ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನಕ್ಕೆ ನಾಳೆ ಮಾಡು-ಮಡಿ ಪಂದ್ಯ

Update: 2023-10-30 16:02 GMT

Photo: cricketworldcup.com

ಕೋಲ್ಕತಾ: ಈಗ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಸೆಮಿ ಫೈನಲ್ ಸ್ಫರ್ಧೆಯಿಂದ ಬಹುತೇಕ ಹೊರಗುಳಿದಿರುವ ಪಾಕಿಸ್ತಾನ ತಂಡ ಈಡನ್‌ ಗಾರ್ಡನ್ಸ್‌ನಲ್ಲಿ ಮಂಗಳವಾರ ನಡೆಯಲಿರುವ ಮಾಡು-ಮಡಿ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮುಖಾಮುಖಿಯಾಗಲಿದ್ದು, ಸತತ ಸೋಲಿನಿಂದ ಹೊರ ಬರುವ ವಿಶ್ವಾಸದಲ್ಲಿದೆ.

ಸತತ ನಾಲ್ಕು ಪಂದ್ಯಗಳಲ್ಲಿ ಸೋತಿರುವ ಪಾಕಿಸ್ತಾನವು ಟೂರ್ನಮೆಂಟ್‌ನಿಂದ ನಿರ್ಗಮಿಸುವ ಹಾದಿಯಲ್ಲಿದೆ. ಶುಕ್ರವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 1 ವಿಕೆಟ್‌ನಿಂದ ವೀರೋಚಿತ ಸೋಲುಂಡಿರುವ ಪಾಕ್ ತಂಡ ಸದ್ಯ ಅಂಕಪಟ್ಟಿಯಲ್ಲಿ 6 ಪಂದ್ಯಗಳಲ್ಲಿ 4 ಅಂಕ ಗಳಿಸಿ ಆರನೇ ಸ್ಥಾನದಲ್ಲಿದೆ. ಲೀಗ್ ಹಂತ ಮುಗಿಯುವ ವೇಳೆಗೆ ಗರಿಷ್ಠ 10 ಅಂಕ ಗಳಿಸುವ ವಿಶ್ವಾಸದಲ್ಲಿದೆ.

ನಾಕೌಟ್ ಹಂತದಲ್ಲಿ ಸ್ಥಾನ ಪಡೆಯಲು ಮಾಜಿ ಚಾಂಪಿಯನ್ ಪಾಕ್ ಕಠಿಣ ಸವಾಲು ಎದುರಿಸುತ್ತಿದೆ. ಆಸ್ಟ್ರೇಲಿಯ ಗೆಲುವಿನ ಲಯಕ್ಕೆ ಮರಳಿದ್ದು, ನ್ಯೂಝಿಲ್ಯಾಂಡ್ ಉತ್ತಮ ಪ್ರದರ್ಶನ ನೀಡುತ್ತಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿವೆ. ಪಾಕಿಸ್ತಾನ ಮುಂದಿನ ಸುತ್ತಿಗೇರುವ ಅಲ್ಪ ವಿಶ್ವಾಸವನ್ನು ಉಳಿಸಿಕೊಳ್ಳಲು ಗೆಲುವಿನ ಜೊತೆಗೆ ನೆಟ್ ರನ್‌ರೇಟ್ ಹೆಚ್ಚಿಸಿಕೊಳ್ಳಬೇಕಾಗಿದೆ. ಒಂದು ವೇಳೆ ಬಾಂಗ್ಲಾ ವಿರುದ್ಧ ಸೋತರೆ ಪಾಕಿಸ್ತಾನದ ವಿಶ್ವಕಪ್ ಪಯಣ ಅಂತ್ಯವಾಗುವುದರಲ್ಲಿ ಅನುಮಾನವಿಲ್ಲ.

