ಸುಮಿತ್ ಅಂಟಿಲ್ ನೇತೃತ್ವದ ಮೊದಲ ತಂಡ ಪ್ಯಾರಿಸ್ ಗೆ ಪಯಣ

Update: 2024-08-21 15:32 GMT

ಸುಮಿತ್ ಅಂಟಿಲ್ | PC : olympics.com

ಹೊಸದಿಲ್ಲಿ: ಕನಿಷ್ಠ ಐದು ಚಿನ್ನ ಸಹಿತ ಒಟ್ಟು 12 ಪದಕಗಳ ಮೇಲೆ ಕಣ್ಣಿಟ್ಟಿರುವ ಸ್ಟಾರ್ ಜಾವೆಲಿನ್ ಎಸೆತಗಾರ ಸುಮಿತ್ ಅಂಟಿಲ್ ನೇತೃತ್ವದ ಭಾರತೀಯ ಪ್ಯಾರಾ ಕ್ರೀಡಾಪಟುಗಳ ಒಂದು ತಂಡವು ಪ್ಯಾರಾಲಿಂಪಿಕ್ಸ್ ನಲ್ಲಿ ಭಾಗವಹಿಸಲು ಪ್ಯಾರಿಸ್ ಗೆ ಪ್ರಯಾಣ ಬೆಳೆಸಿದೆ. ಪ್ಯಾರಿಸ್ ನ ವಾತಾವರಣಕ್ಕೆ ಹೊಂದಿಕೊಳ್ಳುವ ಉದ್ದೇಶದಿಂದ ಬೇಗನೆ ಅಲ್ಲಿಗೆ ತೆರಳಿದೆ.

ಉದ್ಘಾಟನಾ ಸಮಾರಂಭ ನಡೆಯುವ ಮೂರು ದಿನಗಳ ಮುಂಚಿತವಾಗಿ ಆಗಸ್ಟ್ 25ರಂದು ಕ್ರೀಡಾ ಗ್ರಾಮವನ್ನು ಪ್ರವೇಶಿಸಲಿರುವ ಭಾರತದ ಈ 16 ಪ್ಯಾರಾ ಅತ್ಲೀಟ್ ಗಳು ಕೆಲವು ದಿನಗಳ ಕಾಲ ಪ್ಯಾರಿಸ್ನ ಹೊಟೇಲ್ ಗಳಲ್ಲಿ ತಂಗಲಿದ್ದಾರೆ.

ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ತನ್ನಲ್ಲೇ ಉಳಿಸಿಕೊಂಡ ಭಾರತದ ಮೊದಲ ಅತ್ಲೀಟ್ ಎನಿಸಿಕೊಳ್ಳುವತ್ತ ಚಿತ್ತಹರಿಸಿರುವ ಸುಮಿತ್ ಅಂಟಿಲ್ ಪ್ಯಾರಿಸ್ ನಲ್ಲಿ ತರಬೇತಿ ನಡೆಸಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸಲಿದ್ದಾರೆ.

ಪ್ಯಾರಾ ಅತ್ಲೆಟಿಕ್ಸ್ ಸ್ಪರ್ಧೆಗಳು ಆಗಸ್ಟ್ 30ರಿಂದ ಸೆಪ್ಟಂಬರ್ 8ರ ತನಕ ಸ್ಟೇಡ್ ಡಿ ಫ್ರಾನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಇದೇ ಸ್ಟೇಡಿಯಮ್ ನಲ್ಲಿ ಅತ್ಲೀಟ್ ಗಳು ಸ್ಪರ್ಧಿಸಿದ್ದರು.

ಸುಮಿತ್ ಅಂಟಿಲ್ ಹಾಗೂ ಇತರ ಪ್ಯಾರಾ ಅತ್ಲೀಟ್ ಗಳು ಕ್ರೀಡಾಗ್ರಾಮಕ್ಕೆ ಪ್ರವೇಶಿಸುವ ಮೊದಲು ನೆಲ್ಸನ್ ಮಂಡೇಲ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಕೆಲವು ದಿನಗಳ ಕಾಲ ತರಬೇತಿ ನಡೆಸಲಿದ್ದಾರೆ. ಕೆಲವರು ಕ್ರೀಡಾಗ್ರಾಮದ ಸಮೀಪ ತಂಗಲಿದ್ದು, ಹಗಲು ಹೊತ್ತಿನಲ್ಲಿ ತರಬೇತಿ ಸೌಲಭ್ಯಗಳನ್ನು ಬಳಸಿಕೊಳ್ಳಲಿದ್ದಾರೆ ಎಂದು ಪ್ಯಾರಾ ಅತ್ಲೆಟಿಕ್ಸ್ ಮುಖ್ಯ ಕೋಚ್ ಸತ್ಯನಾರಾಯಣ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ನೆಲ್ಸನ್ ಮಂಡೇಲ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಸ್ಟೇಡ್ ಡಿ ಫ್ರಾನ್ಸ್‌ನಿಂದ ಸುಮಾರು 5 ಕಿ.ಮೀ. ದೂರದಲ್ಲಿದೆ. ಇದು ಅತ್ಲೆಟಿಕ್ಸ್, ರಗ್ಬಿ, ಟೆನಿಸ್, ವೀಲ್ಚೇರ್ ಟೆನಿಸ್ ಹಾಗೂ ಸ್ವಿಮ್ಮಿಂಗ್ ಗಾಗಿ ಅತ್ಯಾಧುನಿಕ ತರಬೇತಿ ಸೌಲಭ್ಯಗಳನ್ನು ಹೊಂದಿದೆ.

