ಈ ಋತುವು ನಮಗೆಲ್ಲರಿಗೂ ನಿರಾಶೆ ತಂದಿದೆ | ʼಮುಂಬೈ ಇಂಡಿಯನ್ಸ್ʼ ಉದ್ದೇಶಿಸಿ ನೀತಾ ಅಂಬಾನಿ ಮಾತು

Update: 2024-05-21 15:47 GMT

ನೀತಾ ಅಂಬಾನಿ |  PC :  X \ @mipaltan

ಮುಂಬೈ: 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯನ್ನು ಮುಂಬೈ ಇಂಡಿಯನ್ಸ್ ತಂಡವು 10 ತಂಡಗಳ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದೊಂದಿಗೆ ಮುಕ್ತಾಯಗೊಳಿಸಿದೆ. ಅದು 14 ಪಂದ್ಯಗಳನ್ನು ಆಡಿದ್ದು 10ರಲ್ಲಿ ಜಯ ಗಳಿಸಿದೆ ಮತ್ತು ನಾಲ್ಕರಲ್ಲಿ ಸೋತಿದೆ ಹಾಗೂ 8 ಅಂಕಗಳನ್ನು ಗಳಿಸಿದೆ.

ಹಾಲಿ ಋತುವಿನಲ್ಲಿ ತಂಡದ ನಾಯಕತ್ವವನ್ನು ರೋಹಿತ್ ಶರ್ಮ ರಿಂದ ಹಾರ್ದಿಕ್ ಪಾಂಡ್ಯ ವಹಿಸಿಕೊಂಡರು. ಮುಂಬೈ ಇಂಡಿಯನ್ಸ್ ತಂಡದ ಆಡಳಿತದ ಈ ನಿರ್ಧಾರವು ಪಂದ್ಯಾವಳಿಯ ಉದ್ದಕ್ಕೂ ಸುದ್ದಿಯಾಗಿತ್ತು.

ಪಂದ್ಯಾವಳಿಯಿಂದ ಹೊರಬಿದ್ದ ಬಳಿಕ, ಇತ್ತೀಚೆಗೆ ತಂಡದ ಮಾಲಕಿ ನೀತಾ ಅಂಬಾನಿ ತಂಡದ ಸದಸ್ಯರಿಗೆ ಸತ್ಕಾರ ಕೂಟವೊಂದನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಋತುವು ಎಲ್ಲರಿಗೂ ನಿರಾಶೆ ತಂದಿದೆ ಎಂದು ಹೇಳಿದರು.

ಹಿಂದಕ್ಕೆ ಹೋಗಿ ಈ ಋತುವಿನಲ್ಲಿ ಏನು ತಪ್ಪಾಗಿದೆ ಎನ್ನುವುದನ್ನು ವಿಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಅವರು ನುಡಿದರು. ತಂಡದ ಸದಸ್ಯರನ್ನು ಉದ್ದೇಶಿಸಿ ನೀತಾ ಅಂಬಾನಿ ಮಾತನಾಡಿರುವ ವೀಡಿಯೊವೊಂದನ್ನು ಮುಂಬೈ ಇಂಡಿಯನ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

“ಇದು ಎಲ್ಲರಿಗೂ ನಿರಾಶೆ ತಂದಿರುವ ಋತುವಾಗಿದೆ. ಏನಾಗಬೇಕೆಂದು ನಾವು ಬಯಸಿದ್ದೇವೆಯೋ ಹಾಗೆ ಆಗಲಿಲ್ಲ. ಆದರೆ, ನಾನು ಈಗಲೂ ಮುಂಬೈ ಇಂಡಿಯನ್ಸ್ ತಂಡದ ದೊಡ್ಡ ಅಭಿಮಾನಿ. ಕೇವಲ ಮಾಲಕಿ ಮಾತ್ರವಲ್ಲ. ಮುಂಬೈ ಇಂಡಿಯನ್ಸ್ ಜೊತೆಗೆ ಒಡನಾಟ ಹೊಂದಿರುವುದು ನನ್ನ ಭಾಗ್ಯವಾಗಿದೆ ಮತ್ತು ನನಗೆ ಸಿಕ್ಕ ಗೌರವವಾಗಿದೆ. ಈ ವರ್ಷ ಏನು ತಪ್ಪಾಯಿತು ಎನ್ನುವ ಬಗ್ಗೆ ನಾವೆಲ್ಲರೂ ವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ನನಗನಿಸುತ್ತದೆ’’ ಎಂದು ನೀತಾ ಅಂಬಾನಿ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ, ತಂಡದ ಪ್ರಧಾನ ಆಟಗಾರರಾದ ರೋಹಿತ್ ಶರ್ಮ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾರಿಗೆ ಅವರೊಂದು ಸಂದೇಶವನ್ನೂ ನೀಡಿದ್ದಾರೆ.

“ರೋಹಿತ್, ಹಾರ್ದಿಕ್, ಸೂರ್ಯ ಮತ್ತು ಬುಮ್ರಾರಿಗೆ, ಎಲ್ಲಾ ಭಾರತೀಯರು ನಿಮ್ಮನ್ನು ಬೆಂಬಲಿಸುತ್ತಿದ್ದಾರೆ ಎಂದು ನನಗನಿಸುತ್ತದೆ. ನಾವು ನಿಮಗೆ ಶುಭ ಹಾರೈಸುತ್ತೇವೆ’’ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News