ಪಾಕಿಸ್ತಾನವು 6 ಪಂದ್ಯಗಳ ಪೈಕಿ ನಾಲ್ಕರಲ್ಲಿ ಸಂಪೂರ್ಣ 50 ಓವರ್ ಬ್ಯಾಟಿಂಗ್ ಮಾಡುವಲ್ಲಿಯೂ ವಿಫಲವಾಗಿದೆ. ಎಲ್ಲರ ಚಿತ್ತ ನಾಯಕ ಬಾಬರ್ ಆಝಂ ಮೇಲಿದೆ. ಅವರು 3 ಬಾರಿ ಅರ್ಧಶತಕ ಗಳಿಸಿದ್ದು, ತನ್ನ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸಲು ಎದುರು ನೋಡುತ್ತಿದ್ದಾರೆ.

ಮತ್ತೊಂದೆಡೆ ನೆದರ್‌ಲ್ಯಾಂಡ್ಸ್ ವಿರುದ್ಧ 87 ರನ್‌ನಿಂದ ಸೋತಿರುವ ಶಕೀಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾದೇಶ ಈ ತನಕ ಆಡಿರುವ 6 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಜಯ ಸಾಧಿಸಿದೆ. ತೀವ್ರ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿದೆ. ಸದ್ಯ 2 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

ಪಿಚ್ ರಿಪೋರ್ಟ್

ಈಡನ್‌ಗಾರ್ಡನ್ಸ್‌ನ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಪಂದ್ಯ ಮುಂದುವರಿದಂತೆ ಪಿಚ್ ಮಂದಗತಿಯಲ್ಲಿ ವರ್ತಿಸಲಿದ್ದು, ಬ್ಯಾಟಿಂಗ್ ಕಷ್ಟಕರವಾಗಲಿದೆ. ಈ ಮೈದಾನದಲ್ಲಿ ಇತ್ತೀಚೆಗೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನೆದರ್‌ಲ್ಯಾಂಡ್ಸ್ ತಂಡ ಒಟ್ಟು 229 ರನ್ ಗಳಿಸಿತ್ತು. ಆ ನಂತರ ಬಾಂಗ್ಲಾದೇಶವನ್ನು 142 ರನ್‌ಗೆ ಆಲೌಟ್ ಮಾಡಿತ್ತು. ಈ ಮೈದಾನದಲ್ಲಿ ಕಳೆದ 10 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ್ದ ತಂಡ ಗಳಿಸಿರುವ ಸರಾಸರಿ ಸ್ಕೋರ್ 289. ಈ ಸ್ಟೇಡಿಯಮ್‌ನಲ್ಲಿ ಮೊದಲು ಬ್ಯಾಟಿಂಗ್‌ಗೆ ಆದ್ಯತೆ ನೀಡಲಾಗುತ್ತದೆ. ಮೊದಲು ಬ್ಯಾಟಿಂಗ್ ಮಾಡಿದ್ದ ತಂಡವೇ ಹೆಚ್ಚು ಬಾರಿ ಸ್ಪರ್ಧೆಯಲ್ಲಿ ಜಯಶಾಲಿಯಾಗಿದೆ.

► ಪ್ರಮುಖ ಆಟಗಾರರು

► ಮುಹಮ್ಮದ್ ರಿಝ್ವಾನ್: ಪಾಕಿಸ್ತಾನದ ಬ್ಯಾಟರ್ ಮುಹಮ್ಮದ್ ರಿಝ್ವಾನ್ ಪ್ರಸಕ್ತ ವಿಶ್ವಕಪ್‌ನಲ್ಲಿ 66ರ ಸರಾಸರಿಯಲ್ಲಿ 6 ಪಂದ್ಯಗಳಲ್ಲಿ ಒಟ್ಟು 333 ರನ್ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ ಔಟಾಗದೆ 131.

► ಮಹ್ಮದುಲ್ಲಾ: ಬಾಂಗ್ಲಾದೇಶದ ಮಹ್ಮದುಲ್ಲಾ 5 ಪಂದ್ಯಗಳಲ್ಲಿ 218 ರನ್ ಗಳಿಸಿದ್ದಾರೆ. ಈ ಆವೃತ್ತಿಯ ವಿಶ್ವಕಪ್‌ನಲ್ಲಿ ತನ್ನ ತಂಡದ ಪರ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ. ಈ ತನಕ ಒಂದು ಶತಕ ಗಳಿಸಿದ್ದಾರೆ.

