ವಿಂಡೀಸ್ನ ಟಿ-20 ವಿಶ್ವಕಪ್ ವಿಜೇತ ಮಾಜಿ ಆಟಗಾರನಿಗೆ 6 ವರ್ಷ ನಿಷೇಧ ಹೇರಿದ ಐಸಿಸಿ

Update: 2023-11-23 16:53 GMT

Photo; icc-cricket.com

ಬಾರ್ಬಡೋಸ್: ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆದ ಟಿ-10 ಲೀಗ್ನಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ನಿಗ್ರಹ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಎರಡು ಬಾರಿ ಟ್ವೆಂಟಿ-20 ವಿಶ್ವಕಪ್ ವಿಜೇತ ವೆಸ್ಟ್ಇಂಡೀಸ್ ನ ಮಾಜಿ ಸ್ಟಾರ್ ಆಟಗಾರ ಮರ್ಲಾನ್ ಸ್ಯಾಮುಯೆಲ್ಸ್ ಅವರು ಎಲ್ಲ ಮಾದರಿಯ ಕ್ರಿಕೆಟ್ನಿಂದ ಆರು ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದಾರೆ.

2020ರಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿರುವ 42ರ ಹರೆಯದ ಕ್ರಿಕೆಟಿಗನಿಗೆ ಐಸಿಸಿ ಗುರುವಾರ ನಿಷೇಧವನ್ನು ಹೇರಿದೆ.

ಅಬುಧಾಬಿ ಟಿ10 ಲೀಗ್ನಲ್ಲಿ ಕ್ರಿಕೆಟ್ ಕ್ರೀಡೆಗೆ ಅಪಖ್ಯಾತಿ ತರಬಹುದಾದ ಮಾಹಿತಿಯನ್ನು ಮರೆ ಮಾಚಿರುವ, ಉಡುಗೊರೆ,ಸಂಭಾವನೆ, ಆತಿಥ್ಯ ಅಥವಾ ಇತರ ಪ್ರಯೋಜನಗಳನ್ನು ಬಹಿರಂಗಪಡಿಸಲು ವಿಫಲವಾದ, ತನಿಖಾಧಿಕಾರಿಗೆ ಸಹಕರಿಸದಿದ್ದಕ್ಕಾಗಿ ವೆಸ್ಟ್ಇಂಡೀಸ್ನ ಮಾಜಿ ಬ್ಯಾಟರ್ ಮರ್ಲಾನ್ ಸ್ಯಾಮುಯೆಲ್ಸ್ಗೆ ಗುರುವಾರ ಎಲ್ಲ ಮಾದರಿಯ ಕ್ರಿಕೆಟ್ನಿಂದ ಆರು ವರ್ಷಗಳ ನಿಷೇಧವನ್ನು ವಿಧಿಸಲಾಗಿದೆ. ಸ್ಯಾಮುಯೆಲ್ಸ್ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ.

ಸ್ಯಾಮುಯೆಲ್ಸ್ ತಪ್ಪು ಮಾಡಿದ್ದಾರೆ ಎಂದು ಟ್ರಿಬುನಲ್ ಆಗಸ್ಟ್ನಲ್ಲಿ ಹೇಳಿದ್ದು, ನಿಷೇಧವು ನವೆಂಬರ್ 11ರಿಂದ ಜಾರಿಗೆ ಬಂದಿದೆ.

ಅಗ್ರ ಸರದಿಯ ಬ್ಯಾಟರ್ ಸ್ಯಾಮುಯೆಲ್ಸ್ ವೆಸ್ಟ್ಇಂಡೀಸ್ 2012 ಹಾಗೂ 2016ರಲ್ಲಿ ಟಿ-20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸುಮಾರು ಎರಡು ದಶಕಗಳ ವೃತ್ತಿಜೀವನದಲ್ಲಿ 2000 ಹಾಗೂ 2018ರ ನಡುವೆ ಸ್ಯಾಮುಯೆಲ್ಸ್ 71 ಟೆಸ್ಟ್, 207 ಏಕದಿನ ಅಂತರ್ರಾಷ್ಟ್ರೀಯ ಪಂದ್ಯಗಳು ಹಾಗೂ 67 ಟ್ವೆಂಟಿ-20 ಪಂದ್ಯಗಳಲ್ಲಿ ವೆಸ್ಟ್ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದರು. 2018ರಲ್ಲಿ ವೆಸ್ಟ್ಇಂಡೀಸ್ ಪರ ಕೊನೆಯ ಪಂದ್ಯ ಆಡಿದ್ದ ಸ್ಯಾಮುಯೆಲ್ಸ್ 2020ರಲ್ಲಿ ನಿವೃತ್ತಿ ಪ್ರಕಟಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News