಿಯಿಂದ ದೀಪಕ್ ಚಹಾರ್ ಔಟ್
ಕೌಟುಂಬಿಕ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳದ ದೀಪಕ್ ಚಹಾರ್ ಅವರನ್ನು ಏಕದಿನ ತಂಡದಿಂದ ಹೊರಗಿಡಲಾಗಿದೆ. ಕೌಟುಂಬಿಕ ಕಾರಣದಿಂದ ಮುಂಬರುವ ಏಕದಿನ ಸರಣಿಗೆ ನಾನು ಲಭ್ಯವಿರುವುದಿಲ್ಲ ಎಂದು ಚಹಾರ್ ಅವರು ತಮಗೆ ಮಾಹಿತಿ ನೀಡಿದ್ದಾರೆ. ಟೀಮ್ ಇಂಡಿಯಾದ ಆಯ್ಕೆ ಸಮಿತಿಯು ವೇಗದ ಬೌಲರ್ ಆಕಾಶ್ ದೀಪ್ ರನ್ನು ಬದಲಿ ಆಟಗಾರರನ್ನಾಗಿ ನೇಮಿಸಿದೆ ಎಂದು ಬಿಸಿಸಿಐ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಜೋಹಾನ್ಸ್ ಬರ್ಗ್ ನಲ್ಲಿ ರವಿವಾರ ಮೊದಲ ಏಕದಿನ ಪಂದ್ಯವು ಅಂತ್ಯಗೊಂಡ ನಂತರ ಶ್ರೇಯಸ್ ಅಯ್ಯರ್ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಲು ಟೆಸ್ಟ್ ತಂಡಕ್ಕೆ ಸೇರಲಿದ್ದಾರೆ ಎಂದು ಬಿಸಿಸಿಐ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಅಯ್ಯರ್ ಅವರು ದ್ವಿತೀಯ ಹಾಗೂ ತೃತೀಯ ಏಕದಿನ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ಅವರು ಇಂಟರ್-ಸ್ಕ್ವಾಡ್ ಗೇಮ್ ನಲ್ಲಿ ಆಡಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹಾಗೂ ಸಹಾಯಕ ಸಿಬ್ಬಂದಿಯು ಮೂರು ಪಂದ್ಯಗಳ ಏಕದಿನ ಸರಣಿಯ ಉಸ್ತುವಾರಿ ವಹಿಸುವುಲ್ಲ. ಅವರ ಬದಲಿಗೆ ಮುಂಬರುವ ಟೆಸ್ಟ್ ಸರಣಿಗೆ ತಯಾರಿ ನಡೆಸಲು ಇಂಟರ್ ಸ್ಕ್ವಾಡ್ ಪಂದ್ಯವನ್ನು ಮೇಲುಸ್ತುವಾರಿ ನಡೆಸಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಟೀಮ್ ಇಂಡಿಯಾದ(ಹಿರಿಯರ ತಂಡ)ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್, ಬೌಲಿಂಗ್ ಕೋಚ್ ಪರಾಸ್ ಮ್ಹಾಂಬ್ರೆ ಹಾಗೂ ಫೀಲ್ಡಿಂಗ್ ಕೊಚ್ ಟಿ.ದಿಲಿಪ್ ಟೆಸ್ಟ್ ತಂಡದೊಂದಿಗೆ ಸಂಪರ್ಕದಲ್ಲಿರಲಿದ್ದು, ಮುಂಬರುವ ಇಂಟರ್ ಸ್ಕ್ವಾಡ್ ಪಂದ್ಯ ಹಾಗೂ ಟೆಸ್ಟ್ ಸರಣಿಯ ಮೇಲುಸ್ತುವಾರಿ ವಹಿಸಲಿದ್ದಾರೆ ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.