ಪ್ಯಾರಿಸ್ ಕ್ರೀಡಾಕೂಟದಲ್ಲಿ ಭಾರತೀಯ ಪ್ಯಾರಾ ಅತ್ಲೆಟಿಕ್ಸ್ ತಂಡದ ಪದಕದ ನಿರೀಕ್ಷೆಯ ಬಗ್ಗೆ ಕೇಳಿದಾಗ ಉತ್ತರಿಸಿದ ಸತ್ಯನಾರಾಯಣ, ನಾವು ಕನಿಷ್ಠ 5 ಚಿನ್ನ ಸಹಿತ ಒಟ್ಟು 12 ಪದಕಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದ್ದೇವೆ. ಜಪಾನ್ ನ ಕೋಬೆಯಲ್ಲಿ ಈ ವರ್ಷ ನಡೆದಿದ್ದ ವರ್ಲ್ಡ್ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಭಾರತ ಗಳಿಸಿರುವ ಅಭೂತಪೂರ್ವ ಯಶಸ್ಸನ್ನು ಪುನರಾವರ್ತಿಸುವ ವಿಶ್ವಾಸವಿದೆ ಎಂದರು.

ಈ ವರ್ಷದ ಮೇನಲ್ಲಿ ನಡೆದ ವರ್ಲ್ಡ್ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಆರು ಚಿನ್ನ, ಐದು ಬೆಳ್ಳಿ ಹಾಗೂ ಆರು ಕಂಚು ಸಹಿತ 17 ಪದಕಗಳನ್ನು ಜಯಿಸಿದ್ದ ಭಾರತವು ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿತ್ತು.

ಸುಮಿತ್ ಅಂಟಿಲ್(ಪುರುಷರ ಜಾವೆಲಿನ್ ಎಫ್64), ದೀಪ್ತಿ ಜೀವನ್ಜಿ(ಮಹಿಳೆಯರ 400 ಮೀ.ಟಿ20), ಸಚಿನ್ ಖಿಲಾರಿ(ಪುರುಷರ ಶಾಟ್ಪುಟ್ ಎಫ್ 46), ಎಕ್ತಾ ಭಯಾನ್(ಮಹಿಳೆಯರ ಕ್ಲಬ್ ಥ್ರೋ ಎಫ್ 51), ಸಿಮ್ರಾನ್ ಶರ್ಮಾ(ಮಹಿಳೆಯರ 200 ಮೀ. ಟಿ12) ಹಾಗೂ ಮರಿಯಪ್ಪನ್ ತಂಗವೇಲು(ಪುರುಷರ ಹೈಜಂಪ್ ಟಿ42)ಚಿನ್ನದ ಪದಕಗಳನ್ನು ಜಯಿಸಿದ್ದರು.

2021ರಲ್ಲಿ ನಡೆದಿದ್ದ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತವು ಒಟ್ಟು 19 ಪದಕಗಳನ್ನು(5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚು)ಗೆದ್ದುಕೊಂಡು ದಾಖಲೆ ನಿರ್ಮಿಸಿತ್ತು.

ಈ ಬಾರಿಯ ಪ್ಯಾರಾಲಿಂಪಿಕ್ಸ್ ಗೆ ಭಾರತವು 12 ಕ್ರೀಡೆಗಳಿಗೆ ಅತ್ಯಂತ ಹೆಚ್ಚು 84 ಕ್ರೀಡಾಪಟುಗಳನ್ನು ಕಳುಹಿಸಿಕೊಡುತ್ತಿದೆ.

ಪ್ಯಾರಿಸ್ ಗೇಮ್ಸ್ ನಲ್ಲಿ ಭಾರತವು ಕನಿಷ್ಠ 25 ಪದಕಗಳನ್ನು ಜಯಿಸಲಿದೆ ಎಂದು ಭಾರತದ ಪ್ಯಾರಾಲಿಂಪಿಕ್ಸ್ ಸಮಿತಿಯ ಅಧ್ಯಕ್ಷ ದೇವೇಂದ್ರ ಜಜಾರಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುಮಿತ್ ಅಂಟಿಲ್ ಹಾಗೂ ಹಾಂಗ್ಝೌ ಏಶ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಮಹಿಳೆಯರ ಶಾಟ್ಪುಟ್ ಎಫ್ 34ರಲ್ಲಿ ಬೆಳ್ಳಿ ಪದಕ ಜಯಿಸಿದ್ದ ಭಾಗ್ಯಶ್ರೀ ಜಾಧವ್ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಲಿದ್ದಾರೆ. ಉದ್ಘಾಟನಾ ಸಮಾರಂಭವು ಇದೇ ಮೊದಲ ಬಾರಿ ಕ್ರೀಡಾಂಗಣದಿಂದ ಹೊರಗೆ ನಡೆಯಲಿದೆ.

ಸಮಾರಂಭವು ಚಾಂಪ್ಸ್-ಎಲಿಸೀಸ್ನಿಂದ ಪ್ಯಾರಿಸ್ ನ ಹೃದಯಭಾಗದಲ್ಲಿರುವ ಪ್ಲೇಸ್ ಡಿ ಲಾ ಕಾಂಕಾರ್ಡ್ ತನಕ ನಡೆಯಲಿದೆ. ಪ್ಯಾರಿಸ್ ಒಲಿಂಪಿಕ್ಸ್ ನ ಉದ್ಘಾಟನಾ ಸಮಾರಂಭವು ಕ್ರೀಡಾ ಇತಿಹಾಸದಲ್ಲಿ ಮೊದಲ ಬಾರಿ ಕ್ರೀಡಾಂಗಣದ ಹೊರಗೆ, ಸೀನ್ ನದಿಯ ದಡದಲ್ಲಿ ನೆರವೇರಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News