ಇದು ನನ್ನ ಪತ್ನಿಯ ಪ್ರತಿಷ್ಠೆ ಹಾಳು ಮಾಡುವ ಯತ್ನ: ತಂದೆಯ ಆರೋಪಕ್ಕೆ ರವೀಂದ್ರ ಜಡೇಜ ಪ್ರತಿಕ್ರಿಯೆ

Update: 2024-02-09 16:50 GMT

ರವೀಂದ್ರ ಜಡೇಜ | Photo: X \ @imjadeja

ಹೊಸದಿಲ್ಲಿ : ಟೀಮ್ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜ ಅವರು ಗುಜರಾತ್ ದಿನಪತ್ರಿಕೆಯೊಂದರಲ್ಲಿ ತಮ್ಮ ತಂದೆ ಅನಿರುದ್ದ್ ಸಿನ್ಹಾ ಜಡೇಜ ನೀಡಿರುವ ಸಂದರ್ಶನವನ್ನು ಶುಕ್ರವಾರ ಟೀಕಿಸಿದ್ದಾರೆ. ಆ ಸಂದರ್ಶನವು ಪೂರ್ವಯೋಜಿತ, ಅಸಂಬದ್ಧ ಹಾಗೂ ತನ್ನ ಪತ್ನಿ ರಿವಾಬಾಳನ್ನು ಕೆಟ್ಟದ್ದಾಗಿ ಬಿಂಬಿಸುವ ಪ್ರಯತ್ನ ಎಂದು ಹೇಳಿದ್ದಾರೆ.

ಪೂರ್ವಯೋಜಿತ ಸಂದರ್ಶನದಲ್ಲಿ ಏನು ಹೇಳಲಾಗಿದೆ ಎಂಬುದನ್ನು ನಿರ್ಲಕ್ಷಿಸೋಣ ಎಂದು ಗುಜರಾತ್ ಭಾಷೆಯಲ್ಲಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು x ನಲ್ಲಿ ಪೋಸ್ಟ್ ಮಾಡಿದ್ದಾರೆ.

ನನ್ನ ಮಗ ಕುಟುಂಬದೊಂದಿಗೆ ಸಂಪರ್ಕದಲ್ಲಿಲ್ಲ. ರಿವಾಬಾ ನಮ್ಮ ಕುಟುಂಬದಲ್ಲಿ ಬಿರುಕು ಸೃಷ್ಟಿಸುತ್ತಿದ್ದಾರೆ ಎಂದು ಸಂದರ್ಶನದಲ್ಲಿ ಜಡೇಜರ ಅವರ ತಂದೆ ಸಿನ್ಹಾ ಆರೋಪಿಸಿದ್ದಾರೆ.

ಜಡೇಜ ಮದುವೆಯ ನಂತರ ರವೀಂದ್ರ ರೆಸ್ಟೋರೆಂಟ್ ನ ಮಾಲಿಕತ್ವದ ಕುರಿತು ವಿವಾದವಿತ್ತು. ಆಕೆ(ರಿವಾಬಾ)ರೆಸ್ಟೋರೆಂಟ್ ನ ಮಾಲಿಕತ್ವವನ್ನು ತನ್ನ ಹೆಸರಿಗೆ ವರ್ಗಾಯಿಸಲು ಹೇಳಿದ್ದಳು. ಅದಕ್ಕಾಗಿ ಆಕೆ ದೊಡ್ಡ ಜಗಳವನ್ನು ಕೂಡ ಮಾಡಿದ್ದಳು ಎಂದು ಜಡೇಜರ ತಂದೆ ಆರೋಪಿಸಿದ್ದಾರೆ.

ನಾನು ಈಗ ಒಂಟಿಯಾಗಿ ವಾಸಿಸುತ್ತಿದ್ದೇನೆ. ತನ್ನ ಪತ್ನಿಯ 20,000 ರೂ. ಪಿಂಚಣಿಯನ್ನು ಅವಲಂಬಿಸಿದ್ದೇನೆ. ಜಡೇಜ ತನ್ನ ಸಹೋದರಿಯೊಂದಿಗೂ ಕೂಡ ಸೌಹಾರ್ದ ಸಂಬಂಧ ಇಟ್ಟುಕೊಂಡಿಲ್ಲ. ನಾನು ರವೀಂದ್ರಗೆ ಕರೆ ಮಾಡುವುದಿಲ್ಲ. ನನಗೆ ಅವನ ಅಗತ್ಯವಿಲ್ಲ, ಆತ ನನ್ನ ತಂದೆಯಲ್ಲ, ನಾನು ಆತನ ತಂದೆ. ಆತನೇ ನನಗೆ ಕರೆ ಮಾಡಬೇಕು. ಇದೆಲ್ಲವೂ ನನಗೆ ಕಣ್ಣೀರು ತರುತ್ತದೆ. ಆಕೆಯ ಸಹೋದರಿ ಕೂಡ ರಕ್ಷಾಬಂಧನದಂದು ಕಣ್ಣೀರಿಟ್ಟಿದ್ದಳು ಎಂದು ಸಂದರ್ಶನದಲ್ಲಿ ಜಡೇಜರ ತಂದೆ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ರವೀಂದ್ರ ಜಡೇಜ, ಅಸಂಬದ್ಧ ಸಂದರ್ಶನದಲ್ಲಿ ಹೇಳಿದ ಎಲ್ಲ ವಿಷಯಗಳು ಅರ್ಥಹೀನ ಹಾಗೂ ಅಸತ್ಯ. ಇದು ಏಕಪಕ್ಷೀಯ ಕತೆ. ನಾನು ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸುತ್ತೇನೆ. ನನ್ನ ಪತ್ನಿಯ ಪ್ರತಿಷ್ಠೆಗೆ ಕಳಂಕ ತರುವ ಪ್ರಯತ್ನಗಳು ನಿಜವಾಗಿಯೂ ತಪ್ಪು ಹಾಗೂ ಯೋಗ್ಯವಾದುದಲ್ಲ. ನನಗೂ ಹೇಳಲು ಬಹಳಷ್ಟಿದೆ. ಆದರೆ ಅದನ್ನು ಸಾರ್ವಜನಿಕವಾಗಿ ಹೇಳಲಾರೆ ಎಂದರು.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News