ಅಮಾನತನ್ನು ಮುಂದಿನ ವಾರ ನ್ಯಾಯಾಲಯದಲ್ಲಿ ಪ್ರಶ್ನಿಸಲು ಡಬ್ಲ್ಯುಎಫ್ಐ ನಿರ್ಧಾರ
ಹೊಸದಿಲ್ಲಿ : ಕ್ರೀಡಾ ಸಚಿವಾಲಯವು ತನ್ನ ಮೇಲೆ ವಿಧಿಸಿರುವ ಅಮಾನತನ್ನು ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಮುಂದಿನ ವಾರ ನ್ಯಾಯಾಲಯದಲ್ಲಿ ಪ್ರಶ್ನಿಸಲಿದೆ. ಅದೇ ವೇಳೆ, ಮುಂದಿನ ದಾರಿಯ ಬಗ್ಗೆ ಚರ್ಚಿಸಲು ಕಾರ್ಯಕಾರಿ ಸಮಿತಿ ಸಭೆಯನ್ನು ಜನವರಿ 16ರಂದು ಕರೆದಿದೆ.
ರಾಷ್ಟ್ರೀಯ ಕ್ರೀಡಾ ಸಂಹಿತೆ ಮತ್ತು ಭಾರತೀಯ ಕುಸ್ತಿ ಫೆಡರೇಶನ್ ಸಂವಿಧಾನವನ್ನು ಉಲ್ಲಂಘಿಸಿಲಾಗಿದೆ ಎಂಬ ಕಾರಣ ನೀಡಿ ಸರಕಾರವು ನೂತನವಾಗಿ ಆಯ್ಕೆಯಾಗಿರುವ ಭಾರತೀಯ ಕುಸ್ತಿ ಫೆಡರೇಶನ್ ಆಡಳಿತ ಮಂಡಳಿಯನ್ನು ಡಿಸೆಂಬರ್ 24ರಂದು ಅಮಾನತುಗೊಳಿಸಿತ್ತು.
ತಾನು ಅಮಾನತನ್ನು ಸ್ವೀಕರಿಸುವುದೂ ಇಲ್ಲ, ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ನೇಮಿಸಿರುವ ಅಡ್-ಹಾಕ್ ಸಮಿತಿಯನ್ನು ಮಾನ್ಯ ಮಾಡುವುದೂ ಇಲ್ಲ ಎಂದು ಫೆಡರೇಶನ್ ಹೇಳಿದೆ.
ಕುಸ್ತಿ ಫೆಡರೇಶನ್ ನ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳಲು ಅಡ್-ಹಾಕ್ ಸಮಿತಿಯನ್ನು ನೇಮಿಸಲಾಗಿತ್ತು.
‘‘ನಮಗೆ ಸರಿಯಾಗಿ ಕೆಲಸ ಮಾಡುವ ಫೆಡರೇಶನ್ ಬೇಕು. ನಾವು ಮುಂದಿನ ವಾರ ನ್ಯಾಯಾಲಯಕ್ಕೆ ಹೋಗುತ್ತೇವೆ. ಈ ಅಮಾನತು ನಮಗೆ ಸ್ವೀಕೃತವಲ್ಲ. ಯಾಕೆಂದರೆ ನಾವು ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಯಾಗಿದ್ದೇವೆ. ಜನವರಿ 16ರಂದು ನಾವು ಕಾರ್ಯಕಾರಿ ಸಮಿತಿ ಸಭೆಯನ್ನೂ ಕರೆದಿದ್ದೇವೆ’’ ಎಂದು ಫೆಡರೇಶನ್ ಅಧ್ಯಕ್ಷ ಸಂಜಯ್ ಸಿಂಗ್ ಹೇಳಿದರು.