► ಶಾಹೀನ್ ಅಫ್ರಿದಿ: ಪಾಕಿಸ್ತಾನದ ಬೌಲರ್ ಅಫ್ರಿದಿ 6 ಪಂದ್ಯಗಳಲ್ಲಿ ಒಟ್ಟು 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಟೂರ್ನಮೆಂಟ್‌ನಲ್ಲಿ ಅಫ್ರಿದಿ ಅವರ ಶ್ರೇಷ್ಠ ಸ್ಪೆಲ್ 5/54.

► ಶರೀಫುಲ್ ಇಸ್ಲಾಮ್: ಬಾಂಗ್ಲಾದೇಶದ ಬೌಲರ್ ಶರೀಫುಲ್ ಇಸ್ಲಾಮ್ ಈ ತನಕ ಆರು ಪಂದ್ಯಗಳಲ್ಲಿ ಒಟ್ಟು 8 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 3/75 ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಶರೀಫುಲ್ ಅವರ ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿದೆ.

► ಏಕದಿನ ಕ್ರಿಕೆಟ್‌ನಲ್ಲಿ ಪಾಕ್-ಬಾಂಗ್ಲಾದೇಶ ಹೆಡ್-ಟು-ಹೆಡ್

ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಏಕದಿನ ಕ್ರಿಕೆಟ್‌ನಲ್ಲಿ ಈ ತನಕ 38 ಬಾರಿ ಮುಖಾಮುಖಿಯಾಗಿವೆ. ಪಾಕಿಸ್ತಾನ 33 ಪಂದ್ಯಗಳಲ್ಲಿ ಜಯಶಾಲಿಯಾಗಿದೆ. ಬಾಂಗ್ಲಾದೇಶ ಕೇವಲ 5 ಬಾರಿ ಗೆಲುವು ಸಾಧಿಸಿದೆ.

ಹಿಂದಿನ 5 ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ 2 ಬಾರಿ ಜಯ ಸಾಧಿಸಿದ್ದರೆ, ಬಾಂಗ್ಲಾದೇಶ 3 ಬಾರಿ ಜಯ ಸಾಧಿಸಿದೆ. ಈ 5 ಪಂದ್ಯಗಳಲ್ಲಿ ಗರಿಷ್ಠ ಸ್ಕೋರನ್ನು ಪಾಕಿಸ್ತಾನ (315 ರನ್)ಗಳಿಸಿದೆ. ಬಾಂಗ್ಲಾದೇಶ ಕನಿಷ್ಠ ಸ್ಕೋರ್(193 ರನ್)ಗಳಿಸಿದೆ.

ವಿಶ್ವಕಪ್‌ನಲ್ಲಿ ಎರಡೂ ತಂಡಗಳು ಸವಾಲುಗಳನ್ನು ಎದುರಿಸುತ್ತಿವೆ. ಪಾಕಿಸ್ತಾನ ಗೆಲುವಿಗಾಗಿ ಪರದಾಟ ನಡೆಸುತ್ತಿದೆ. ಬಾಂಗ್ಲಾದೇಶ ಹೆಚ್ಚು ಪ್ರತಿರೋಧ ತೋರದೇ ಶರಣಾಗುತ್ತಿದೆ.

ಇತ್ತೀಚೆಗಿನ ಮುಖಾಮುಖಿಯಲ್ಲಿ ಬಾಂಗ್ಲಾದೇಶ ತಂಡ ಮೂರು ಬಾರಿ ಪಾಕಿಸ್ತಾನವನ್ನು ಸೋಲಿಸಿದೆ. ಈಗಿನ ಫಾರ್ಮನ್ನು ಪರಿಗಣಿಸಿದರೆ ಮಂಗಳವಾರದ ಪಂದ್ಯದಲ್ಲಿ ಪಾಕ್ ತಂಡವು ಬಾಂಗ್ಲಾ ಟೈಗರ್ಸ್ ವಿರುದ್ಧ ಸ್ವಲ್ಪ ಮೇಲುಗೈ ಸಾಧಿಸುವಂತೆ ಕಂಡುಬರುತ್ತಿದೆ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News